ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: KAT ಮೊರೆ ಹೋದ ಶಿಕ್ಷಕ ಅಭ್ಯರ್ಥಿಗಳು

ಬೆಂಗಳೂರು: ರಾಜ್ಯದ 13 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಈಗಾಗಲೇ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿ ಕೌನ್ಸಿಲಿಂಗ್ ನಡೆಯುತ್ತಿದೆ. ಇದೀಗ ಮತ್ತೂಂದು ಸುತ್ತಿನ ಕಾನೂನು ಹೋರಾಟಕ್ಕೆ  ಹೋಗಿದ್ದು, ಹೈಕೋರ್ಟ್ ನಿರ್ದೇಶನದಂತೆ ತಮ್ಮ ತಂದೆಯ ಆದಾಯ ಪ್ರಮಾಣಪತ್ರವನ್ನು ಪರಿಗಣಿಸದೆ ಇರುವುದನ್ನು ಆಕ್ಷೇಪಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಟಿ) ಮೊರೆ ಹೋಗಿದ್ದಾರೆ. 

ಹೈಕೋರ್ಟ್ ಇದೇ ತಿಂಗಳ 12ರಂದು ನೇಮಕಾತಿಗೆ ಸಮ್ಮತಿ ನೀಡಿ ತಂದೆಯ ಆದಾಯ ಪ್ರಮಾಣಪತ್ರದ ಕುರಿತು ಅಭ್ಯರ್ಥಿಗಳು ತಮ್ಮ ತಕರಾರನ್ನು ಕೆಎಟಿ ಮುಂದೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದೆಂದು ಆದೇಶಿ ಸಿತ್ತು. ಅದರಂತೆ ಬೆಂಗಳೂರಿನ ಬಿಳೇಕ ಹಳ್ಳಿಯ ಚೈತ್ರಾ ಸಹಿತ 22 ಮಂದಿ ಅಭ್ಯರ್ಥಿಗಳು ಈಗ ಕೆಎಟಿ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ್ ಮತ್ತು ಆಡಳಿತ ಸದಸ್ಯ ಎಸ್.ಶಿವಸೈಲಂ ಅವರಿದ್ದ ಪೀಠ, ಪ್ರತಿವಾದಿ ರಾಜ್ಯ ಸರಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ನೋಟಿಸ್ ಜಾರಿ ಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿ ಅಂತಿಮ ವಿಚಾರಣೆಯನ್ನುನ.6 ಕ್ಕೆ ನಿಗದಿಪಡಿಸಿದೆ.

ಅಲ್ಲದೆ, ಅರ್ಜಿ ವಿಲೇವಾರಿಗೆ ಸರಕಾರದ ಉತ್ತರ ಅತ್ಯಾವಶ್ಯಕವಾಗಿದೆ. ಹಾಗಾಗಿ ಯಾವುದೇ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದರೆ ಅದು ಈ ಅರ್ಜಿಯ ತೀರ್ಪಿಗೆ ಒಳಪಡುತ್ತದೆ ಎಂದು ಕೆಎಟಿ ಹೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಕೆ. ಸತೀಶ್ ಭಟ್, ನಿಯಮದಂತೆ ತಂದೆಯ ಆದಾಯ ಪ್ರಮಾಣಪತ್ರವನ್ನು ಮಾತ್ರ ಪರಿಗಣಿಸಬೇಕೇ ಹೊರತು ಪತಿಯ ಆದಾಯವನ್ನಲ್ಲ. ಸುಪ್ರೀಂಕೋರ್ಟ್ ಕೂಡ ಎಲ್ಲ ಅಂಶಗಳನ್ನು ಪರಿಗಣಿಸಿ ಸುರೇಂದ್ರ ಸಿಂಗ್ ವರ್ಸಸ್ ಪಂಜಾಬ್ ಎಲೆಕ್ಟ್ರಿಕ್ಸಿಟಿ ಬೋರ್ಡ್ ಹಾಗೂ ಇತರರು ಪ್ರಕರಣದಲ್ಲಿ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸಬೇಕು ಎಂದು ಆದೇಶಿಸಿದೆ ಎಂದರು.

ಅಲ್ಲದೆ, ಕರ್ನಾಟಕ ಹೈಕೋರ್ಟ್ ಕೂಡ ಸ್ಟೇಟ್ ಆಫ್ ಕರ್ನಾಟಕ ವರ್ಸಸ್ ಯೋಗೇಶ್ವರಿ ಪ್ರಕರಣದಲ್ಲಿ ಪೋಷಕರ ಆದಾಯ ಪ್ರಮಾಣಪತ್ರವನ್ನೇ ಪರಿಗಣಿಸ ಬೇಕು ಎಂದು ಆದೇಶಿಸಿದೆ. ಅದರಂತೆ ಈ ಪ್ರಕರಣದಲ್ಲೂ ಅರ್ಜಿದಾರರು ಸಲ್ಲಿಸಿರುವ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಿ ಅವರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಆದೇಶ ನೀಡಬೇಕೆಂದು ಕೋರಿದ್ದಾರೆ.

 

Related posts

ನಾಡಹಬ್ಬ ದಸರಾ: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶ ಸದುಪಯೋಗಪಡಿಸಿಕೊಳ್ಳಿ-ಮೇಯರ್ ಶಿವಕುಮಾರ್

ಎಪಿಎಂಸಿ ಪರವಾನಗಿದಾರರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಆಗ್ರಹ

ಸಾಮರಸ್ಯ ಹರಡಲು ಗಣೇಶ ಸೃಷ್ಟಿಯ ರೂಪಕ-ಡಾ.ಪ್ರಶಾಂತ ನಾಯಕ್‌