ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಬಳಸಿ: ರಾಜ್ಯ ಸರ್ಕಾರದಿಂದ ಆದೇಶ.

ಬೆಂಗಳೂರು: ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಪಟಾಕಿ ದುರಂತದಲ್ಲಿ 14 ಜನರು ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಪಟಾಕಿ ಮಾರಾಟ ಬಳಕೆಗೆ ನಿರ್ಬಂಧ ವಿಧಿಸಿದೆ. ಈ ಮಧ್ಯೆ  ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಬಳಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಯನ್ನು ಉಲ್ಲೇಖಿಸಿ ಈ ಸುತ್ತೋಲೆ ಹೊರಡಿಸಿರುವ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಎಲ್ಲ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಈ ನಿಯಮ ಕಡ್ಡಾಯ ವಾಗಿ ಅನುಸರಿಸಬೇಕು.

ಸುಪ್ರೀಂ ಕೋರ್ಟ್ ಆದೇಶಗಳನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಧೀನ ಅಧಿಕಾರಿಗಳ ಗಮನಕ್ಕೆ ತಂದು, ಆದೇಶ ಪಾಲಿಸಲು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಕಾರ್ಯಪಡೆಗಳನ್ನು ರಚಿಸಿ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು. ಹಸಿರು ಪಟಾಕಿ ಹೊರತುಪಡಿಸಿ ಇತರ ಯಾವುದೇ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದರೆ ಗೋದಾಮು ಮುಟ್ಟಗೋಲು ಹಾಕಬೇಕು. ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದೆಮೆ ಹೂಡಬೇಕು ಎಂದೂ  ಆದೇಶ ನೀಡಿದ್ದಾರೆ.

ಎಲ್ಲ ಹಸಿರು ಪಟಾಕಿಗಳ ಮೇಲೆ ಮತ್ತು ಅವುಗಳ ಪ್ಯಾಕೆಟ್ ನ ಮೇಲೆ ಹಸಿರು ಪಟಾಕಿಯ ಚಿಹ್ನೆ ಮತ್ತು ಕ್ಯೂಆರ್ ಕೋಡ್ ಇರುತ್ತದೆ. ಸಂಬಂಧಪಟ್ಟ ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಈ ಚಿಹ್ನೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿ ಆಗಿರುವುದಿಲ್ಲ. ಅವುಗಳನ್ನು ಮುಟ್ಟಗೋಲು ಹಾಕಬೇಕು. ಯಾವುದೇ ಹಸಿರು ಪಟಾಕಿಗಳ ಪ್ಯಾಕೆಟ್ ಗಳನ್ನು ರ್ಯಾಂಡಮ್ ಆಗಿ ಸಂಗ್ರಹಿಸಿ ನಿಗದಿತ ವಿಧಿ ವಿಧಾನಗಳ ಮೂಲಕ ಅವುಗಳ ಶಬ್ದದ ಮಟ್ಟ ಮಾಪನಕ್ಕೆ ಸೂಚಿಸಲಾಗಿದೆ.

ಹೊರ ರಾಜ್ಯಗಳಿಂದ ನಿಷೇಧಿತ ಪಟಾಕಿ ಗಳನ್ನು ಸಾಗಣೆ ಮಾಡುತ್ತಿದ್ದರೆ ವಾಣಿಜ್ಯ ಇಲಾಖೆ ಮುಟ್ಟಗೋಲು ಹಾಕಿಕೊಳ್ಳಬೇಕು. ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

Related posts

ಟ್ವಿಟ್ಟರ್ ಬಳಕೆದಾರರೇ ಗಮನಿಸಿ : ಇನ್ಮುಂದೆ ಸಿಗುತ್ತೆ ಆಡಿಯೋ ವಿಡಿಯೋ ಕಾಲ್ ಸೌಲಭ್ಯ..

ಹುತಾತ್ಮ ಸಿಬ್ಬಂದಿಯ ಗುಂಪು ವಿಮಾ ಮೊತ್ತ 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ : ಸಿಎಂ ಸಿದ್ದರಾಮಯ್ಯ.

ಜಲ ವಿವಾದ: ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸರ್ವರ ಸಹಕಾರ ಕೋರಿದ ಸಿಎಂ ಸಿದ್ದರಾಮಯ್ಯ