ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯಶಿವಮೊಗ್ಗ

ದಾವಣಗೆರೆ ಎಸ್ ಎಸ್ ಮಲ್ಲಿಕಾರ್ಜುನ ಸಾಂಸ್ಕøತಿಕ ಕೇಂದ್ರದಲ್ಲಿ ನಡೆದ ‘ತುಮ್ಹಾರೆ ಸಿವಾ ಔರ್ ಕೋಯಿ ನಹೀ

ದಾವಣಗೆರೆ : ಇಲ್ಲಿನ ಎಸ್ ಎಸ್ ಮಲ್ಲಿಕಾರ್ಜುನ ಸಾಂಸ್ಕøತಿಕ ಕೇಂದ್ರದಲ್ಲಿ ನಡೆದ ‘ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪೇಟೆ ಮಕ್ಕಳಿಗಿಂತ ಹಳ್ಳಿಮಕ್ಕಳಿಗೆ ವಚನ ನೃತ್ಯವನ್ನು ಮಾಡಿಸಬೇಕು. ಹಳ್ಳಿ ಮಕ್ಕಳು ಎಲ್ಲರಿಂದಲೂ ವಂಚಿತರು. ಈ ನೃತ್ಯವನ್ನು ಮಾಡಿಸುವುದಾದರೆ ಇದಕ್ಕೆ ಬಹಳಷ್ಟು ಹಣ ಖರ್ಚಾಗುತ್ತೆ. ಆ ಹಣವನ್ನು ಶಿವಶಂಕರಪ್ಪನವರು ನಾನು ಕೊಡುತ್ತೇನೆಂದು ಹೇಳಿದರು. ಶಿವಶಂಕರಪ್ಪನವರು ಉದಾರಿಗಳು. ನಿಷ್ಕಲ್ಮಶ ಹೃದಯಿಗಳು. ಬಸವಾದಿ ಶರಣರ ಸಂದೇಶಗಳು ಇಡೀ ಭಾರತದಾದ್ಯಂತ ಬಿತ್ತಬೇಕು ಎಂಬುದು ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿಗಳ ಕನಸು. ಅವರ ಕನಸನ್ನು ನನಸು ಮಾಡುವ ಉದ್ದೇಶದಿಂದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಮೂಲಕ ಶರಣರ ವಿಚಾರಗಳನ್ನು ಜನರ ಮನಸ್ಸುಗಳಿಗೆ ಮುಟ್ಟಿಸುವ ಕಾರ್ಯವನ್ನು ಮಾಡ್ತಾ ಬಂದಿದ್ದೇವೆ. ವಚನ ಅಭಿಯಾನ ದುಸ್ಸಾಹಸದ ಯಾತ್ರೆ. ಈ ಯಾತ್ರೆಯಲ್ಲಿ ಬಂದ ಅನುಭವಗಳು ಅದ್ಭುತ! ನೃತ್ಯಕಲಾವಿದೆಯರು ದೊಡ್ಡ ದೊಡ್ಡ ಪದವಿ ಪಡೆದವರು. ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬಸವ ತತ್ವ ಪ್ರಚಾರ ಮಾಡಬೇಕೆಂಬ ಹಂಬಲದಿಂದ ಬಂದಿದ್ದಾರೆ ಎಂದರು.

ಪ್ರಾಸ್ತವಿಕವಾಗಿ ಅಣಬೇರು ರಾಜಣ್ಣ ಮಾತನಾಡಿ ನಮ್ಮ ತರಳಬಾಳು ಮಠದ ಪರಂಪರೆ ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಾ ಬಂದಿದೆ. ಶಾಮನೂರು ಶಿವಶಂಕರಪ್ಪನವರಿಗೆ ರಾಜಕೀಯಕ್ಕಿಂತ ಸಮಾಜ ದೊಡ್ಡದು. ನಮ್ಮ ಹಿರಿಯ ತರಳಬಾಳು ಜಗದ್ಗುರು ದೊಡ್ಡ ಸಮಾಜವನ್ನು ಬೆಳೆಸಿ ನಮ್ಮ ಕೈಗೆ ಕೊಟ್ಟಿದ್ದಾರೆ. ಸಮಾಜವನ್ನು ಬಡಿದೆಬ್ಬಿಸಿ ಶಿಕ್ಷಣ ಕೊಟ್ಟು ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಬದುಕುವುದನ್ನು ಕಲಿಸಿದರು. ಅವರ ಹಾದಿಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಡೆದುಕೊಂಡು ಬರುತ್ತಿದ್ದಾರೆ. ಸಾಣೇಹಳ್ಳಿಯ ಮಠದಿಂದ ಶರಣರ ನಾಟಕಗಳು, ಮತ್ತೆ ಕಲ್ಯಾಣ, ಶ್ರಾವಣಸಂಜೆ, ಲಿಂಗದೀಕ್ಷೆ ಹೀಗೆ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ನೃತ್ಯರೂಪಕ ಭಾರತದಾದ್ಯಂತ 14 ರಾಜ್ಯಗಳಲ್ಲಿ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿಕೊಂಡಿದೆ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ; ಈ ವಚನ ನೃತ್ಯರೂಪಕವನ್ನು ಬೆಂಗಳೂರಿನಲ್ಲಿ ನೋಡಿ ತುಂಬ ಸಂತೋಷ ಪಟ್ಟಿದ್ದೇನೆ ಎಂದರು.

ಜಿಲ್ಲಾಧಿಕಾರಿ ಎಂ ವೆಂಕಟೇಶ್ ಮಾತನಾಡಿ; ವಚನ ನೃತ್ಯ ರೂಪಕ ಇದೊಂದು ವಿಶೇಷ, ಅದ್ಭುತ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿ ಬೇಕು. 12ನೆಯ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಕೊಟ್ಟ ಸಾಹಿತ್ಯ ವಚನ ಸಾಹಿತ್ಯ. ಕಟ್ಟಕಡೆಯ ವ್ಯಕ್ತಿಯನ್ನು ಮೇಲ್ಮಟ್ಟಕ್ಕೆ ಬೆಳೆಸಿದ ಕಾಲ 12ನೆಯ ಶತಮಾನ. ಬಸವಾದಿ ಶರಣರ ತತ್ವಗಳನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಭಾರತಾದ್ಯಂತ ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯ. ಅನುಭವ ಮಂಟಪದ ಮೂಲಕ ಶರಣರು ಮಾನವೀಯ ಮೌಲ್ಯಗಳನ್ನು ಬಿತ್ತಿದರು. ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರಿದರು ಎಂದರು.

ಜಗಳೂರಿನ ಶಾಸಕ ದೇವೇಂದ್ರಪ್ಪ ಮಾತನಾಡಿ ಇವತ್ತು ನಾವೆಲ್ಲ ಸ್ವತ್ತಿಗೋಸ್ಕರ ಹೊಡೆದಾಡುತ್ತೇವೆ. ಈ ಸ್ವತ್ತನ್ನು ಬಿಟ್ಟು ಪುರುಸೊತ್ತು ಮಾಡಿಕೊಂಡು ಈ ಕಾರ್ಯಕ್ರಮ ನೋಡಲೇಬೇಕೆಂದು ತುಂಬ ಆಸಕ್ತಿಯಿಂದ ಬಂದಿದ್ದೇನೆ. ಬೇಡನಾಗಿದ್ದ ನಾನು ಶ್ರೀಮಠದ ಸಂಸ್ಕಾರದಿಂದ ಶಾಸಕನಾಗುವ ಮಟ್ಟಕ್ಕೆ ಬಂದಿದ್ದೇನೆ. ನಾನು ಕೂಡ ಮೂಲತಃ ಕಲಾವಿದನೇ. ಶರಣಸತಿ-ಲಿಂಗಪತಿ ಎನ್ನುವ ನಾಟಕದಲ್ಲಿ ಅಭಿನಯಿಸಿದ್ದೇನೆ ಎಂದರು.

ಜಾನಪದ ತಜ್ಞ ಎಂ ಜಿ ಈಶ್ವರಪ್ಪನವರು ಮಾತನಾಡಿ ಬಸವಣ್ಣನ ಕಾಲದ ಸಂಸ್ಕೃತಿಯನ್ನು ಎಲ್ಲ ಕಡೆ ಬಿತ್ತಬೇಕು ಎನ್ನುವ ಕಾರಣಕ್ಕಾಗಿ ಇಂತಹ ಕಾರ್ಯಕ್ರಮ ಮಾಡ್ತಾ ಬಂದಿದೆ. ನಾಟಕ, ನೃತ್ಯ, ವಚನಗೀತೆ,ಮತ್ತೆ ಕಲ್ಯಾಣ ಮಾಡುವುದರ ಮೂಲಕ ಶರಣರ ವಿಚಾರಗಳನ್ನು ಪಸರಿಸಿ ಬಸವಣ್ಣನವರ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದ ಕೀರ್ತಿ ಪೂಜ್ಯರಿಗೆ ಸಲ್ಲಬೇಕು. ‘ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ಬದಲಾಗಿ ‘ತುಮ್ಹಾರೆ ಪಂಡಿತಾರಾಧ್ಯ ಸ್ವಾಮೀಜಿ ಔರ್ ಕೋಯಿ ನಹೀ.’ ಪಂಡಿತಾರಾಧ್ಯ ಸ್ವಾಮೀಜಿಯವರೇ ನೀವಲ್ಲದೇ ಮತ್ತಾರೂ ಇಲ್ಲವಯ್ಯ. ನಿಮ್ಮಂಥವರವನ್ನು ಪಡೆದುಕೊಂಡ ನಾವೇ ಪುಣ್ಯವಂತರು ಎಂದರು.

ಉದ್ಯಮಿ ಎಸ್ ಎಸ್ ಗಣೇಶ್, ಉಮಾಪತಿ, ಷಣ್ಮುಖಪ್ಪ, ಶ್ರೀನಿವಾಸ ಕಪ್ಪಣ್ಣ, ಸ್ನೇಹ ಕಪ್ಪಣ್ಣ ಇತರರಿದ್ದರು. ನೃತ್ಯರೂಪಕವನ್ನು ನೋಡಿದ ಪ್ರೇಕ್ಷಕರು ಕಣ್ಮನವನ್ನು ತಣಿಸಿಕೊಂಡು ಅಭಿಪ್ರಾಯ ಹಂಚಿಕೊಂಡರು. ಕದಳಿ ಮಹಿಳಾ ವೇದಿಕೆಯವರು ವಚನಗೀತೆಗಳನ್ನು ಹಾಡಿದರು. ಅಣಬೇರು ರಾಜಣ್ಣ ಸ್ವಾಗತಿಸಿದರೆ ಹೆಚ್ ಎಸ್ ದ್ಯಾಮೇಶ್ ನಿರೂಪಿಸಿ ವಂದಿಸಿದರು.

Related posts

15 ದಿನದೊಳಗೆ  ಎಲ್ಲಾ ಮಹಿಳೆಯರ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಬರಲಿದೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.

ಕೇಂದ್ರ ಸರ್ಕಾರಿ ನೌಕರರಿಗೆ ಶಾಕ್: ಸದ್ಯಕ್ಕೆ 8ನೇ ವೇತನ ಆಯೋಗ ರಚನೆ ಇಲ್ಲ

ಮಕ್ಕಳಿಗೆ ಶ್ರೇಷ್ಠ ಸಂಸ್ಕೃತಿ ಪರಂಪರೆಯ ಪರಿಚಯ ಅಗತ್ಯ-ಜಿ ವಿಜಯಕುಮಾರ್