ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕಲ್ಯಾಣ ಕರ್ನಾಟಕಕ್ಕೆ ಹೋಗಲು ಶಿಕ್ಷಕರ ಹಿಂದೇಟು: ಏಳು ಜಿಲ್ಲೆಗಳಿಗೆ ಬಂದಿದ್ದು ಮಾತ್ರ 74 ಶಿಕ್ಷಕರು.

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೊಳಿಸಿ ಹೆಚ್ಚು ಹೆಚ್ಚು ಅನುದಾನವನ್ನ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಇತ್ತೀಚೆಗೆ ಶಿಕ್ಷಕರ ವರ್ಗಾವಣೆ ನಡೆದಿದ್ದು, ಈ ಭಾಗಕ್ಕೆ ಶಿಕ್ಷಕರು ವರ್ಗಾವಣೆ ಪಡೆದು ಬರುವವರ ಸಂಖ್ಯೆ ಕಡಿಮೆಯಾಗಿದೆ

ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮುಕ್ತಾಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಹೊರ ವಿಭಾಗಗಳಿಂದ ಬರಲು ಶಿಕ್ಷಕರು ಹಿಂದೇಟು ಹಾಕಿದ್ದಾರೆ. ಕಲಬುರಗಿ ವಿಭಾಗದಿಂದ 2,504 ಶಿಕ್ಷಕರು ಬೇರೆ ವಿಭಾಗಗಳಿಗೆ ಹೋಗಿದ್ದರೆ, ಈ ವಿಭಾಗಕ್ಕೆ ಕೇವಲ 74 ಶಿಕ್ಷಕರು ಬಂದಿದ್ದಾರೆ.

ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹೊರಗೆ ವರ್ಗಾವಣೆಗಾಗಿ ಇತರೆ ಅರ್ಹತೆಗಳ ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆ ವೃಂದದಲ್ಲಿ ಕನಿಷ್ಠ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮದಡಿ ಸಾವಿರಾರು ಶಿಕ್ಷಕರು ಅರ್ಹರಾಗಿದ್ದಾರೆ. ಶೇ 25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ಶೈಕ್ಷಣಿಕ ಘಟಕಗಳಲ್ಲಿ ಶಿಕ್ಷಕರ ವರ್ಗಾವಣೆಗೂ ಅನುಮತಿಸಲಾಗಿದೆ.      ಹೀಗಾಗಿ, ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಏಳು ಜಿಲ್ಲೆಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅರ್ಹ ಶಿಕ್ಷಕರು ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆಗೊಂಡಿದ್ದಾರೆ. ಬೇರೆ ವಿಭಾಗಗಳಿಂದ ಕಲಬುರಗಿ ವಿಭಾಗಕ್ಕೆ ಬರಲು ಮಾತ್ರ ಹಿಂದೇಟು ಹಾಕಿದ್ದಾರೆ.

ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೂಲಸೌಲಭ್ಯಗಳಿಂದ ಕೊರತೆಯಿಂದ ಬಳಲುತ್ತಿವೆ. ಇದರ ಜತೆಗೆ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ 45,440 ಹುದ್ದೆಗಳ ಪೈಕಿ 18,050 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆಗಳಲ್ಲಿ ಸಹ ಮಂಜೂರಾದ 12,696 ಹುದ್ದೆಗಳಲ್ಲಿ 3,523 ಹುದ್ದೆಗಳು ನೇಮಕಾತಿಗಾಗಿ ಕಾಯುತ್ತಿವೆ. ಇದರ ನಡುವೆ 2,504 ಶಿಕ್ಷಕರು ವರ್ಗಾವಣೆ ಆಗಿದ್ದಾರೆ.

ರಾಯಚೂರು (5,335), ಯಾದಗಿರಿ (3,917), ಕಲಬುರಗಿ(3,463), ಬಳ್ಳಾರಿ(2,450) ಮತ್ತು ಬೀದರ್(1,469) ಅಧಿಕ ಶಿಕ್ಷಕರ ಕೊರತೆ ಇರುವ ಜಿಲ್ಲೆಗಳಾಗಿವೆ. ಈ ಐದು ಜಿಲ್ಲೆಗಳ ಪೈಕಿ ಬೀದರ್ ಹೊರತರುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೂರಂಕಿಯಷ್ಟು ಶಿಕ್ಷಕರು ವರ್ಗವಾಗಿದ್ದು, ಎರಡಂಕಿಯಷ್ಟೂ ಶಿಕ್ಷಕರು ಬಂದಿಲ್ಲ.

ಬಳ್ಳಾರಿ(172) ನಾಲ್ವರು, ಬೀದರ್ (21) ಎಂಟು, ಕಲಬುರಗಿ(330) ಒಂಬತ್ತು, ರಾಯಚೂರಿ (981) ನಾಲ್ಕು ಹಾಗೂ ಯಾದಗಿರಿಯಲ್ಲಿ(459) ಐದು ಶಿಕ್ಷಕರು ಹೊರ ವಿಭಾಗಗಳಿಂದ ಬಂದಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

 

Related posts

ಬರಗಾಲದ ಸಂದರ್ಭದಲ್ಲಿ ಮದ್ಯದಂಗಡಿ ತೆರೆಯಲು ಒಲವು ತೋರುತ್ತಿರುವುದು ದುರದೃಷ್ಟಕರ ಸಂಗತಿ-ಶಾಸಕ ಬಿ.ವೈ.ವಿಜಯೇಂದ್ರ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಅಪಾರ ಪ್ರಮಾಣದ ಹಾನಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಭೇಟಿ ಪರಿಶೀಲನೆ.

ಬೊಮ್ಮಾಯಿ ಸರ್ಕಾರ ಇದ್ದಾಗ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿಲ್ವಾ..?- ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.