ಸಾಣೇಹಳ್ಳಿ: ತಳಿರುತೋರಣ, ರಂಗೋಲಿ, ವಿದ್ಯುತ್ ದೀಪಾಲಂಕಾರ, ವಚನಗಳನ್ನು ಸಾರುವ ಪೋಸ್ಟರುಗಳು, ಸ್ವಾಗತಿಸುವ ಬ್ಯಾನರುಗಳು, ಗಮನ ಸೆಳೆವ ಕಾರಂಜಿ, ಕುಟೀರಗಳು, ಈಚಲುಬುಟ್ಟಿಗಳಲ್ಲಿ ಬೆಳಗುವ ವಿದ್ಯುತ್ ದೀಪಗಳು.. ಹೀಗೆ ಸಾಣೇಹಳ್ಳಿಯು ರಾಷ್ಟ್ರೀಯ ನಾಟಕೋತ್ಸವ ಸಜ್ಜಾಗಿದೆ.
ಕರ್ನಾಟಕ ರಾಜ್ಯೋತ್ಸವ ಮರುದಿನದಿಂದ ಅಂದರೆ ನವೆಂಬರ್ 2ರಿಂದ 8ರ ವರೆಗೆ ಪ್ರತಿ ವರ್ಷ ಇಲ್ಲಿನ ಶ್ರೀ ಶಿವಕುಮಾರ ಬಯಲು ರಂಗಮಂದಿರ ಹಾಗೂ ಎಸ್.ಎಸ್. ರಂಗಮಂದಿರದಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಕಲ ಸಿದ್ಧತೆಗಳಾಗಿವೆÉ..
ನವೆಂಬರ್ 2ರಂದು ಬೆಳಿಗ್ಗೆ 8 ಗಂಟೆಗೆ ಶಿವಧ್ವಜಾರೋಹಣವನ್ನು ಚಿಕ್ಕಮಗಳೂರಿನ ಸಾಹಿತಿ ಬಿ. ತಿಪ್ಪೇರುದ್ರಪ್ಪ ನೆರವೇರಿಸುವರು. ನಂತರ ಬೆಳಿಗ್ಗೆ 8 ಗಂಟೆಗೆ ಶಿವಕುಮಾರ ರಂಗಮಂದಿರದಲ್ಲಿ ಶಿವಮಂತ್ರ ಲೇಖನ ಅಂದರೆ ಶಿವ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬರೆಯಲಿದ್ದಾರೆ. ನಂತರ ಚಿಂತನ ಕಾರ್ಯಕ್ರಮದಲ್ಲಿ ಐ.ಜಿ.ಚಂದ್ರಶೇಖರಯ್ಯ ಅವರು `ಸಿರಿಯ ನೆಚ್ಚಿ ಕೆಡಬೇಡ’ ವಚನ ಕುರಿತು ಮಾತನಾಡುವರು. ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಂಜೆ 6 ಗಂಟೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಿವಸಂಚಾರ ನಾಟಕಗಳನ್ನು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ರಾಜ್ಯೋತ್ಸವವನ್ನು ಕವಿ ಜಯಂತ ಕಾಯ್ಕಿಣಿ ಉದ್ಘಾಟಿಸುವರು. ಅತಿಥಿಗಳಾಗಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಚಂದ್ರಶೇಖರಪ್ಪ, ಬೆಳ್ಳಿ ಪ್ರಕಾಶ್, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಹಾಗೂ ಚಲನಚಿತ್ರ ನಟ ಡಾಲಿ ಧನಂಜಯ್ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಶಿವಸಂಚಾರ-23ರ ಕೈಪಿಡಿ, ಅರಿವೆ ಗುರು, ಸಂಸ್ಕøತಿ-ಸಂಸ್ಕಾರ ಹಾಗೂ ವಿಜ್ಞಾನ ಮುಂದೇನು? ಕೃತಿಗಳು ಬಿಡುಗಡೆಯಾಗಲಿವೆ. ಸಮಾರಂಭದಲ್ಲಿ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೃತ್ಯರೂಪಕವಿದೆ. ಸಮಾರಂಭದ ನಂತರ ಜಯಂತ ಕಾಯ್ಕಿಣಿ ಅವರ `ಜತೆಗಿರುವನು ಚಂದಿರ’ ನಾಟಕ ಪ್ರದರ್ಶನವಿದೆ. ಇದನ್ನು ಹುಲಗಪ್ಪ ಕಟ್ಟಿಮನಿ ನಿರ್ದೇಶಿಸಿದ್ದು, ಶಿವಸಂಚಾರ ಕಲಾವಿದರು ಅಭಿನಯಿಸುವರು.