ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕೇರಳ ಗಡಿನಾಡ ಘಟಕದ  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಅವರಿಗೆ ಪರಿಷತ್ತಿನಲ್ಲಿ ನುಡಿನಮನ

ಬೆಂಗಳೂರು: ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಿತ್ಯ ಕಟಿಬದ್ಧರಾಗಿ, ಹಲವಾರು ಜಿಲ್ಲಾ-ತಾಲ್ಲೊಕು ಸಾಹಿತ್ಯ, ಸಮ್ಮೇಳನಗಳು ಸೇರಿದಂತೆ  ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ, ಯಶಸ್ವಿಯಾಗಿಸುವ ಮೂಲಕ ಕನ್ನಡ- ಕನ್ನಡಿಗ- ಕರ್ನಾಟಕ ಎನ್ನುವ ವಿಷಯ ಬಂದಾಗ ಎಂದೂ ಸುಮ್ಮನೆ ಕುಳ್ಳಿತುಕೊಳ್ಳುವ  ಪ್ರಮೇಯವೇ ಇಲ್ಲ ಎನ್ನುತ್ತಾ ಕನ್ನಡದ ಸೇವೆಗೆ ಕಂಕಣ ಬದ್ದರಾಗಿ ಕನ್ನಡ ಸೇವೆ ಸಲ್ಲಿಸಿದವರು ಶ್ರೀ ಸುಬ್ರಹ್ಮಣ್ಯ ವಿ. ಭಟ್‌.  ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ  ಅವರು ನಮ್ಮನ್ನು  ಹಠಾತ್‌ ಅಗಿಲಿರುವುದು ದುಖಃಕರ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಂತಾಪ ಸೂಚಿಸಿದರು.

 ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಭವನದಲ್ಲಿ ಹಮ್ಮಿಕೊಂಡ ಶ್ರೀ ಸುಬ್ರಹ್ಮಣ್ಯ ವಿ. ಭಟ್‌ ಅವರಿಗೆ ಶ್ರದ್ದಾಂಜಲಿ ಹಿನ್ನೆಲೆಯ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಸಿ ಸುಬ್ರಹ್ಮಣ್ಯ ಭಟ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ಸುಬ್ರಹ್ಮಣ್ಯ ವಿ.ಭಟ್  ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲಕೋಡು ಗ್ರಾಮದವರು. ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು ಕುಂಬಳೆ, ಆಡೂರು, ಕಾರಡ್ಕ, ಮುಳ್ಳೇರಿಯದ, ಕಾಸರಗೋಡು, ಸೇರಿದಂತೆ ಹಲವೆಡೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸಲು ಶಾಲೆಗಳಲ್ಲಿ ಕಲಾವೇದಿಕೆ ಶುರುಮಾಡಿದ್ದಲ್ಲದೇ , ಸಾಹಿತ್ಯ ಅಭಿಯಾನ ಕಾರ್ಯಕ್ರಮ ಸಂಘಟಿಸಿದ್ದರು. ಸತತ ಮೂರು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಭಟ್‌ರು ಕಾಸರಗೋಡಿನ ಬೀರಂತಬೈಲಿನಲ್ಲಿ ವಾಸಿಸುತ್ತಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡ ಸುಬ್ರಹ್ಮಣ್ಯ ವಿ. ಭಟ್ಟ ಅವರು ನಿನ್ನೆ (ಸೆಪ್ಟಂಬರ್‌ ೧೦)  ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಅರಳಿ ನಾಗರಾಜ ಅವರು ಕಾರ್ಯಕ್ರಮವೊಂದಕ್ಕೆ ಎಂದು ಕಾಸರಗೋಡಿಗೆ ತೆರಳಿದ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅವರಿಗೆ ಕನ್ನಡದ ಶಾಲು ಹೊದಿಸಿ, ಹಾರಹಾಕಿ ಸ್ಮರಣಿಕೆ ನೀಡುಲು ಮುಂದಾಗ ಅವರಿಗೆ  ಹೃದಯಾಘಾತ ಸಂಭವಿಸಿ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು  ಕಾಸರಗೋಡಿನ ಇ.ಕೆ ನಾಯ್ನರ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀ ಸುಬ್ರಹ್ಮಣ್ಯ ವಿ. ಭಟ್ಟ  ಅವರು ನಮ್ಮನ್ನು ಅಗಲಿದ್ದಾರೆ. ಉತ್ತಮ ವಿದ್ಯಾರ್ಥಿ ಸಮೂಹವನ್ನು ನಾಡಿಗೆ ಕೊಡುವ ಮೂಲಕ ನಾಡು‌ಕಟ್ಟಿದ್ದವರು. ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೂ ಅಪಾರ ಕೊಡುಗೆ ನೀಡಿದ ಅವರ  ಅಕಾಲಿಕ ಸಾವಿನಿಂದ  ಕನ್ನಡ ಸಾಹಿತ್ಯ ಪರಿಷತ್ತಿಗೆ ಆಘಾತ ಉಂಟಾಗಿದೆ.  ಭಟ್ಟರ ಕನ್ನಡ ನಿಷ್ಟೆ, ಭಾಷಾ ಪ್ರೇಮ ನಮ್ಮೆಲ್ಲರಿಗೂ ಮಾದರಿ. ಉಮನ್‌ ಚಾಂಡಿಯವರು ಕೇರಳದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಕನ್ನಡದಲ್ಲಿಯೇ ಮನವಿ ಪತ್ರವನ್ನು ನೀಡುವ ಮೂಲಕ ಕಾಸರಗೋಡಿನ ಕನ್ನಡಿಗರ ನೋವನ್ನು ಅವರ ಗಮನಕ್ಕೆ ತಂದಿದ್ದರು. ಭಟ್ಟರ ಕಾಳಜಿಯುಕ್ತ ಮನವಿಗೆ  ಸಕಾರಾತ್ಮಕವಾಗಿ ಸ್ಪಂದಿಸಿ ಆಗಿನ ಕೇರಳದ ಮುಖ್ಯಮಂತ್ರಿಗಳು  ತಮ್ಮಿಂದಾದ ಸಹಾಯ ಮಾಡುವ ಭರವಸೆಯನ್ನು  ನೀಡಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಸಬ್ರಹ್ಮಣ್ಯ ಭಟ್‌ ಅವರ ದಕ್ಷತೆಯನ್ನು ನೆನೆದುಕೊಂಡರು.

ನಮ್ಮ ಸೈನಿಕರು ದೇಶದ ಗಡಿಕಾಯುತ್ತಾರೆ, ಆದರೆ ಭಟ್ಟರು ಗಡಿಯಲ್ಲಿ ಕನ್ನಡ ಕಾಯುವ ಕನ್ನಡದ ಸೈನಿಕರಾಗಿದ್ದರು. ಕನ್ನಡದ ಸೇವೆಗಾಗಿಯೇ ತನ್ನ ತನು ಮನ ಎಂದು ಹೇಳುತ್ತಿರುವ ಅವರು ಕೊನೆಯಲ್ಲಿ ಕನ್ನಡದ ಕಾರ್ಯಕ್ರಮವೊಂದರಲ್ಲಿಯೇ ಹೋಗಿರುವುದನ್ನು ಕಂಡರೆ ಅವರು ಕನ್ನಡದ ಕರ್ಮಯೋಗಿಯಾಗಿದ್ದರು ಎನ್ನುವುದು ಸತ್ಯ. ಮೃತರ ಆತ್ಮಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ  ಸೂಚಿಸುತ್ತಿದೆ.  ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮತ್ತು ಕುಟುಂಬ ವರ್ಗಕ್ಕೆ ಹಾಗೂ ಸಮಸ್ತ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು‌ ಕಂಬನಿ ಮಿಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ,ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ.ಬಿ.ಎಮ್‌.ಪಟೇಲ್‌ ಪಾಂಡು, ಪ್ರಕಟಣಾ ವಿಭಾಗದ ಮುಖ್ಯಸ್ಥ ಪ್ರೊ. ಎನ್‌.ಎಸ್‌.ಶ್ರೀಧರಮೂರ್ತಿ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರದ್ಧಾಂಜಲಿ ಸಭೆಯಲ್ಲಿ ಹಾಜರಿದ್ದರು.

 ಛಾಯಾಚಿತ್ರ:  ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಭವನದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ  ಶ್ರೀ ಸುಬ್ರಹ್ಮಣ್ಯ ವಿ. ಭಟ್‌ ಅವರಿಗೆ ಶ್ರದ್ದಾಂಜಲಿ ಹಿನ್ನೆಲೆಯ ನುಡಿನಮನ ಸಲ್ಲಿಸಲಾಯಿತು.

Related posts

‘ಮಹಿಳಾ ಮೀಸಲಾತಿ ಮಸೂದೆ:ಲೋಕಸಭೆಯಲ್ಲಿ ಅಂಗೀಕಾರ..

ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ..

ಏಕಾಏಕಿ ಕುಸಿದು ಬಿದ್ದ ನರ್ಸರಿ  ಶಾಲೆಯ ಕಟ್ಟಡ: ತಪ್ಪಿದ ಬಾರಿ ಅನಾಹುತ..