ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಸಿನಿಮಾ

ಕನ್ನಡ ಕಲಿಬೇಕು ಎನ್ನುವವರಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿತವರಿಗೆ ‘ಕನ್ನಡ ಪಟ್ಟ’ ಸಿಗಲಿ- ದಸರಾ ಉದ್ಘಾಟಿಸಿ ಹಂಸಲೇಖ ಸಲಹೆ…

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಚಾಮುಂಡಿಬೆಟ್ಟದಲ್ಲಿ ನಾದ ಬ್ರಹ್ಮ ಹಂಸಲೇಖ ಚಾಲನೆ ನೀಡಿದರು.

416ನೇ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಟ್ಟದಲ್ಲಿ ಸಾವಿರಾರು ಭಕ್ತರು ಸಾಕ್ಷಿಯಾದರು. 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬಕ್ಕೆ ಹಂಸಲೇಖ ಚಾಲನೆ ನೀಡಿದರು.

ನಾಡ ದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಚಾಲನೆ ಬಳಿಕ ಮಾತು ಆರಂಭಿಸಿದ ದಸರಾ ಉದ್ಘಾಟಕ ಹಂಸಲೇಖ, ಪೂಜ್ಯ ಕನ್ನಡಿಗರಿಗೆ, ಪೂಜನೀಯ ಕನ್ನಡಕ್ಕೆ, ಕನ್ನಡದ ಗುಡಿಗೆ, ದೇವಾಲಯಕ್ಕೆ ಪ್ರೇಮಾಲಯಕ್ಕೆ ಸಾವಿರದ ಶರಣು ಎಂದು ಮೊದಲ ಸಾಲುಗಳನ್ನಾಡಿದರು.

ಕನ್ನಡದ ಏಕೀಕರಣಕ್ಕೆ ಐದಶ ಅಂದರೆ ಐದು ದಶಕ ತುಂಬಿದೆ. ನನ್ನ ಕನ್ನಡ ಕಲಾ ಕಾಯಕಕ್ಕೂ ಐವತ್ತು ವರ್ಷ ತುಂಬಿದೆ. ದಸರಾ ಉದ್ಘಾಟನೆಗೆ ಸಿಕ್ಕ ಅವಕಾಶ ಬಹಳ ಬೆಲೆ ಬಾಳುವಂತಹದ್ದು, ಈ ಅವಕಾಶಕ್ಕಾಗಿ ನಾನು ಚಾಮುಂಡಿಬೆಟ್ಟದಂತೆ ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶ ನೀಡಿದ ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು. ದಸರಾ ಸಂಭ್ರಮದ ಜೀವಂತ ಮಹಾಕಾವ್ಯ ಎಂದು ಬಣ್ಣಿಸಿದರು.

ಕನ್ನಡಕ್ಕೆ ಮಿತಿ ಇದೆ. ಕನ್ನಡದ ಭಾವಕ್ಕೆ ಎಲ್ಲಿ ಮಿತಿ ಇದೆ? ದೆಹಲಿಗೂ ಕನ್ನಡದ ಅಗತ್ಯವಿದೆ. ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆಗಲೇ ನಮ್ಮ ರಾಷ್ಟ್ರದ ಜತೆಗೆ ಜಗತ್ತಿನಲ್ಲಿ ಕನ್ನಡ ಬೆಳೆಯಲು ಸಾಧ್ಯವಿದೆ. ಶಾಂತಿ ಮಂತ್ರ ಕನ್ನಡ… ಅಭಿವೃದ್ಧಿ ಕನ್ನಡ… ಇದು ಕನ್ನಡಿಗರ ಮಂತ್ರವಾಗಬೇಕು ಎಂದರು.

ಕನ್ನಡ ನಾಡಿನಲ್ಲಿರುವ ಎಲ್ಲರೂ ಕನ್ನಡಿಗರೇ. ಇದರಲ್ಲಿ ಕನ್ನಡ ಗೊತ್ತಿಲ್ಲ ಎನ್ನುವವರ, ಕನ್ನಡ ಅರ್ಥವಾಗಲ್ಲ ಎನ್ನುವವರ ಸಮೀಕ್ಷೆ ಆಗಬೇಕು. ಕನ್ನಡ ಕಲಿಬೇಕು ಎನ್ನುವವರಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿತವರಿಗೆ ‘ಕನ್ನಡ ಪಟ್ಟ’ ನೀಡಬೇಕು ಎಂದು ಕಾರ್ಪೋರೇಟ್ ಕನ್ನಡಿಗರ ತಂಡವೊಂದು ಸಲಹೆ ನೀಡಿದೆ. ಇದನ್ನು ಜಾರಿಗೆ ತರುವ ಕೆಲಸ ಮಾಡಬೇಕು ಎಂದರು.

ಕನ್ನಡಕ್ಕಾಗಿ ಕೆಲಸ ಮಾಡುವ ಕಾರ್ಪೋರೇಟ್ ಕನ್ನಡಿಗರ ತಂಡವೊಂದು ನನ್ನ ಜತೆಗಿದೆ. ಕನ್ನಡಕ್ಕಾಗಿ ಕೆಲಸ ಮಾಡಲು ಉತ್ಸಾಹಿಯಾಗಿರುವ ಈ ತಂಡದೊಂದಿಗೆ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ಬರದ ವೇಳೆಯೂ ದಸರಾ ಮಹತ್ವ ಕಡಿಮೆಯಾಗದಂತೆ ನಾಡಹಬ್ಬದ ಆಚರಣೆ: ಸಿಎಂ ಸಿದ್ದರಾಮಯ್ಯ 

ನಾಡಿನ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆಯಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಇದನ್ನೇ ಬಾಬಾ ಸಾಹೇಬರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದೆ. ಎಲ್ಲ ಜನರಿಗೂ ಅದರಲ್ಲೂ ಬಡಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ನಡೆದ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,  ಬರದ ನಡುವೆಯೂ ದಸರಾ ಮಹತ್ವ ಕಡಿಮೆಯಾಗದಂತೆ ರಾಜ್ಯ ಸರಕಾರ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಆಚರಣೆ ಮಾಡುತ್ತಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 38ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದರು.

ರಾಜ್ಯದಲ್ಲಿ 116 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. 4860 ಕೋಟಿ ಬೆಳೆ ನಷ್ಟ ಪರಿಹಾರವನ್ನು ಕೇಂದ್ರದಿಂದ ನಿರೀಕ್ಷೆ ಮಾಡುತ್ತಿದ್ದೇವೆ. ಕೇಂದ್ರದ ಅನುದಾನವನ್ನೇ ನಂಬಿಕೊಳ್ಳದೇ ರೈತರಿಗೆ ನೆರವಾಗುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ ಎಂದರು.

ಕನ್ನಡ ನಿಘಂಟು ಪುಸ್ತಕ ವಿತರಣೆ: ವೇದಿಕೆಯಲ್ಲಿ ದಸರಾ ಉದ್ಘಾಟಕ ಹಂಸಲೇಖರಿಗೆ ಕನ್ನಡ ನಿಘಂಟು ಪುಸ್ತಕ ನೀಡಲಾಯಿತು. ಕುವೆಂಪು ಕನ್ನಡ ವಿಶ್ವ ವಿದ್ಯಾನಿಲಯದ ವಿಶೇಷಚೇತನ ವಿದ್ಯಾರ್ಥಿ ಭವಿತ ಅವರು ಕನ್ನಡ ನಿಘಂಟು ಪುಸ್ತಕ ನೀಡಿದರು.

 

Related posts

ಒಂದು ದೇಶ ಒಂದು ಚುನಾವಣೆ: ಖರ್ಚು ಎಷ್ಟಾಗುತ್ತೆ..? ಸಾಧಕ ಬಾಧಕಗಳೇನು..?

ದೇಶ ಕಂಡ ಅತ್ಯುತ್ತಮ ನ್ಯಾಯಧೀಶರು ಡಾ.ಶಿವರಾಜ್ ಪಾಟೀಲ್- ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ಬಣ್ಣನೆ

ಬೊಮ್ಮಾಯಿ ಸರ್ಕಾರ ಇದ್ದಾಗ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿಲ್ವಾ..?- ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.