ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

21ನೇ ಶತಮಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಾಚಿಕೆಯಾಗಬೇಕು-ಡಾ ಅಕ್ಕಯ್ಯ ಪದ್ಮಶಾಲಿ

ಶಿವಮೊಗ್ಗ: 21ನೇ ಶತಮಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಿರುವುದಕ್ಕೆ ನಾಚಿಕೆಯಾಗಬೇಕು. ಅದರಲ್ಲೂ ಲೈಂಗಿಕ ಅಲ್ಪಸಂಖ್ಯಾತರ ದೌರ್ಜನ್ಯ ಇಡೀ ವಿಶ್ವವೇ ತಲೆ ತಗ್ಗಿಸುವಂತದ್ದು ಎಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ ಅಕ್ಕಯ್ಯ ಪದ್ಮಶಾಲಿ ಹೇಳಿದರು.
ಅವರು ಇಂದು ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ (ಎಸ್‍ಎಂಎಸ್‍ಎಸ್‍ಎಸ್) ಸೊಸೈಟಿಯ 35ನೇ ವಾರ್ಷಿಕೋತ್ಸವ ಹಾಗೂ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ದಶಮಾನೋತ್ಸವ ಸಮಾರಂಭದಲ್ಲಿ ಚೈತನ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಅರ್ಧ ನಾರೀಶ್ವರನನ್ನು ಪೂಜಿಸುವ ನಮ್ಮ ಸಮಾಜ ಲೈಂಗಿಕ ಅಲ್ಪಸಂಖ್ಯಾತರನ್ನು ಏಕೆ ಕಡೆಗಣಿಸುತ್ತಿದೆ. ಎಲ್ಲಿದೆ ಮಹಿಳಾ ಸಬಲೀಕರಣ, ಎಲ್ಲಿದೆ ಹೆಣ್ಣು ಮಕ್ಕಳಿಗೆ ರಾಜಕೀಯ ಸ್ಥಾನಮಾನ, ಎಲ್ಲಿ ಹೋದವು ನಮ್ಮ ಧರ್ಮ ಗ್ರಂಥಗಳು. ಹೆಣ್ಣಿನ ಬಗ್ಗೆ ಇರುವ ಎಲ್ಲಾ ವ್ಯಾಖ್ಯಾನಗಳನ್ನು ಮತ್ತೊಮ್ಮೆ ಮರುವ್ಯಾಖ್ಯಾನಿಸಬೇಕಾಗಿದೆ. ಕೌಟುಂಬಿಕ ದೌರ್ಜನ್ಯ, ಸರ್ಕಾರದ ಧೋರಣೆ, ಲೈಂಗಿಕ ಅಲ್ಪ ಸಂಖ್ಯಾತರು ಹಸಿವಿಗಾಗಿ ಮಾಡುವ ಭಿಕ್ಷಾಟನೆ, ದೇಹ ಮಾರಿಕೊಳ್ಳುವ ಪರಿಸ್ಥಿತಿ ನೋಡಿದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿದೆ ಎಂದು ಗೊತ್ತಾಗುತ್ತದೆ ಎಂದರು.
ಯಾವ ಧರ್ಮ ಗ್ರಂಥಗಳು ಹೆಣ್ಣನ್ನು ನಿರಾಕರಿಸಿಲ್ಲ. ಆದರೆ ಪಿತೃ ಪ್ರಧಾನವಾದ ಈ ಗಂಡು ಸಮಾಜ ಮಾತ್ರ ಹೆಣ್ಣನ್ನು ಕೀಳಾಗಿ ನೋಡುತ್ತಿದೆ. ಇದರ ವಿರುದ್ಧ ನಾವು ಸಿಡಿದೇಳಲೇಬೇಕಾಗಿದೆ. ಮಣಿಪುರದಲ್ಲಿ ನಡೆದ ಭೀಬತ್ಸ ಘಟನೆಗಳು, ಪ್ರತಿದಿನ ನಡೆಯುವ ಅತ್ಯಾಚಾರ, ಶೋಷಣೆ, ದಬ್ಬಾಳಿಕೆಯನ್ನು ಇನ್ನೆಷ್ಟು ದಿನ ಸಹಿಸಲು ಸಾಧ್ಯ. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಏನೂ ಮಾಡುತ್ತಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಾವು ಸಿಡಿದೇಳಬೇಕಾಗಿದೆ ಎಂದರು.
ಬಸವಕೇಂದ್ರದ ಡಾ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಹೆಣ್ಣು ಸಾಕ್ಷಾತ್ಕಾರದ ಪ್ರತಿರೂಪ. ವಾತ್ಸಲ್ಯ ಪ್ರೀತಿ, ಕರುಣೆಗೆ ಮತ್ತೊಂದು ಹೆಸರೇ ಹೆಣ್ಣು, ಇಡೀ ಸಮಾಜ ಅವಳಿಗೆ ಗೌರವ ನೀಡಬೇಕು. ಅವಳೊಂದು ಹಚ್ಚಿಟ್ಟ ಹಣತೆ. ಅದನ್ನು ಬೆಳಗಿಸುವ ಕೆಲಸವನ್ನು ಆರ್ಥಿಕ ಶಿಸ್ತನ್ನು ತಂದುಕೊಡುವ ಕೆಲಸನವನ್ನು ಎಸ್‍ಎಂಎಸ್‍ಎಸ್‍ಎಸ್ ಮಾಡುತ್ತಿದೆ ಎಂದರು.
ಚೈತನ್ಯಶ್ರೀ ಪ್ರಶಸ್ತಿ ಸ್ವೀಕರಿಸಿದ ಮತ್ತೋರ್ವ ರಂಗಕಲಾವಿದೆ, ಗಾಯಕಿ ಬಿ. ಜಯಶ್ರೀ ಮಾತನಾಡಿ, ನಾವು ಸ್ವಾರ್ಥಕ್ಕಾಗಿ ಬದುಕಬಾರದು. ಹೆಣ್ಣಿಗೆ ಸ್ವಾತಂತ್ರ್ಯ ಸಮಾನತೆ ಎರಡೂ ಬೇಕು ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗೋಣ. ಮಹಿಳೆಯರಲ್ಲಿ ಸದಾ ಜೀವನೋತ್ಸಾಹ ಇರಲಿ ಎಂದರು.
ಎಸ್.ಎಸ್.ಎಫ್. ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಹದಿ ಮಾತನಾಡಿ, ಭಾರತದ ಮಣ್ಣಿನ ಸುಖ ಎಲ್ಲಿಯೂ ಸಿಗುವುದಿಲ್ಲ. ಸರ್ವ ಜನಾಂಗದ ಶಾಂತಿಯ ತೋಟವಿದು. ಎಲ್ಲ ಧರ್ಮದವರು ಇಲ್ಲಿ ಒಟ್ಟಾಗಿ ಬದುಕುತ್ತಿದ್ದಾರೆ. ಮಹಿಳೆಯರಿಗೆ ಮಹತ್ವದ ಸ್ಥಾನ ನೀಡಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಎಂಎಸ್‍ಎಸ್‍ಎಸ್‍ನ ಅಧ್ಯಕ್ಷ ಹಾಗೂ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ. ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ತ್ರೀಬಂಧು ಸಹಕಾರಿ ಸಂಸ್ಥೆಯ ಅಧ್ಯಕ್ಷೆ ಪ್ರೆಸಿಲ್ಲಾ ಮಾರ್ಟಿಸ್, ಕಾರ್ಯದರ್ಶಿ ಫಾ. ಕ್ಲಿಫರ್ಡ್ ರೋಶನ್ ಪಿಂಟೋ, ಜಗದೀಶ್ ಉಪಸ್ಥಿತರಿದ್ದರು. ಫೆಲಿಕ್ಸ್ ಜೋಸೆಫ್ ನೊರೋನ್ಹ ಸ್ವಾಗತಿಸಿದರು.

Related posts

ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ- ವಿದ್ಯಾರ್ಥಿಗಳಿಗೆ ಪೊಲೀಸ್ ಪಡೆಯ ಕಮಾಡಂಟ್ ಎಸ್. ಯುವಕುಮಾರ್ ಕಿವಿಮಾತು

13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್.

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ- ಎಸ್ಪಿ ಮಿಥುನ್ ಕುಮಾರ್ ಎಚ್ಚರಿಕೆ