ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬಗರ್‍ಹುಕುಂ ಮತ್ತು ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು-ತೀ.ನ. ಶ್ರೀನಿವಾಸ್

ಶಿವಮೊಗ್ಗ: ಮಲೆನಾಡು ಭಾಗದ ರೈತರ ಪ್ರಮುಖ ಸಮಸ್ಯೆಯಾದ ಬಗರ್‍ಹುಕುಂ ಮತ್ತು ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಮಲೆನಾಡು ಹೋರಾಟ ಸಮಿತಿಯ ಪ್ರಮುಖ ಸಂಚಾಲಕ ತೀ.ನ. ಶ್ರೀನಿವಾಸ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಸುಮಾರು 11 ಮಲೆನಾಡು ಜಿಲ್ಲೆಗಳಲ್ಲಿ ಬಗರ್‍ಹುಕುಂ ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆ ಜೀವಂತವಾಗಿದೆ. ಯಾವ ಸರ್ಕಾರಗಳು ಬಂದರೂ ಕೂಡ ಸಮಸ್ಯೆಯನ್ನು ಬಗೆಹರಿಸಲಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಈ ಸಮಸ್ಯೆಯನ್ನು ಜೀವಂತವಾಗಿಟ್ಟುಕೊಂಡಿವೆ ಎಂದರು.
ಬಿಜೆಪಿ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಈ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಮಾತು ಕೊಟ್ಟಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿವಮೊಗ್ಗಕ್ಕೆ ಬಂದಾಗ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದರು. ಸರ್ಕಾರ ಅಧಿಕಾರಕ್ಕೆ ಬಂದು 165ದಿನಗಳಾದರೂ ಕೂಡ ಈ ಬಗ್ಗೆ ಇಚ್ಚಾಸಕ್ತಿ ಪ್ರದರ್ಶಿಸುತ್ತಿಲ್ಲ. ಎಂದರು.
ಸರ್ಕಾರ ಹೇಗೆ ಉಚಿತ ಭಾಗ್ಯಗಳನ್ನು ನೀಡುತ್ತದೆಯೋ ಅದಕ್ಕಿಂತ ಮುಖ್ಯವಾಗಿ ರೈತರಿಗೆ ಭೂಮಿ ಭಾಗ್ಯ ನೀಡುವುದು ಮುಖ್ಯವಾಗಿದೆ. ಹಲವು ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಕಂದಾಯ ಭೂಮಿಗಳ ಸಮಸ್ಯೆ ಸ್ಪಲ್ಪ ಮಟ್ಟಿಗೆ ಬಗೆಹರಿದಿದೆಯಾದರೂ ಅರಣ್ಯ ಭೂಮಿಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈ ಸಮಸ್ಯೆ ಮುಂದಿಟ್ಟುಕೊಂಡು ಪಾದಯಾತ್ರೆ ಕೂಡ ಮಾಡಿದ್ದರು. ಅಧಿಕಾರ ಸಿಕ್ಕಕೂಡಲೆ ಅವರಿಗೆ ಅದು ಮರೆತುಹೋಗಿದೆ. ರೈತರ ಋಣ ತೀರಿಸಲು ಅವರಗೊಂದು ಅವಕಾಶವಿದೆ. ಅದನ್ನು ಅವರು ಬಳಸಿಕೊಳ್ಳಬೇಕು ಎಂದರು.
ರೈತರ ನೆರವಿಗೆ ನಾವಿದ್ದೇವೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರದಲ್ಲಿ ಕೂಡ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಈಗಾಗಲೇ ಹಲವರಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ಈಬಗ್ಗೆ ಸರ್ಕಾರ ಸುಮ್ಮನಿದೆ. ಜಿಲ್ಲೆಯ ಸುಮಾರು 2ಲಕ್ಷ ಕುಟುಂಬಗಳು ಈ ಸಮಸ್ಯೆಗೆ ಸಿಲುಕಿಕೊಂಡಿವೆ. ರಾತೋರಾತ್ರಿ ರೈತರ ತೋಟಗಳನ್ನು ನಾಶ ಮಾಡಲಾಗಿತ್ತು. ಆ ಬಗ್ಗೆ ಕೂಡ ಸಚಿವ ಮಧು ಬಂಗಾರಪ್ಪ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು.
ಕೇಂದ್ರದ 1980ರ ಅರಣ್ಯ ಕಾಯ್ದೆತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದರೆ ಸಾಕು ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಬಗರ್‍ಹುಕುಂ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿಗೆ ಸಂಬಂಧಿಸಿದಂತೆ ಸುಮಾರು 2.30 ಲಕ್ಷ ಹೆಕ್ಟೇರ್ ಸಾಗುವಳಿಗೆ ಹಕ್ಕುಪತ್ರ ನೀಡಬೇಕಾಗುತ್ತದೆ. ಹಾಗೆಯೇ ಶರಾವತಿ, ಸಾವೆ, ಕಟ್ಟೆಹಕ್ಲು, ಸಂತ್ರಸ್ತರ ಸಮಸ್ಯೆಗಳು ಕೂಡ ಹಾಗೇ ಉಳಿದಿವೆ. ಸುಮಾರು 9600ಜನರಿಗೆ ಹಕ್ಕುಪತ್ರ ನೀಡಬೇಕಾಗಿದೆ. ಈಗಾಗಲೇ 3,600 ಜನರಿಗೆ ಹಕ್ಕುಪತ್ರ ಕೊಟ್ಟಿದ್ದು ಕೂಡ ವ್ಯರ್ಥವಾಗಿದೆ. ಸುಮಾರು 50ಸಾವಿರ ಕುಟುಂಬಗಳು ಈ ಸಮಸ್ಯೆ ಎದುರಿಸುತ್ತಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾವiಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವರು ಶಿವಮೊಗ್ಗದಲ್ಲಿಯೇ ಕಂದಾಯ, ಅರಣ್ಯ ವಿಭಾಗದ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಬೇಕು ಶೀಘ್ರದಲ್ಲಿಯೇ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಜನಮೇಜಿ ರಾವ್, ಮಹದೇವ್ ಇದ್ದರು.

Related posts

ಗಂಗಾ ಕಲ್ಯಾಣ: ಬಾಕಿ ಅರ್ಜಿಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ  ಸೂಚನೆ.

ಶಿಕ್ಷಣ ವ್ಯಕ್ತಿತ್ವ ನಿರ್ಮಾಣದ ಜತೆ ಸಂಯಮ ವೃದ್ಧಿ-ಕೆ.ಗಂಗಪ್ಪಗೌಡ

ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ: ಸೀಟು ಹೊಂದಾಣಿಕೆ ಬಗ್ಗೆ ಭಿನ್ನಾಭಿಪ್ರಾಯವಿಲ್ಲ- ಮಾಜಿ ಸಿಎಂ ಹೆಚ್.ಡಿಕೆ.