ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಗರದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಅಲಂಕಾರ: ಮಹಿಳೆಯರಿಂದ ಬಾಗಿನ ವಿನಿಮಯ.

ಶಿವಮೊಗ್ಗ: ನಗರದಲ್ಲಿ ಇಂದು ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎದ್ದುಕಾಣುತ್ತಿದ್ದು, ಬೆಳಿಗ್ಗೆಯಿಂದಲೇ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷವಾಗಿ ಮಹಿಳೆಯರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಾಗಿನ ವಿನಿಮಯ ಮಾಡಿಕೊಳ್ಳುವುದು ಕಂಡು ಬಂತು.
ಕೆಲವರು ಕಳಶದ ಮೇಲೆ ಲಕ್ಷ್ಮೀ ದೇವಿ ವಿವಿಧ ಲೋಹಗಳಿಂದ ಮಾಡಿದ ಮುಖವಾಡವನಿಟ್ಟು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಒಡವೆಗಳನ್ನೇರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಿದ್ದರು. ಮತ್ತೆ ಕೆಲವರು ಮಾರುಕಟ್ಟೆಯಲ್ಲಿ ಸಿದ್ಧವಾಗಿ ದೊರೆಯುವ ಮೂರ್ತಿಯನ್ನೇ ಪ್ರತಿμÁ್ಠಪಿಸಿದ್ದರು. ಅಲಂಕರಿಸಿದ ಮೂರ್ತಿಯ ಮುಂದೆ ಬಗೆಬಗೆಯ ಹಣ್ಣು, ತಿಂಡಿ, ತಿನಿಸು, ಬಾಗಿನ ವಸ್ತುಗಳನ್ನು ಇಟ್ಟು ಪೂಜಿಸಿದರು.
ಕೆಲವರ ಮನೆಗಳಲ್ಲಿ ಲಕ್ಷ್ಮಿ ಭಾವಚಿತ್ರ ಇಟ್ಟು ಪೂಜಿಸಿದರೆ, ಇನ್ನೂ ಕೆಲವರ ಮನೆಗಳಲ್ಲಿ ತಾಮ್ರ, ಬೆಳ್ಳಿ ಬಿಂದಿಗೆಗೆ ಸೀರೆ ಉಡಿಸಿ ಅದರ ಮೇಲೆ ತೆಂಗಿನ ಕಾಯಿ ಇಟ್ಟು ಅದಕ್ಕೆ ಬೆಳ್ಳಿ, ಬಂಗಾರದ ಲಕ್ಷ್ಮಿ ಮುಖವಾಡ ಇಟ್ಟು ವಿವಿಧ ಆಭರಣಗಳನ್ನು ತೊಡಿಸಿದ್ದರು. ಬಾಳೆ ಕಂದು ಹಾಗೂ ವಿವಿಧ ಹೂ– ಹಣ್ಣುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ ಭಕ್ತಿ ಮರೆದರು. ಮನೆ ಅಕ್ಕಪಕ್ಕದ ಮಹಿಳೆಯರನ್ನು, ಮಕ್ಕಳನ್ನು ಕರೆದು ಅರಿಶಿಣ– ಕುಂಕುಮ, ಹಸಿರು ಬಳೆ, ತಾಂಬೂಲ, ಹಣ್ಣು ನೀಡಿ ಸತ್ಕರಿಸುತ್ತಿದ್ದು ಸಾಮಾನ್ಯವಾಗಿತ್ತು.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿ ಬಲು ಜೋರಾಗಿ ಸಾಗಿತ್ತು. ಹೂವು, ಹಣ್ಣು, ಬಾಳೆ ಎಲೆ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ಬಲು ಜೋರಾಗಿತ್ತು. ನಗರದ ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿಗುಡಿ, ಲಕ್ಷ್ಮಿ ಟಾಕೀಸ್ ವೃತ್ತ, ಗೋಪಿ ಸರ್ಕಲ್, ಪೆÇಲೀಸ್ ಚೌಕಿ, ಗೋಪಾಳ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕಂಡುಬಂದಿತ್ತು.
ನಗರದ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಮಂದಿರದಲ್ಲಿ ಮಹಿಳಾ ಮಂಡಳಿ ವತಿಯಿಂದ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮತ್ತು ವಿಶೇಷ ಪೂಜೆ ಹಾಗೂ ಚೂಡಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಕ್ಷ್ಮೀಪುರದ ಶ್ರೀ ಮಹಾಲಕ್ಷ್ಮಿ ಹಾಗೂ ಗಾಂಧಿನಗರ ಮುಖ್ಯ ರಸ್ತೆಯ ಚೌಡೇಶ್ವರಿ, ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ, ಕೋಟೆ ಮಾರಿಕಾಂಬಾ ದೇವಿಗೆ ವರಮಹಾಲಕ್ಷ್ಮಿಯ ವಿಶೇಷ ಅಲಂಕಾರ ಮಾಡಲಾಗಿತ್ತು.

Related posts

ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ: ಜಾಗೃತ ಜಾಥಾ..

ಉತ್ಪಾದನೆ ಕಡಿಮೆ  2 ತಾಸು ವಿದ್ಯುತ್ ಸಮಸ್ಯೆ ಆಗುತ್ತೆ- ಡಿಸಿಎಂ ಡಿ.ಕೆ ಶಿವಕುಮಾರ್.

ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯಾದ್ಯಂತ 50 ಕಡೆಗಳಲ್ಲಿ ಲೋಕಾಯುಕ್ತ ದಾಳಿ, ಪರಿಶೀಲನೆ.