ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತುಂಗಾ ಉಳಿಸಿ ಜಾಗೃತಿ : ಛಾಯಾಚಿತ್ರ ಪ್ರದರ್ಶನ ಮತ್ತು ನದಿ ಉಳಿಸೋಣ ಕಾರ್ಯಕ್ರಮ.

ಶಿವಮೊಗ್ಗ: ನಿರ್ಮಲ ತುಂಗಾ ಅಭಿಯಾನ, ಗೋಪಾಳದ ಚಂದನವನ ಪಾರ್ಕ್ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ತುಂಗಾ ಉಳಿಸಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು ನದಿ ಉಳಿಸೋಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಿಸರವಾದಿ ಪ್ರೊ. ಬಿ.ಎಂ. ಕುಮಾರಸ್ವಾಮಿ ಇಂದು ತುಂಗೆ ಸಾಕಷ್ಟು ಮಲಿನಗೊಂಡಿದ್ದಾಳೆ. ಶೃಂಗೇರಿಯಿಂದ ಹಿಡಿದು ಶಿವಮೊಗ್ಗದವರೆಗೂ ಕೊಳಚೆಯನ್ನು ತುಂಬಿಕೊಂಡೇ ಹರಿಯುತ್ತಿದ್ದಾಳೆ. ತುಂಗಾಪಾನ ಗಂಗಾ ಸ್ನಾನ ಎಂಬ ಮಾತುಈಗ ಸುಳ್ಳಾಗಿದೆ. ಕುಡಿಯಲು ಇರಲಿ, ಬಳಸಲು ಕೂಡ ತುಂಗಾ ನೀರು ಯೋಗ್ಯವಾಗಿಲ್ಲ ಎಂದರು.
ಶುದ್ಧೀಕರಣ ಘಟಕಗಳನ್ನು ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ ಮಾಡಿಲ್ಲ. ನದಿಗೆ ಸಾರ್ವಜನಿಕರು ತಮ್ಮ ದಿಂಬು ಹಾಸಿಗೆಯಿಂದ ಹಿಡಿದು ಹೋಟೆಲ್‍ಗಳವರು ಮಾಂಸ, ದನಕರುಗಳ ಶವಗಳನ್ನು ಕೂಡ ಎಸೆಯುತ್ತಿದ್ದಾರೆ. ಜಲಚರ ಪ್ರಾಣಿಗಳೆಲ್ಲ ಸತ್ತು ಹೋಗಿವೆ. ಈ ಜಲಜಾಗೃತಿ ಜನಜಾಗೃತಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಲ ತುಂಗಾ ಅಭಿಯಾನ ಕಳೆದ ಒಂದು ವರ್ಷದಿಂದ ತುಂಗಾ ನದಿ ಉಳಿವಿಗಾಗಿ ಹೋರಾಡುತ್ತಾ ಬಂದಿದೆ ಎಂದರು.
ಡಾ. ಶ್ರೀಪತಿ ಮಾತನಾಡಿ, ಸಾರ್ವಜನಿಕರು ಎಲ್ಲೋ ಎಸೆದ ಒಂದು ಪ್ಲಾಸ್ಟಿಕ್ ವಸ್ತು ಸಹ ರಾಜಕಾಲುವೆಗಳ ಮೂಲಕ ತುಂಗಾ ನದಿ ಸೇರುತ್ತದೆ. ಜೊತೆಗೆ ನದಿಯ ಆಸುಪಾಸಿನ ಗದ್ದೆ-ತೋಟಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಕೂಡ ನದಿಗೆ ಸೇರುತ್ತಿವೆ. ಶುದ್ಧ ಕುಡಿಯುವ ನೀರಿನ ಸವiಸ್ಯೆ ಸಾಕಷ್ಟಿದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾವು ನಿರ್ಮಲ ತುಂಗಾ ಅಭಿಯಾನದ ಮೂಲಕ ಗಾಜನೂರಿನಿಂದ ಹೊನ್ನಾಳಿಯವರೆಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜೊತೆಗೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಈ ಜಾಗೃತಿ ಕ್ರಮ ನಿರಂತರವಾಗಿ ನಡೆಯುತ್ತಿದೆ ಎಂದರು.
ನಿವೃತ್ತ ಇಂಜಿನಿಯರ್ ಎ. ಹಾಲೇಶಪ್ಪ ಮಾತನಾಡಿ, ನದಿಯ ನೀರು ಸ್ವಚ್ಛವಾಗಿಡಲು ಸಾರ್ವಜನಿಕರ ಪಾತ್ರವೂ ಇದೆ. ತಮ್ಮ ತಮ್ಮ ಮನೆಗಳಲ್ಲಿ ಕಸಗಳನ್ನು ಸರಿಯಾಗಿ ವಿಂಗಡಣೆ ಮಾಡಿದರೆ ಸಾಕು. ಜೊತೆಗೆ ನೀರನ್ನು ಮಿತವಾಗಿ ಬಳಸಬೇಕು. ಎಲ್ಲರೂ ಸ್ವಚ್ಛತೆಗೆ ಆದ್ಯತೆ ಕೊಟ್ಟರೆ ಜೊತೆಗೆ ಸಂಬಂಧಪಟ್ಟ ಇಲಾಖೆಗಳು ನಗರದ ಎಲ್ಲಾ ಕೊಳಚೆ ನೀರನ್ನು ಸರಿಯಾದ ರೀತಿಯಲ್ಲಿ ಶುದ್ಧೀಕರಣ ಮಾಡಿ ನದಿಗೆ ಬಿಟ್ಟರೆ ಸಮಸ್ಯೆ ಸ್ಪಲ್ಪ ಮಟ್ಟಿಗಾದರೂ ಬಗೆಹರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ನಿರ್ಮಲ ತುಂಗಾ ಅಭಿಯಾನದ ಪ್ರಮುಖರಾದ ತ್ಯಾಗರಾಜ್ ಮಿತ್ಯಾಂತ, ಬಾಲಕೃಷ್ಣ ನಾಯ್ಡು, ಡಾ.ಶ್ರೀಧರ್, ಜಗನ್ನಾಥ್, ರಾಜೇಶ್ ಹಾಗೂ ಚಂದನವನ ಪಾರ್ಕಿನ ಪ್ರಮುಖರಾದ ಜಯಣ್ಣ, ಜಿ.ನಾಗಪ್ಪ, ದೇವರಾಜ್, ನಾಗರಾಜ್ ಸೇರಿದಂತೆ ಹಲವರಿದ್ದರು.

Related posts

ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಅವಧಿ 5 ವರ್ಷ ವಿಸ್ತರಣೆಗೆ ಚಿಂತನೆ.

33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ.

ಕನ್ನಡ ಭಾಷೆ ಹೆಚ್ಚಾಗಿ ಬಳಸುವುದು ಮುಖ್ಯ-ರೇಣುಕಾರಾಧ್ಯ