ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸನ್ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಲು ಸ್ಕೌಟ್ ಸಹಕಾರಿ- ವೈ.ಗಣೇಶ್

ಶಿವಮೊಗ್ಗ: ಜೀವನದ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ. ಬಾಲ್ಯದಿಂದಲೇ ಸೇವಾ ಮನೋಭಾವನೆ ವೃದ್ಧಿಸಲು ನೆರವಾಗುತ್ತದೆ ಎಂದು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಹೇಳಿದರು.
ಹುಂಚದ ಅತಿಶಯ ಕ್ಷೇತ್ರ ಹೊಂಬುಜ ದೇವಸ್ಥಾನದ ಆವರಣದಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ಸ್ಕೌಟ್ ಗೈಡ್, ಕಬ್, ಬುಲ್ ಗೈಡ್, ಕ್ಯಾಪ್ಟನ್, ಸ್ಕೌಟ್ ಮಾಸ್ಟರ್, ಬುಲ್, ಫ್ಲಾಕ್ ಲೀಡರ್ ಗಳಿಗೆ ಏಳು ದಿನಗಳ ಕಾಲ ಜಿಲ್ಲಾ ಮಟ್ಟದ ಮೂಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ 211 ದೇಶಗಳಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದೆ. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಎಲ್ಲ ವಯೋಮಾನದವರಿಗೂ ಶಿಸ್ತು ಹಾಗೂ ಜೀವನದ ಕ್ರಮ ಕಲಿಸುವುದರ ಜೊತೆಗೆ ಮಾನವೀಯ ಗುಣಗಳ ಅರಿವು ಮೂಡಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಮೂಲ ಉದ್ದೇಶ ಪ್ರತಿಯೊಂದು ಮನೆಮನೆಗೂ ಸಹ ಸ್ಕೌಟ್ ಅಂಡ್ ಗೈಡ್ಸ್ ತಲುಪಬೇಕು. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಸ್ಕೌಟ್ ದಳಗಳು ರಚನೆಯಾಗುವುದರ ಮುಖಾಂತರ ಸ್ಕೌಟ್ ಸೇವೆ ಎಲ್ಲರನ್ನೂ ತಲುಪಬೇಕು. ವ್ಯಕ್ತಿಗಳು ಪರಿಪೂರ್ಣತೆ ಹೊಂದಲು ಸ್ಕೌಟ್ ಅಂಡ್ ಗೈಡ್ಸ್ ತರಬೇತಿ ಅತಿ ಮುಖ್ಯವಾಗಿರುತ್ತದೆ. ತರಬೇತಿ ಪಡೆದ ಪ್ರತಿಯೊಬ್ಬ ಶಿಕ್ಷಕರು ಮುಂದಿನ ದಿನಗಳಲ್ಲಿ ಸ್ಕೌಟ್ ಘಟಕಗಳನ್ನು ಸ್ಥಾಪಿಸಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಪದ್ಮಾಂಬ ಪ್ರೌಢಶಾಲೆ ಮುಖ್ಯ ಶಿಕ್ಷಕ ವೈ.ಪ್ರಹ್ಲಾದ ರಾವ್ ಮಾತನಾಡಿ, ನಾನು 30 ವರ್ಷದಿಂದ ಸ್ಕೌಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ವ್ಯಕ್ತಿತ್ವ ಅತ್ಯುತ್ತಮವಾಗಿ ನಿರ್ಮಾಣವಾಗಲು ಸಹಕಾರಿಯಾಗಿದೆ. ಸ್ಕೌಟ್ ಅಂಡ್ ಗೈಡ್ಸ್ ನಮಗೆ ಜೀವನದ ಕಲೆಯನ್ನು ಹಾಗೂ ಸ್ವತಂತ್ರವಾಗಿ ಬದುಕುವ ದಾರಿಯನ್ನು ಆತ್ಮವಿಶ್ವಾಸವನ್ನ ಮೂಡಿಸುತ್ತದೆ ಎಂದು ಹೇಳಿದರು.
ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಮುಖ್ಯ ಪಾತ್ರ ವಹಿಸುತ್ತದೆ. ತರಬೇತಿ ಪಡೆದರೆ ಸಾಲದು ಅದನ್ನು ಕಾರ್ಯಗತಗೊಳಿಸಬೇಕು. ಘಟಕಗಳನ್ನು ಸ್ಥಾಪಿಸಲು ಜಿಲ್ಲಾ ಸಂಸ್ಥೆ ವತಿಯಿಂದ ಸಂಪೂರ್ಣವಾದ ಸಹಕಾರವನ್ನು ನೀಡುತ್ತೇವೆ ಎಂದು ನುಡಿದರು.
ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತ ಕೆ.ಪಿ.ಬಿಂದು ಕುಮಾರ್ ಮಾತನಾಡಿ, ಸಂಸ್ಥೆ ಬೆಳೆದು ಬಂದAತಹ ದಾರಿ ಹಾಗೂ ಬೆಳವಣಿಗೆ, ಮಕ್ಕಳಿಗೆ ತಲುಪಿಸುವಲ್ಲಿ ರಾಷ್ಟ್ರೀಯ ಸಂಸ್ಥೆ ಮತ್ತು ಪ್ರಪಂಚದ ವಿಶ್ವಸಂಸ್ಥೆ ಪಾತ್ರ ಕುರಿತು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಪ್ರೋತ್ಸಾಹಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಸ್ಕೌಟ್ ಅಂಡ್ ಗೈಡ್ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಮನುಕುಲದ ಸೇವೆಯಲ್ಲಿ ಸ್ಕೌಟ್ ಪಾತ್ರ ತುಂಬಾ ದೊಡ್ಡದು. ಎಲ್ಲರೂ ಈ ಚಳವಳಿಯಲ್ಲಿ ಕೈಜೋಡಿಸಬೇಕು ಎಂದು ನುಡಿದರು.
ಶಿಬಿರದಲ್ಲಿ ಕಾರ್ಯದರ್ಶಿ ಎಚ್.ಪರಮೇಶ್ವರ್, ಖಜಾಂಚಿ ಚೂಡಾಮಣಿ ಈ ಪವಾರ್, ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷ್ಮೀ ಕೆ ರವಿ, ತರಬೇತಿಯ ಆಯುಕ್ತ ಹೆಚ್ ಶಿವಶಂಕರ್, ಗೀತಾ ಚಿಕ್ ಮಠ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಯಾಸ್, ಸಿಎಂ ಪರಮೇಶ್ವರಯ್ಯ, ಸಂಧ್ಯಾ ರಾಣಿ, ರಾಧಿಕಾ, ಮೀನಾಕ್ಷಮ್ಮ, ಮಲ್ಲಿಕಾರ್ಜುನ್ ಕಾನೂರು, ಜಿಲ್ಲಾ ಸ್ಥಾನಿಕ ಆಯುಕ್ತ ಕೆ ರವಿ. ಉಪಸ್ಥಿತರಿದ್ದರು.

Related posts

ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ? ಚಾಟಿ ಬೀಸಿದ ಸಚಿವ ಹೆಚ್.ಸಿ ಮಹದೇವಪ್ಪ. 

ನನ್ನ ಮಣ್ಣು, ನನ್ನ ದೇಶ” ಅಭಿಯಾನಕ್ಕೆ ಚಾಲನೆ

44 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಎಲ್ಲೆಡೆ  ಭದ್ರತೆ ಒದಗಿಸಲು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.