ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ನೆಹರೂ ಸ್ಮಾರಕ ಮ್ಯೂಸಿಯಂ ಇನ್ಮುಂದೆ ಪ್ರಧಾನ ಮಂತ್ರಿ ಮ್ಯೂಸಿಯಂ…

ನವದೆಹಲಿ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಹಿಂದಿನ ಯೋಜನೆಗಳ ಮತ್ತು ರೈಲು, ಸ್ಮಾರಕ ಮುಂತಾದವುಗಳ ಹೆಸರನ್ನ ಬದಲಾಯಿಸುತ್ತಿದೆ.

ಅಂತೆಯೇ  ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ‘ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ (ಎನ್ಎಂಎಂಎಲ್) ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ.

‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂಬುದಾಗಿ ಅಧಿಕೃತವಾಗಿ ಮರುನಾಮಕರಣ ಮಾಡಿದೆ.  ಆಗಸ್ಟ್ 14ರಿಂದ ಅಧಿಕೃತವಾಗಿ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ಯು (ಎನ್ಎಂಎಂಎಲ್), ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ (ಪಿಎಂಎಂಎಲ್) ಆಗಿ ಬದಲಾಗಿದೆ.

ಪ್ರಜಾಪ್ರಭುತ್ವೀಕರಣ ಮತ್ತು ವೈವಿಧ್ಯೀಕರಣಕ್ಕೆ ಅನುಗುಣವಾಗಿ ಹೆಸರನ್ನು ಬದಲಾಯಿಸಲಾಗಿದೆ ಎಂದು ಪಿಎಂಎಂಎಲ್ ಉಪಾಧ್ಯಕ್ಷ ಎ. ಸೂರ್ಯ ಪ್ರಕಾಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಎನ್ಎಂಎಂಎಲ್ನ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಜೂನ್ 17ರಂದು ನಡೆದ ವಿಶೇಷ ಸಭೆಯಲ್ಲಿ ಸಂಸ್ಥೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.

ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಜನಾಥ ಸಿಂಗ್, ‘ಈ ಸಂಸ್ಥೆಗೆ ಹೊಸ ರೂಪ ನೀಡಲಾಗಿದೆ. ಜವಾಹರಲಾಲ್ ನೆಹರೂ ಅವರಿಂದ ಹಿಡಿದು ನರೇಂದ್ರ ಮೋದಿ ತನಕ ಎಲ್ಲ ಪ್ರಧಾನಿಗಳ ಕೊಡುಗೆಗಳನ್ನು ಈ ಸಂಸ್ಥೆ ಪ್ರದರ್ಶಿಸುತ್ತದೆ. ಹೀಗಾಗಿ ಸಂಸ್ಥೆಯ ಹೆಸರನ್ನು ಬದಲಾಯಿಸುವ ಪ್ರಸ್ತಾವ ಮಂಡಿಸಿದ್ದು ಸ್ವಾಗತಾರ್ಹ’ ಎಂಬುದಾಗಿ ಹೇಳಿದ್ದರು.

‘ದೇಶದ ಪ್ರಧಾನಿಯೇ ಒಂದು ಸಂಸ್ಥೆ ಇದ್ದಂತೆ. ಅಧಿಕಾರದಲ್ಲಿದ್ದ ಅವಧಿಯ ಅವರ ಪಯಣವನ್ನು ಕಾಮನಬಿಲ್ಲಿನಲ್ಲಿರುವ ಒಂದೊಂದು ಬಣ್ಣಕ್ಕೆ ಹೋಲಿಸಬಹುದು. ಕಾಮನಬಿಲ್ಲು ಕಣ್ಮನ ಸೆಳೆಯಬೇಕು ಎಂದಾದಲ್ಲಿ ಅದರಲ್ಲಿನ ಎಲ್ಲ ಬಣ್ಣಗಳಿಗೆ ಸಮಾನ ಪ್ರಾತಿನಿಧ್ಯ ಇರಬೇಕು. ಅದೇ ರೀತಿ ಎಲ್ಲ ಪ್ರಧಾನಿಗಳ ಕೊಡುಗೆಗಳಿಗೂ ಸರಿಯಾದ ಪ್ರಾತಿನಿಧ್ಯ ಸಿಗಬೇಕು’ ಎಂದು ತಿಳಿಸಿದ್ದರು.

‘ಸಂಸ್ಥೆಯ ಹೆಸರು ಬದಲಾವಣೆ ಮಾಡುವ ಮೂಲಕ ಹಿಂದಿನ ಎಲ್ಲ ಪ್ರಧಾನಿಗಳಿಗೆ ಗೌರವ ನೀಡಿದಂತಾಗಿದೆ. ಈ ನಿರ್ಣಯವು ಪ್ರಜಾಸತ್ತಾತ್ಮಕವಾಗಿಯೂ ಇದೆ’ ಎಂದು ಸಿಂಗ್ ಹೇಳಿಕೊಂಡಿದ್ದರು.

ಬ್ರಿಟಿಷರ ಆಳ್ವಿಕೆ ವೇಳೆ ನಿರ್ಮಿಸಲಾಗಿರುವ ತೀನ್ ಮೂರ್ತಿ ಭವನ, ದೇಶ ಸ್ವಾತಂತ್ರ್ಯ ಪಡೆದ ನಂತರ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು. ನೆಹರೂ ಅವರು ಈ ನಿವಾಸದಲ್ಲಿ 16 ವರ್ಷಗಳಿಗೂ ಹೆಚ್ಚು ಕಾಲ ವಾಸವಾಗಿದ್ದರು. ನೆಹರೂ ಅವರ 75ನೇ ಜನ್ಮದಿನದ ನೆನಪಿಗಾಗಿ 1964ರಲ್ಲಿ ಈ ಭವನದಲ್ಲಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿ, ಸಮರ್ಪಿಸಲಾಯಿತು. ನಂತರ ಇದಕ್ಕೆ ಸ್ವಾಯತ್ತ ಸ್ಥಾನಮಾನ ನೀಡಲಾಯಿತು. ಇದರ ಅಂಗವಾಗಿ 1966ರ ಏಪ್ರಿಲ್ 1ರಂದು ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು ಸ್ಥಾಪಿಸಲಾಯಿತು.

 

Related posts

ಜಿಲ್ಲಾ ಮಟ್ಟದ ಖೋ – ಖೋ :  ತಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಬಾಲಕಿಯರಿಗೆ ಪ್ರಥಮ ಸ್ಥಾನ. 

ಕಲ್ಯಾಣ ಕರ್ನಾಟಕಕ್ಕೆ ಹೋಗಲು ಶಿಕ್ಷಕರ ಹಿಂದೇಟು: ಏಳು ಜಿಲ್ಲೆಗಳಿಗೆ ಬಂದಿದ್ದು ಮಾತ್ರ 74 ಶಿಕ್ಷಕರು.

ತುಂಗಾ ಜಲಾಶಯ ಬಳಿ ಯುವಕ ನೀರು ಪಾಲು.