ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಶಿವಮೊಗ್ಗ ವಿಮಾನ ಹಾರಾಟ ಪ್ರಕ್ರಿಯೆ ಆ. 31ರಿಂದ ಅಧಿಕೃತ ಆರಂಭ- ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಶಿವಮೊಗ್ಗದ ಬಹುದಿನದ, ಬಹುಜನರ ಕನಸಿನ ವಿಮಾನ ಹಾರಾಟ ಪ್ರಕ್ರಿಯೆ ಆ. 31ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ವಿಮಾನ ನಿಲ್ದಾಣಕ್ಕೆ ಪತ್ರಕರ್ತರೊಂದಿಗೆ ಭೇಟಿ ನೀಡಿ, ವೀಕ್ಷಿಸಿ ನಂತರ ಮಾತನಾಡಿ, ವಿಮಾನ ಹಾರಾಟ ಬಹುದಿನದ ಕನಸಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಶ್ರಮದಿಂದ ಇಂದು ಕನಸು ನನಸಾಗುತ್ತಿದೆ. ಆ.31ಕ್ಕೆ ವಿಮಾನ ಹಾರಾಟ ಆಧಿಕೃತವಾಗಿ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 9-50ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 11-05ಕ್ಕೆ ಶಿವಮೊಗ್ಗ ಸೇರುವುದು ಎಂದರು.
ಶಿವಮೊಗ್ಗಕ್ಕೆ ಸೇರುವಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ಮುಖಂಡರು, ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಅಧಿಕಾರಿಗಳು ಸ್ವಾಗತಿಸುತ್ತಾರೆ. ಜಿಲ್ಲೆಯ ಎಲ್ಲಾ ಶಾಸಕರು ಜೊತೆಗಿರುತ್ತಾರೆ. ವಿಮಾನವನ್ನು ನೀರಿನ ಚಿಲುಮೆಯ ಕಮಾನಿನ (ವಾಟರ್ ಸೆಲ್ಯೂಟ್) ಮೂಲಕ ಸ್ವಾಗತಿಸಲಾಗುವುದು ಎಂದರು.
ಈಗಾಗಲೇ ವಿಮಾನ ಪ್ರಯಾಣಕ್ಕೆ ಆನ್‍ಲೈನ್ ಬುಕ್ಕಿಂಗ್ ಆರಂಭವಾಗಿದೆ. ಆದರೆ ಒಂದು ತಿಂಗಳ ತನಕ ಟಿಕೆಟ್ ಸಿಗುತ್ತಿಲ್ಲ. ಅನಂತರ ಸಿಗಬಹುದಾಗಿದೆ. ವಿಮಾನ ಕಂಪೆನಿಯ ತೀರ್ಮಾನದಂತೆ ಟಿಕೆಟ್ ಬೆಲೆಯಲ್ಲಿ ಕೂಡ ಆಗಾಗ ಸಮಯಕ್ಕೆ ಹಾಗೂ ಒತ್ತಡದ ಪ್ರಯಾಣಕ್ಕೆ ಅನುಗುಣವಾಗಿ ಬೆಲೆ ಹೆಚ್ಚಾಗುತ್ತದೆ ಅಥವಾ ಕಡಿಮೆ ಆಗುತ್ತದೆ. ಮೊದಲ ಬುಕ್ಕಿಂಗ್ 2900ರೂ.ಗೆ ಸಿಕ್ಕಿತ್ತು. ಅದು ನಾಲ್ಕು ಸಾವಿರ ದಾಟಿದೆ ಎಂದರು.
ಕೇಂದ್ರ ಸರ್ಕಾರದ ಕೊಡುಗೆಯಂತೆ ವಿಮಾನದ 180 ಸೀಟುಗಳಲ್ಲಿ 90 ಸೀಟುಗಳಿಗೆ ಕೇಂದ್ರ ಸರ್ಕಾರ 2000 ರೂ.ಗಳ ವಿನಾಯಿತಿ ನೀಡುತ್ತದೆ. ಇನ್ನುಳಿದ ಸೀಟುಗಳನ್ನು ವಿಮಾನ ಕಂಪೆನಿಯು ಕಾದಿರಿಸಿಕೊಳ್ಳುತ್ತದೆ. ಶೇ.50ರಷ್ಟು ವಿನಾಯಿತಿ ಸೀಟುಗಳ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಮಾನ ಕಂಪೆನಿಗಳಿಗೆ ತುಂಬಿಕೊಡುತ್ತವೆ ಎಂದರು.
ಶಿವಮೊಗ್ಗದಿಂದ ಬೆಂಗಳೂರಿಗೆ ಹಾರಾಡುವ ವಿಮಾನಗಳಿಗೆ ಸದ್ಯಕ್ಕೆ ಉಡಾನ್ ಯೋಜನೆ ಅನ್ವಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಗೋವಾ, ದೆಹಲಿ, ಹೈದರಾಬಾದಿಗೆ ಹಾರಾಡುವ ವಿಮಾನಗಳಿಗೆ ಉಡಾನ್ ಯೋಜನೆಯಡಿ ಸಬ್ಸಿಡಿ ದೊರೆಯುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆಶಯದಂತೆ ಕೇಂದ್ರ ಸರ್ಕಾರ ಈ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದೆ ಎಂದರು.
ಸ್ಥಳದಲ್ಲಿಯೇ ಟಿಕೆಟ್ ಖರೀದಿಸಲು ಅವಕಾಶವಿದೆ. ವಿಮಾನ ಪ್ರಯಾಣಕ್ಕೆ ಕಳಿಸುವವರಿಗೆ ಮತ್ತು ಸ್ವಾಗತಿಸುವವರಿಗೆ ವಿಮಾನ ನಿಲ್ದಾಣದ ಮುಂಭಾಗದ ವರೆಗೆ ಮಾತ್ರ ಅವಕಾಶವಿದೆ. ವಿಸಿಟರ್ ಟಿಕೆಟ್ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸಲಾಗುವುದು. ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು. ರಾತ್ರಿ ಲ್ಯಾಂಡಿಂಗ್ ಬಗ್ಗೆ ಡಿಸೆಂಬರ್‍ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಅಂಬ್ಯುಲೆನ್ಸ್ ವ್ಯವಸ್ಥೆ ಸಹ ಇದ್ದು, ಅನಾರೋಗ್ಯ ಕಂಡುಬಂದಲ್ಲಿ ಏರ್‍ಪೋರ್ಟ್ ಸಿಬ್ಬಂದಿಗಳೇ ಪ್ರಥಮ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಬಿಜೆಪಿ ಮುಖಂಡರಾದ ಶಿವರಾಜ್, ಟಿ.ಡಿ. ಮೇಘರಾಜ್, ಜ್ಞಾನೇಶ್ವರ್, ಬಿ.ಕೆ. ಶ್ರೀನಾಥ್, ಟಿ, ಹೃಷಿಕೇಶ್ ಪೈ, ವೀರಭದ್ರಪ್ಪ ಪೂಜಾರಿ, ಚಂದ್ರಶೇಖರ್, ಮಾಲತೇಶ್, ಅಣ್ಣಪ್ಪ ಇದ್ದರು.

ಬಾಕ್ಸ್:
ಸರಳತೆ ಮೆರೆದ ಸಂಸದ
ವಿಮಾನ ನಿಲ್ದಾಣದ ವೀಕ್ಷಣೆ ಮತ್ತು ವಿವರಗಳನ್ನು ತಿಳಿಸಲು ಸಂಸದ ರಾಘವೇಂದ್ರ ಅವರು ಇಂದು ಪತ್ರಕರ್ತರ ಜೊತೆ ಬಸ್ಸಿನಲ್ಲಿಯೆ ಪ್ರಯಾಣಿಸಿ ಸರಳತೆ ಮೆರೆದರು.
ಬಸ್ಸಿನ ಮೊದಲ ಸೀಟಿನಲ್ಲಿಯೇ ಕುಳಿತ ಅವರು ಪತ್ರಕರ್ತರೊಂದಿಗೆ ಹಾಸ್ಯ ಚಟಾಕಿಯೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತನಾಡಿ, ವಿಮಾನ ನಿಲ್ದಾಣ ಬೆಳೆದುಬಂದ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಯಾವುದೇ ಬೆಂಗಾವಲು ಪಡೆ ಇಲ್ಲದೆ ಪ್ರಯಾಣಿಸಿದ್ದು ಸರಳತೆಗೆ ಸಾಕ್ಷಿಯಾಯಿತು.

Related posts

ಪ್ರವಾಸೋದ್ಯಮ ಬೆಳೆದರೆ ಸಾಂಸ್ಕೃತಿಕ‌ ಹಿರಿಮೆ ಹೆಚ್ಚಿ ಆರ್ಥಿಕತೆಗೆ ಚೈತನ್ಯ – ಸಿಎಂ ಸಿದ್ದರಾಮಯ್ಯ ನುಡಿ

ರಾಜ್ಯದ ಪ್ರಮುಖ ನಾಯಕರು ಕಾಂಗ್ರೆಸ್‍ ನತ್ತ: ದಿನೇದಿನೇ ಪಕ್ಷ ಜಿಲ್ಲೆಯಲ್ಲಿ ಬಲಯುತವಾಗಿ ಬೆಳೆಯುತ್ತಿದೆ-ಹೆಚ್.ಎಸ್. ಸುಂದರೇಶ್

ಐಐಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಡಿ.ಎಸ್.ಚಂದ್ರಶೇಖರ್ ಅಧಿಕಾರ ಸ್ವೀಕಾರ