ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಎಂತಹ ಮಾತೃಭಾಷಾಭಿಮಾನ: ಕನ್ನಡದಲ್ಲೇ ನೋಂದಣಿ: ಕನ್ನಡಿಗನ ಹಠಕ್ಕೆ ಮಣಿದ ನೋಂದಣಿ ಇಲಾಖೆ.

ಕೊಪ್ಪಳ  : ಬೇರೆ ರಾಜ್ಯಗಳ ಜನರ ಹಾವಳಿಯಿಂದ ರಾಜ್ಯದಲ್ಲಿ ಕನ್ನಡ ಬಿಟ್ಟು ತಮ್ಮ ಭಾಷೆಯಲ್ಲೇ ಮಾತನಾಢುತ್ತಾರೆ. ಕೆಲವರು ಕನ್ನಡವನ್ನೂ ಕಲಿಯಲ್ಲ. ಹಾಗೆಯೇ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಆಡಳಿತ ನಡೆಸಬೇಕು ಎಂದು ಹೇಳುವ ಸರ್ಕಾರ ಇದುವರೆಗೂ ಅಚ್ಚಕನ್ನಡದಲ್ಲಿ ಆಡಳಿತ ನಡೆಸಲು ಆಗುತ್ತಿಲ್ಲ. ಆದರೆ, ಹಠಯೋಗಿ ವೀರಕನ್ನಡಿಗ ಶರಣಪ್ಪ ಹೂಗಾರ ಅದನ್ನು ಸಾಧಿಸಿ ತೋರಿಸಿದ್ದಾರೆ.

ಇವರ ಕನ್ನಡ ಪ್ರೇಮಕ್ಕೆ ಕುಷ್ಟಗಿ ನೋಂದಣಿ ಇಲಾಖೆಯ ಅಧಿಕಾರಿಗಳೇ ಮಣಿದಿದ್ದಾರೆ. ಅವರು ಮಾರಾಟ ಮಾಡಿದ ನಿವೇಶನವೊಂದನ್ನು ಅಚ್ಚ ಕನ್ನಡದಲ್ಲೇ (ಅಂಕೆಸಂಖ್ಯೆಗಳೂ ಸೇರಿ) ನೋಂದಾಯಿಸಿ ಕೊಟ್ಟಿದ್ದಾರೆ. ತಮ್ಮ ಮನೆಯನ್ನು ಕನ್ನಡದ ಮನೆ ಎನ್ನುವಂತೆ ಅವರು ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ‘ಭುವನೇಶ್ವರಿ ನಿಲಯ’ ಎಂದು ಹೆಸರಿಟ್ಟಿದ್ದಾರೆ. ಈಗ ಕುಷ್ಟಗಿಯಲ್ಲಿ ತಾವೇ ನಿರ್ಮಿಸಿದ ಬಡಾವಣೆಗೆ ‘ಕನ್ನಡ ನಗರ’ ಎಂದು ನಾಮಕರಣ ಮಾಡಿದ್ದಾರೆ. ಬಡಾವಣೆæಯಲ್ಲಿ ನಿವೇಶನಗಳನ್ನು ಕನ್ನಡದಲ್ಲಿಯೇ ಬರೆದಿದ್ದಾರೆ. ಬಡಾವಣೆಯ ನಿವೇಶನ ಮಾರಾಟ ಮಾಡಿದ ಮೇಲೆ ಅವುಗಳನ್ನು ಕನ್ನಡದಲ್ಲೇ ನೋಂದಣಿ ಮಾಡಿಸಿಕೊಡುತ್ತಿದ್ದಾರೆ. ಆಂಗ್ಲ ಸೇರಿದಂತೆ ಇನ್ನಾವುದೇ ಪದ ಬಳಸದೇ ಅಚ್ಚಗನ್ನಡದಲ್ಲೇ ನೋಂದಣಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ – ಶರಣಪ್ಪ ಹೂಗಾರ, ಸರ್ಕಾರ ಕನ್ನಡದಲ್ಲೇ ಆಡಳಿತ ನಡೆಸಬೇಕಾಗಿದ್ದರೂ ಅದನ್ನು ಮಾಡುತ್ತಿಲ್ಲ. ಆದರೂ ನನ್ನ ಹೋರಾಟ ಮುಂದುವರಿಸಿದ್ದೇನೆ. ನಿವೇಶನ ನೋಂದಣಿ ವೇಳೆ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಯ ಪದ ಬಳಸದಂತೆ ನೋಂದಣಿ ಮಾಡಿಸಿದ್ದೇನೆ. ಮೊದಲು ಇದಕ್ಕೆ ಅಧಿಕಾರಿಗಳು ಸಾಧ್ಯವೇ ಇಲ್ಲ ಎಂದಿದ್ದರು. ಕೊನೆಗೆ ಮಾಡಿಕೊಟ್ಟಿದ್ದಾರೆ.

ಕನ್ನಡದಲ್ಲೇ ನೋಂದಣಿ:

ಇವರು ತಮ್ಮ ಬಡಾವಣೆಯ ನಿವೇಶನಗಳಲ್ಲಿ ಕೆಲವೊಂದನ್ನು ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟ ಮಾಡಿದ ನಿವೇಶನಗಳ ನೋಂದಣಿಯನ್ನು ಸಂಪೂರ್ಣ ಕನ್ನಡದಲ್ಲಿಯೇ ಮಾಡಬೇಕು ಎಂದು ನೋಂದಣಿ ಇಲಾಖೆಯಲ್ಲಿ ಪಟ್ಟುಹಿಡಿದಿದ್ದರು. ಇದು ಆಗದ ಕೆಲಸ, ಕಂಪ್ಯೂಟರ್ ಕೂಡ ಸಹಕರಿಸುವುದಿಲ್ಲ ಎಂದು ಸಿಬ್ಬಂದಿ ತಗಾದೆ ತೆಗೆದಿದ್ದರು. ಹಾಗಂತ ನನಗೆ ಬರೆದುಕೊಡಿ ಎಂದು ಶರಣಪ್ಪ ಹೂಗಾರ ಪಟ್ಟು ಹಿಡಿದಾಗ ಅಧಿಕಾರಿಗಳು ದಿಗ್ಭ್ರಮೆಗೊಂಡರು.

ಪಟ್ಟು ಬಿಡದ ಹೂಗಾರ ಕನ್ನಡದಲ್ಲೇ ನೋಂದಾಯಿಸಿ, ಇಲ್ಲವೇ ಬರೆದುಕೊಡಿ ಎಂದು ಪದೇಪದೇ ಕಚೇರಿಗೆ ಸುತ್ತಾಡಿದಾಗ ಇಲಾಖೆಯ ಅಧಿಕಾರಿಗಳು ಮಣಿದು ಕನ್ನಡದಲ್ಲೇ ನೋಂದಣಿ ಪತ್ರ ಮಾಡಿದ್ದಾರೆ. ಇದಕ್ಕಾಗಿ ಇಡೀ ದಿನ ಸಿಬ್ಬಂದಿ ಹೆಣಗಾಡಿದೆ. ಈಗ ಅಚ್ಚಗನ್ನಡದಲ್ಲೇ ನೋಂದಣಿ ಮಾಡಿಸಿಕೊಟ್ಟಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶರಣಪ್ಪ ಹೂಗಾರ.

ಇವರು ಈ ಹಿಂದೆ ಕನ್ನಡಕ್ಕಾಗಿ ನೌಕರಿ ಕಳೆದುಕೊಂಡಿದ್ದರು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ತಾವು ನಿರ್ವಹಿಸುತ್ತಿದ್ದ ಪ್ರತಿ ಪದವನ್ನು ಕನ್ನಡದಲ್ಲಿಯೇ ಬರೆಯುತ್ತಿದ್ದರು. ಇದು ಮೇಲಧಿಕಾರಿಗಳಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಆಗ ಇವರನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದರು. ಪ್ರಾರಂಭದಲ್ಲಿ ಕೊಪ್ಪಳದಲ್ಲಿದ್ದ ಇವರು ನಂತರ ಬಳ್ಳಾರಿ, ಹೊಸಪೇಟೆ ಸೇರಿದಂತೆ ಹತ್ತಾರು ಕಡೆ ವರ್ಗಾವಣೆಯಾದರು. ಆದರೂ ಹಠ ಬಿಡದ ಇವರು ತಮ್ಮ ಕನ್ನಡತನ ಬಿಡಲಿಲ್ಲ. ಹೋದಲ್ಲೆಲ್ಲ ಕನ್ನಡ, ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದರು. ಕೊನೆಗೆ ಮೇಲಧಿಕಾರಿಗಳು ಇವರನ್ನು 2018ರಲ್ಲಿ ವಜಾ ಮಾಡಿದರು. ಆಗ ಹೈಕೋರ್ಚ್ ಮೊರೆ ಹೋಗಿದ್ದರು. ಅಚ್ಚಗನ್ನಡ ಬಳಸಿದ್ದಕ್ಕಾಗಿ ವಜಾ ಮಾಡಿದ್ದನ್ನು ಕೇಳಿ ಈಶಾನ್ಯ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿಗೆ ಕೋರ್ಚ್ ಛೀಮಾರಿ ಹಾಕಿತ್ತು. ಸರ್ಕಾರ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅದನ್ನು ನಾವು, ನೀವೆಲ್ಲ ಬೆಂಬಲಿಸಬೇಕು. ಕೂಡಲೇ ಅವರನ್ನು ಮುಂದುವರೆಸಿ, ಇಲ್ಲದಿದ್ದರೆ ನಿಮ್ಮನ್ನು ವಜಾ ಮಾಡಬೇಕಾಗುತ್ತದೆ ಎಂದು ತಾಕೀತು ಮಾಡಿತ್ತು. ಪರಿಣಾಮ ನೌಕರಿಯಲ್ಲಿ ಮುಂದುವರೆದು, 2021ರಲ್ಲಿ ನಿವೃತ್ತಿಯಾಗಿದ್ದಾರೆ.

 

Related posts

ಬಿಜೆಪಿ ನಾಯಕರು ದೆಹಲಿಗೆ ಹೋಗಿ ಪ್ರಧಾನಿಗೆ ಒತ್ತಡ  ಹೇರಲಿ- ಡಿಸಿಎಂ ಡಿ.ಕೆ ಶಿವಕುಮಾರ್ ಲೇವಡಿ.

ಜಗತ್ತಿನ ಎಲ್ಲಾ ಧರ್ಮಗಳೂ ಶಾಂತಿಯನ್ನೇ ಬೋಸುತ್ತವೆ-ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

7ನೇ ವೇತನ ಆಯೋಗ: ಸೆಪ್ಟೆಂಬರ್ 3ನೇ ವಾರದಲ್ಲಿ ಡಿಎ ಹೆಚ್ಚಳ ಘೋಷಣೆ ಸಾಧ್ಯತೆ.