ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಕಾಂಗ್ರೆಸ್ ಪರ ಅಲೆ: ಕರ್ನಾಟಕದಂತೆಯೇ ಪಂಚ ರಾಜ್ಯ ಚುನಾವಣೆಯಲ್ಲೂ ಬಿಜೆಪಿಗೆ ಸಂಕಷ್ಟ…?

ನವದೆಹಲಿ:  ದೇಶದ  ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು ರಾಜಕೀಯ ಚಟುವಟಿಕೆಗಳು ಬಿರಿಸುಗೊಡಿವೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಹಾಗೂ ಮಿಜೋರಾಂಗೆ ಚುನಾವಣೆಗಳು ನಡೆಯಲಿವೆ. ಕರ್ನಾಟಕದ ಚುನಾವಣೆಯಂತೆಯೇ ಈ ಐದು ರಾಜ್ಯಗಳಲ್ಲಿ ಬಿಜೆಪಿ ಸಂಕಷ್ಟವನ್ನು ಎದುರಿಸುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ಹೌದು ಈವರೆಗೆ ಬಂದಿರುವ ಚುನಾವಣಾ ಸಮೀಕ್ಷೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಸ್ಪಷ್ಟವಾಗಿ ತಿಳಿಯುತ್ತದೆ.  ನವೆಂಬರ್ ಡಿಸೆಂಬರ್ ನಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಅಲೆ ಇರುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ.

ಈ ಸಮೀಕ್ಷೆಗಳ ಪ್ರಕಾರ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿ ಸೋಲುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದ್ದರೂ, ಮತದಾರರು ಮತ್ತೆ ಗೆಹ್ಲೋಟ್ ಸರ್ಕಾರಕ್ಕೆ ಮಣೆ ಹಾಕಬಹುದು ಎಂದು ಸಮೀಕ್ಷೆಗಳು ಹೇಳುತ್ತಿದೆ.

ಜುಲೈನಲ್ಲಿ ನಡೆಸಿದ ರಾಜಸ್ಥಾನದ ಸಮೀಕ್ಷೆಯಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಕಾಂಗ್ರೆಸ್ ಗಿಂತ ಮುಂದಿತ್ತು. ಸೆಪ್ಟೆಂಬರ್ ನಲ್ಲಿ ನಡೆದ ಸಮೀಕ್ಷೆಯಲ್ಲಿ (ಇತ್ತೀಚಿನ ಸಮೀಕ್ಷೆ) ಆ ಮುನ್ನಡೆ ಕೇವಲ ನಾಲ್ಕು ಸ್ಥಾನಗಳಿಗೆ ಇಳಿದಿದೆ. ಈಗ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಮಬಲದ ಪೈಪೋಟಿ ಕಂಡುಬರುತ್ತಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸರ್ಕಾರವನ್ನು ಉರುಳಿಸುವ ಗುರಿ ಹೊಂದಿದ್ದ ಬಿಜೆಪಿ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಪರ ಗಾಳಿ ಬೀಸಿರುವುದು ಚಂದ್ರಶೇಖರ್ ರಾವ್ ಅವರ ಆತಂಕಕ್ಕೆ ಕಾರಣವಾಗಿದೆ.

ಛತ್ತೀಸ್ಗಢದಲ್ಲಿ ಬಿಜೆಪಿ ಬಹುಮತ ಗಳಿಸುವುದು ಅಸಾಧ್ಯದ ಮಾತು ಎಂದು ಸಮೀಕ್ಷೆಗಳು ಹೇಳಿವೆ. ಛತ್ತೀಸ್ಗಢದಲ್ಲಿ ಸೋಲು ಅನುಭವಿಸುವ ಸಾಧ್ಯತೆಗಳನ್ನು ಕಂಡುಕೊಂಡಿರುವ ಬಿಜೆಪಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತೀವ್ರ ಕಸರತ್ತು ನಡೆಸಿದೆ.

ವಿಧಾನಸಭಾ ಚುನಾವಣೆಯಲ್ಲಿನ ಪ್ರತಿಕೂಲ ಫಲಿತಾಂಶಗಳು 2024 ರ ಲೋಕಸಭೆ ಚುನಾವಣೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಬಿಜೆಪಿ ಆತಂಕಕ್ಕೊಳಗಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿದೆ ಎಂಬ ನಿರೂಪಣೆಯನ್ನು ಕಟ್ಟಿಕೊಡಬಹುದು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಪ್ರಧಾನಿ ಮೋದಿ ಮೇಲೆ ಹೆಚ್ಚು ಅವಲಂಬನೆ

2014 ರಿಂದ ಬಿಜೆಪಿಯು ಪ್ರಧಾನಿ ಮೋದಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬಿಜೆಪಿಯೊಳಗಿನ ಪ್ರಬಲ ರಾಜ್ಯ ನಾಯಕರನ್ನು ಹಿನ್ನೆಲೆಗೆ ತಳ್ಳುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡಿಕೊಂಡು ಬಂದಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಛತ್ತೀಸ್ಗಢದ ಮಾಜಿ ಸಿಎಂ ರಮಣ್ ಸಿಂಗ್ (ಛತ್ತೀಸ್ಗಢ) ಹಾಗೂ ಕರ್ನಾಟಕ ಮಾಜಿ ಸಿಎಂ ಯಡಿಯೂರಪ್ಪನವರಂತಹ ಪ್ರಬಲ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬುದು ಸ್ಪಷ್ಟವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚೌಹಾಣ್ ಮತ್ತು ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸದಿರಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಕೇಂದ್ರ ನಾಯಕತ್ವ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಕ್ಕಾಗಿಯೇ ಕರ್ನಾಟಕ ಸೋಲಿಗೆ ಬಹುಮುಖ್ಯ ಕಾರಣ ಎನ್ನಬಹುದು. ಪ್ರಧಾನಿ ಮೋದಿ ಅವರ ಮೇಲೆ ಬಿಜೆಪಿ ತೀವ್ರವಾಗಿ ಅವಲಂಬಿತವಾಗಿರುವುದು ಪಕ್ಷಕ್ಕೆ ಹಿನ್ನೆಡೆ ಉಂಟುಮಾಡಲಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗುತ್ತದೆ.

 

Related posts

ಕರ್ನಾಟಕದ ರೈತರು ಮತ್ತು ಜನರಿಗೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ.

 ಕಾಂಗ್ರೆಸ್ ಪಕ್ಷ  ಸಿದ್ಧಾಂತ ಒಪ್ಪಿ ಯಾರೇ ಬಂದ್ರೂ ಸ್ವಾಗತ-ಸಿಎಂ ಸಿದ್ದರಾಮಯ್ಯ.

ನಿಫಾ ವೈರಸ್ ಭೀತಿ: ನಮ್ಮ ರಾಜ್ಯದಲ್ಲಿ ಅಂತ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ-ಆರೋಗ್ಯ ಸಚಿವ ದಿನೇಶ್ ಗುಂಡೂರಾವ್