ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಪಘಾತದಲ್ಲಿ ಸಾವನ್ನಪ್ಪುವ ಸಂಖ್ಯೆಯಲ್ಲಿ ಯುವ ಸಮೂಹವೇ ಹೆಚ್ಚು- ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕಳವಳ.

ಶಿವಮೊಗ್ಗ: ಅಪಘಾತದಲ್ಲಿ ಸಾವನ್ನಪ್ಪುವ ಸಂಖ್ಯೆಯಲ್ಲಿ ಯುವ ಸಮೂಹವೇ ಹೆಚ್ಚು ಇದ್ದು, ಸಂಚಾರ ನಿಯಮಗಳ ಪಾಲಿಸದೇ ಇರುವುದು ಅಪಘಾತಗಳಿಗೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸುರಕ್ಷಿತ ವಾಹನ ಚಾಲನೆ ಹಾಗೂ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇದರಿಂದ ಅಪಘಾತ ಪ್ರಮಾಣ ಕಡಿಮೆ ಆಗುತ್ತದೆ. ಹೆಲ್ಮೆಟ್ ಧರಿಸುವುದು ನಿಯಮ ಪಾಲನೆ‌ ಎನ್ನುವುದಕ್ಕಿಂತ ಹೆಚ್ಚಾಗಿ ಸ್ವಯಂ ರಕ್ಷಣೆ ಎಂದು ಅರಿತುಕೊಳ್ಳಬೇಕು. ಐಎಸ್ ಐ ಮುದ್ರಿತ ಪೂರ್ಣ ಹೆಲ್ಮೆಟ್ ಬಳಸಬೇಕು. ಸಿಗ್ನಲ್ ಜಂಪ್ ಮಾಡಬಾರದು. ಅಡ್ಡಾದಿಡ್ಡಿ ವಾಹನ ಚಲಾಯಿಸಬಾರದು ಎಂದು ತಿಳಿಸಿದರು.

ವಾಹನ ಚಾಲನೆ ಸ್ವಾತಂತ್ರ್ಯ ದ ಜತೆ ನಿಯಮಗಳ ಪಾಲಿಸುವ ಜವಾಬ್ದಾರಿಯು ಇರುತ್ತದೆ. ವಿವೇಚನಾ ಶಕ್ತಿ ಹೊಂದಿರುವ ಯುವ ಸಮೂಹ ಸುರಕ್ಷಿತ ವಾಹನ‌‌ ಚಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. 18 ವರ್ಷಕ್ಕಿಂತ ಮೊದಲು ವಾಹನ ಚಲಾಯಿಸಬಾರದು ಎಂದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್.ಎಚ್.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ವಿಶೇಷವಾಗಿ ಸುರಕ್ಷಿತ ವಾಹನ ಚಾಲನೆ ಹಾಗೂ ರಸ್ತೆ ಸುರಕ್ಷತೆ‌ ನಿಯಮಗಳ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಸಂಚಾರ ನಿಯಮಗಳ ಬಗ್ಗೆ ಪೋಷಕರಿಗೂ ತಿಳಿಸುವ ಜತೆಯಲ್ಲಿ ಪಾಲಿಸುವಂತೆ ಅರಿವು ಮೂಡಿಸಬೇಕು ಎಂದರು.

ರೋಟರಿ ಜಿಲ್ಲಾ ಯೋಜನಾ ಚೇರ‍್ಮನ್ ವಸಂತ್ ಹೋಬಳಿದಾರ್ ಮಾತನಾಡಿ, ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ಆಗಿದ್ದು, ನೂರಾರು ದೇಶಗಳಲ್ಲಿ ಸಂಘಟನೆ ಹೊಂದಿದೆ. ಲಕ್ಷಾಂತರ ರೋಟರಿ ‌ಸದಸ್ಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪಲ್ಸ್ ಪೋಲಿಯೊ ನಿರ್ಮೂಲನೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಸಂಸ್ಥೆ ರೋಟರಿ ಎಂದು ಹೇಳಿದರು.

ಪ್ರಸ್ತುತ ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಕೆಲಸ‌ ಮಾಡುತ್ತಿದ್ದು, ಆರೋಗ್ಯ ಜಾಗೃತಿ, ಸಾಮಾಜಿಕ ವಿಷಯಗಳ ಅರಿವು ಸೇರಿದಂತೆ ‌ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ವರ್ಷ ಮೌಲ್ಯಾಧಾರಿತ ಶಿಕ್ಷಣ, ಮಣ್ಣಿನ ಸಂರಕ್ಷಣೆ, ಇ ತ್ಯಾಜ್ಯ ಸಮರ್ಪಕ ವಿಲೇವಾರಿ ಹಾಗೂ ಸಂಚಾರ ‌ಸುರಕ್ಷತೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ‌ ಆಶಯವಾಗಿದೆ ಎಂದು ತಿಳಿಸಿದರು.

ವಲಯ ಸಂಯೋಜಕ ರಮೇಶ್ ಎನ್. ಮಾತನಾಡಿ,  ವಾಹನ ಚಲಾಯಿಸುವಾಗ ಹಾಫ್ ಹೆಲ್ಮೆಟ್ ಧರಿಸುವುದು ತಪ್ಪು. ಎಲ್ಲರೂ ‌ಪೂರ್ಣ ಹೆಲ್ಮೆಟ್ ಧರಿಸಬೇಕು. ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಸಿಸಿ ಕ್ಯಾಮರಾ ಆಧರಿಸಿ ದಂಡ ಕಳುಹಿಸುವ ವ್ಯವಸ್ಥೆ ಶಿವಮೊಗ್ಗ ಪೊಲೀಸ್ ಇಲಾಖೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ಸುರಕ್ಷಿತ ವಾಹನ ಚಾಲನೆ ಹಾಗೂ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸ ನೀಡಿದರು.

ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಎಎಸ್ ಪಿ  ಅನಿಲ್ ಕುಮಾರ್ ಎಸ್.ಭೂಮರೆಡ್ಡಿ, ಟ್ರಾಫಿಕ್ ಪೊಲೀಸ್ ವೃತ್ತ ನೀರಿಕ್ಷಕ ಸಂತೋಷ್ ಕುಮಾರ್ ಡಿ.ಕೆ., ಪೀಟರ್ ಸೈಮನ್, ವಲಯ 11ರ ಸಹಾಯಕ ಗವರ್ನರ್ ರವಿ ಕೋಟೋಜಿ, ವಲಯ ಪ್ರತಿನಿಧಿ ಧರ್ಮೇಂದರ್ ಸಿಂಗ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಕಿರಣ್ ಕುಮಾರ್.ಜಿ. ಉಪಸ್ಥಿತರಿದ್ದರು.

Related posts

ಅಪೌಷ್ಠಿಕತೆ: ಭಾರತ, ಗುಜರಾತ್ ಸೂಚ್ಯಂಕ ಏರಿಕೆ: ಏಕೆ ಹೀಗಾಯ್ತು ವಿಶ್ವಗುರು ಉತ್ತರಿಸಬೇಕು-ಕುಟುಕಿದ ಸಿಎಂ ಸಿದ್ದರಾಮಯ್ಯ

ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಸಮಾಜಮುಖಿ ಕೆಲಸಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ- ಎಸ್.ಪಿ.ದಿನೇಶ್