ಕನ್ನಡಿಗರ ಪ್ರಜಾನುಡಿ
ಕ್ರೈಮ್ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮುಖ್ಯ ರೈಲ್ವೆ ನಿಲ್ದಾಣ ಆವರಣ ಸಮೀಪ ಎರಡು ಪೆಟ್ಟಿಗೆಗಳು ಅನುಮಾನಾಸ್ಪದ ಸ್ಥಿತಿ ಪತ್ತೆ:ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ.

ಶಿವಮೊಗ್ಗ : ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣ ಸಮೀಪ ಭಾನುವಾರ ಬೆಳಿಗ್ಗೆ ಗೋಣಿ ಚೀಲದಲ್ಲಿ ಮುಚ್ಚಿದ್ದ ಎರಡು ಪೆಟ್ಟಿಗೆಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಉಂಟು ಮಾಡಿತ್ತು.
ತಕ್ಷಣ ಸ್ಥಳೀಯ ಆಟೋ ಚಾಲಕರು ಪೊಲೀಸರಿಗೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಅಲರ್ಟ್ ಅದ ಪೊಲೀಸರು ಆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಬಾಕ್ಸ್ ಸುತ್ತ ಪಾಲಿಕೆಯ ಸಹಕರದೊಂದಿಗೆ ಮರಳು ಚೀಲದ ಕೋಟೆ ಕಟ್ಟಿದರು. ಸ್ಥಳೀಯ ವಿಧ್ವಂಸಕ ಪರಿಶೀಲನಾ ತಂಡ ಶ್ವಾನದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬೆಂಗಳೂರಿನಿಂದ ಬಂದಿದ್ದ ಬಾಂಬ್ ನಿಷ್ಕ್ರಿಯ ದಳದವರು ಪೆಟ್ಟಿಗೆ ತೆರೆದಾಗ ಅದರಲ್ಲಿ ರದ್ದಿ ಪೇಪರ್ ಹಾಗೂ ಉಪ್ಪು ಇರುವುದಾಗಿ ತಿಳಿದು ಬಂದಿದ್ದು, ಸಾರ್ವಜನಿಕರಲ್ಲಿದ್ದ ಆತಂಕ ದೂರವಾಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಪೆಟ್ಟಿಗೆಗಳು ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಭಾನುವಾರ ಸಂಜೆ ನಗರಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲು ಮುಂದಾದ ಸಂದರ್ಭದಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದೂಡಲಾಯಿತು.
ರೈಲ್ವೆ ನಿಲ್ದಾಣದ ಪಾಕಿರ್ಂಗ್ ಸ್ಥಳದ ಸಮೀಪ ಪತ್ತೆಯಾದ ಅನುಮಾನಾಸ್ಪದ ಬಾಕ್ಸ್‍ಗಳನ್ನು ತೆರೆಯಲು ಬಾಂಬ್ ನಿಷ್ಕ್ರಿಯ ದಳ ಸ್ಫೋಟಕ ಬಳಕೆ ಮಾಡಿತು. ಎರಡು ಬಾಕ್ಸ್‍ಗಳನ್ನು ಓಪನ್ ಮಾಡಲು ಪ್ರತ್ಯೇಕವಾಗಿ ಸ್ಫೋಟ ನಡೆಸಲಾಯಿತು
ಸ್ಪೋಟಕ ಅಳವಡಿಸಿ ರಾತ್ರಿ 2.40ಕ್ಕೆ ಮೊದಲ ಬಾರಿ ಪೆಟ್ಟಿಗೆಯ ಬೀಗ ಸ್ಫೋಟಿಸಿ ಒಂದು ಪೆಟ್ಟಿಗೆಯನ್ನು ತೆರೆಯಲಾಯಿತು. ಅದರಲ್ಲಿ ಕೆಲವು ನ್ಯೂಸ್ ಪೇಪರ್, ಬಿಳಿ ಬಣ್ಣದ ಪೌಡರ್ ಇರುವ ಪ್ಯಾಕೆಟ್ ದೊರೆತಿದೆ. ರಾತ್ರಿ 3.24ಕ್ಕೆ ಎರಡನೇ ಬಾಕ್ಸ್ ಸ್ಫೋಟಿಸಿ ಮತ್ತೊಂದು ಪೆಟ್ಟಿಗೆಯನ್ನು ತೆರೆಯಲಾಯಿತು. ಅದರಲ್ಲಿಯೂ ನ್ಯೂಸ್ ಪೇಪರ್ ಮತ್ತು ಬಿಳಿ ಬಣ್ಣದ ಪೌಡರ್ ದೊರೆತಿದೆ.
ಗೋಣಿಚೀಲದ ಮೇಲೆ ಫುಡ್ ಗ್ರೇನ್ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆಯಲಾಗಿತ್ತು. ಅದರ ಮೇಲೆ ಕೊಲ್ಕತ್ತಾದ ವ್ಯಕ್ತಿ ಒಬ್ಬರ ವಿಳಾಸ ಬರೆಯಲಾಗಿತ್ತು. ಅನುಮಾನಾಸ್ಪದ ರೀತಿಯಲ್ಲಿ ಪೆಟ್ಟಿಗೆಗಳು ಕಂಡುಬಂದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಪೆಟ್ಟಿಗೆಗಳ ಸುತ್ತ ಮುರಳಿನ ಚೀಲಗಳ ಗೋಡೆ ನಿರ್ಮಿಸಿ, ಸಾರ್ವಜನಿಕರ ಪ್ರವೇಶ ನಿಬರ್ಂಧಿಸಲಾಗಿತ್ತು.
ಶಾಸಕ ಎಸ್.ಎನ್. ಚನ್ನಬಸಪ್ಪನವರು ಸುದ್ದಿತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕ್ಕೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಮತ್ತೆ ರಾತ್ರಿ 1 ಗಂಟೆಯಿಂದಲೇ ಅವರು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಕಾರ್ಯಾಚರಣೆ ಮುಗಿದ ಬಳಿಕ ಇದು ಸ್ಫೋಟಕ ಅಲ್ಲವೆಂದು ತಜ್ಞರು ತಿಳಿಸಿದ ಬಳಿಕ ಜಿಲ್ಲಾ ರಕ್ಷಣಾಧಿಕಾರಿಗಳು ಕೂಡ ಸುದ್ದಿಗಾರರೊಂದಿಗೆ ಮಾತನಾಡಿ, ಈ ಎರಡೂ ಪೆಟ್ಟಿಗೆಗಳು 3ನೇ ತಾರೀಕಿನಂದೇ ಸ್ಥಳದಲ್ಲಿ ಇಟ್ಟುಹೋದ ಬಗ್ಗೆ ಸಿಸಿ ಕ್ಯಾಮೆರಾ ಫೂಟೇಜ್‍ಗಳು ದೊರೆತಿದ್ದು, ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತು ಇವರಲ್ಲಿ ಕ್ರಿಮಿನಲ್ ಹಿನ್ನೆಲೆ ಇರುವುದು ಗೊತ್ತಾಗಿದೆ. ಆದ್ದರಿಂದ ಸಂಪೂರ್ಣ ತನಿಖೆ ನಡೆಸಿದ ಬಳಿಕ ಪೂರ್ತಿ ವಿವರ ನೀಡಲಾಗುವುದು. ಇದರ ಹಿಂದಿನ ಉದ್ದೇಶ ಏನು ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಎಂದರು.
ಇಡೀ ಪ್ರಕರಣ ಶಿವಮೊಗ್ಗದ ಜನತೆಯಲ್ಲಿ ಆತಂಕ ಮೂಡಿಸುವುದರ ಜೊತೆಗೆ ರೈಲ್ವೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸಿದೆ. ರೈಲ್ವೆ ಪಾರ್ಕಿಂಗ್ ಜಾಗದಲ್ಲಿ ಸೂಕ್ತ ವಿದ್ಯುತ್ ದೀಪ ವ್ಯವಸ್ಥೆ ಇಲ್ಲದೆ ಕತ್ತಲೆ ಆವರಿಸಿದೆ. ಮತ್ತು ರೈಲ್ವೆ ಸ್ಟೇಷನ್ ಮುಂಭಾಗದ ಪಾರ್ಕಿಂಗ್ ಜಾಗ ಸಂಪೂರ್ಣ ಕವರ್ ಆಗುವ ರೀತಿಯಲ್ಲಿ ಸಿಸಿ ಕ್ಯಾಮೆರಾ ಅವಳವಡಿಕೆ ಆಗಬೇಕಿದೆ. ಮಹಾನಗರ ಪಾಲಿಕೆಯವರು ಕೂಡ ರೈಲ್ವೆ ನಿಲ್ದಾಣದ ಪಾರ್ಕಿಂಗ್‍ಗೆ ಹೋಗುವ ರಸ್ತೆಯಲ್ಲಿ ಬೀದಿ ದೀಪ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಜಿಲ್ಲಾ ಮಟ್ಟದಲ್ಲಿ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ.

ಕಟೀಲ್ : ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜಮುಖಿ ಕೆಲಸ: ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ…..

ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’: ದೇವರ ಗುಡ್ಡದಲ್ಲಿ ವರ್ಷದ ‘ಭವಿಷ್ಯವಾಣಿ’ ಕಾರಣಿಕ