ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

2019ಕ್ಕಿಂತ ಮುಂಚೆ ನೋಂದಾಯಿಸಲಾದ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ: ಬದಲಿಸದಿದ್ದರೇ ಬೀಳುತ್ತೆ ದಂಡ..

ಬೆಂಗಳೂರು: ಏಪ್ರಿಲ್ 1, 2019ಕ್ಕೂ  ಮುಂಚೆ ನೋಂದಾಯಿಸಲಾದ ಎಲ್ಲಾ ವಾಹನಗಳು ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಹೊಂದುವುದು ಕಡ್ಡಾಯವಾಗಿದೆ. ಹೀಗಾಗಿ ನಂಬರ್ ಪ್ಲೇಟ್ ಬದಲಿಸದಿದ್ದರೇ ದಂಡ ಬೀಳಲಿದೆ ಎಂದು ರಾಜ್ಯ ಸಾರಿಗೆ ಇಲಾಖೆ ತಿಳಿಸಿದೆ.

ಶಾಶ್ವತ ಗುರುತಿನ ಸಂಖ್ಯೆ ಮತ್ತು ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ನಂತಹ ಹಲವಾರು ವೈಶಿಷ್ಟ್ಯಗಳೊಂದಿಗೆ ಈ ನಂಬರ್ ಪ್ಲೇಟ್ ಸಜ್ಜುಗೊಂಡಿದೆ.   ಎಚ್ ಎಸ್ ಆರ್ ಪಿಗಳನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ.

ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ, ಏಪ್ರಿಲ್ 1, 2019 ರ ಮೊದಲು ರಾಜ್ಯದಲ್ಲಿ ಸುಮಾರು 1.75 ಕೋಟಿಯಿಂದ 2 ಕೋಟಿ ವಾಹನಗಳು ನೋಂದಣಿಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಎಪ್ರಿಲ್ 1, 2019 ರಿಂದ ಜಾರಿಗೆ ಬರುವಂತೆ, ಎಲ್ಲಾ ಹೊಸ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ನೋಂದಣಿ ಫಲಕಗಳಲ್ಲಿ (ನಂಬರ್ ಪ್ಲೇಟ್ ) ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಆಗಸ್ಟ್ 17, 2023 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದಕ್ಕೆ ನವೆಂಬರ್ 17 ರ ಗಡುವನ್ನು ನೀಡಲಾಗಿದೆ. ವಿಫಲವಾದ ವಾಹನ ಮಾಲೀಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ರೂ 500 ರಿಂದ ರೂ 1,000ರ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಪ್ರಸ್ತುತ, ವಾಹನ ತಯಾರಕರು ಈ ಪ್ಲೇಟ್ ಗಳನ್ನು ವಾಹನ ವಿತರಕರಿಗೆ ಪೂರೈಸಲು ಅಧಿಕೃತ ಎಚ್ಎಸ್ಆರ್ಪಿ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಹಳೆಯ ವಾಹನಗಳಿಗೂ ಸಹ ಅಧಿಕೃತ ಎಚ್ಎಸ್ಆರ್ಪಿ ತಯಾರಕರು ಪ್ಲೇಟ್ಗಳನ್ನು ಪೂರೈಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಹಳೆಯ ವಾಹನಗಳ ಮಾಲೀಕರು ವಾಹನ ತಯಾರಕರ ಅಧಿಕೃತ ಡೀಲರ್ಗಳ ಮೂಲಕ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬಹುದು’ ಎಂದು ಅವರು ಹೇಳಿದ್ದಾರೆ.

‘ನಾಲ್ಕು ಚಕ್ರಗಳ ವಾಹನಕ್ಕೆ ಎಚ್ಎಸ್ಆರ್ಪಿ ಪ್ಲೇಟ್ ಬೆಲೆಯು ರೂ 400 ರಿಂದ ರೂ 500 ರವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ರೂ 250 ರಿಂದ ರೂ 300 ರ ವರೆಗೆ ಇರಲಿದೆ. ದ್ವಿಚಕ್ರ ವಾಹನಗಳಿಗೆ ಈಗಾಗಲೇ 12 ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ನಿಯಮವನ್ನು ಜಾರಿಗೆ ತಂದಿವೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಟ್ಯಾಂಪರಿಂಗ್ ಮತ್ತು ಪ್ಲೇಟ್ಗಳನ್ನು ನಕಲಿ ಮಾಡುವುದನ್ನು ತಡೆಯುವ ಎಚ್ಎಸ್ಆರ್ಪಿ ತಡೆಯಲಿದೆ. ವಾಹನಗಳಿಂದ ಉಂಟಾಗುವ ಅಪರಾಧಗಳನ್ನು ಪರಿಶೀಲಿಸಲು ಎಚ್ಎಸ್ಆರ್ಪಿ ಸಹಾಯ ಮಾಡಲಿದೆ. ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಎಚ್ಎಸ್ಆರ್ಪಿ ಅನ್ನು ಅಳವಡಿಸಿಕೊಂಡ ನಂತರ, ಅಧಿಕೃತ ವಿತರಕರು ಅಥವಾ ತಯಾರಕರು ವಾಹನ್ ಪೋರ್ಟಲ್ನಲ್ಲಿ ಲೇಸರ್-ಕೋಡಿಂಗ್ ಅನ್ನು ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.

 

Related posts

ಬಡ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ: ದಸಂಸ ಪ್ರತಿಭಟನೆ.

ಅಯೊಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್..

ಅ.22: ಸಾಹಿತ್ಯ ವೇದಿಕೆಯಿಂದ ದಸರಾ ಕವಿಗೋಷ್ಠಿ