ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸನಾತನ ಶ್ರೇಷ್ಟ ಧರ್ಮ: ಶ್ರೀ ಪ್ರಸನ್ನನಾಥಸ್ವಾಮೀಜಿ.

ಶಿವಮೊಗ್ಗ : ಸನಾತನ ಧರ್ಮ ಮೂರು ಕಾಲಘಟ್ಟದಲ್ಲಿ ಜೀವಂತವಾಗಿದ್ದು ಇದರಿಂದಾಗಿ ಅದು ಶ್ರೇಷ್ಟ ಧರ್ಮವಾಗಿ ಹೊರ ಹೊಮ್ಮಿದೆ ಎಂದು ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥಸ್ವಾಮೀಜಿ ಹೇಳಿದರು.
       ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ 50ನೇ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನಾತನ ಧರ್ಮ ಅರಿವು ಮತ್ತು ಅನುಸಂಧಾನ  ಉಪನ್ಯಾಸ ಕಾರ್ಯಕ್ರಮದಲ್ಲಿ  ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದಲ್ಲಿ ಜೀವಂತವಾಗಿರುವ ಧರ್ಮವೆಂದರೆ ಸನಾತನ ಧರ್ಮವಾಗಿದೆ. ಇದು ಬಹಳ ಪ್ರಾಮುಖ್ಯತೆಯನ್ನು ಕೂಡ ಪಡೆದಿದೆ ಎಂದರು.
     ಈ ಧರ್ಮ ಎಲ್ಲಿ, ಯಾವಾಗ,ಹೇಗೆ, ಯಾರಿಂದ ಆರಂಭವಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇದರಲ್ಲಿ ಒಳ್ಳೆಯ ಅಂಶಗಳಿವೆ ಎಂದ ಅವರು, ಧರ್ಮ ಎಂದರೆ ಒಳ್ಳೆಯದನ್ನು ಧರಿಸುವುದು ಎಂದು ಅರ್ಥ, ನಾವು ಉತ್ತಮವಾದದ್ದನ್ನೇ ತಿಳಿದುಕೊಳ್ಳಬೇಕು. ಆಗ ನಮ್ಮ ಬದುಕು ಉತ್ತಮ ಹಾದಿಯಲ್ಲಿ  ಸಾಗುತ್ತದೆ ಎಂದು ಹೇಳಿದರು.
    ಕಷ್ಟಗಳು ಬರುವುದು ನಮ್ಮ ಒಳ್ಳೆಯದಕ್ಕಾಗಿಯೇ ಆ ಸಂದರ್ಭದಲ್ಲಿ ನಾವು ಭಗವಂತನನ್ನು ಸದಾ ಸ್ಮರಿಸುತ್ತೇವೆ. ಕಷ್ಟಗಳು  ನಮ್ಮ ಬದುಕನ್ನು ಹಾಗೂ ನಮ್ಮ ಆತ್ಮ ಸ್ಥೈರ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಕಷ್ಟಗಳನ್ನು ಎದುರಿಸಿದಾಗ ಇನ್ನೊಬ್ಬರ ಕಷ್ಟಕ್ಕೆ ನಾವು ಸ್ಪಂದಿಸಿದಾಗ ನಮ್ಮಲ್ಲಿ ಉತ್ತಮ ಮಾನವೀಯ ಗುಣ ಬೆಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
      ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿದರು.  ದಸರೀಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೈದ್ಯರಾದ ಡಾ. ವೀಣಾ ಎಸ್.ಭಟ್, ಡಾ.ಪ್ರೀತಂ, ಡಾ.ನಿಖಿಲ್, ಡಾ.ಹರೀಶ್, ಸಂಘಟಕ ಡಿ.ಎಚ್.ಸುಬ್ಬಣ್ಣ, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ರಘುರಾಂ ದೇವಾಡಿಗ, ಕೃಷಿಕ ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
       ಬಾಕ್ಸ್ :
ಸಂಸ್ಕೃತದ ಡಿಕ್ಷನರಿ ಶ್ಲೋಕದ ರೂಪದಲ್ಲಿದೆ. ಅದರ ಹೆಸರು ಅಮರಕೋಶ. ಸನಾತನ ಎಂಬ ಪದಕ್ಕೆ ಈ ಡಿಕ್ಷನರಿಯಲ್ಲಿ ಅಳಿವಿಲ್ಲದೇ ಇರುವುದು ಎಂಬರ್ಥವಿದೆ. ಸನಾತನ ಧರ್ಮ ಅನೇಕ ಸಾವಿರ ವರ್ಷಗಳಿಂದ ಬಂದಿರುವಂಥದ್ದು ಎಂದು ಅಷ್ಟಾವಧಾನಿ, ವಾಗ್ಮಿ ಸೂರ್ಯ ಹೆಬ್ಬಾರ್ ಹೇಳಿದರು.
    ಸನಾತನ ಧರ್ಮ ಅರಿವು ಮತ್ತು ಅನುಸಂಧಾನ ಕುರಿತು ಉಪನ್ಯಾಸ ನೀಡಿದ ಅವರು, ಸನಾತನ ಧರ್ಮ ಸಾವಿರಾರು ವರ್ಷಗಳಿಂದ ಜನಪದ ಶೈಲಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗಿದೆ ಎಂದರು.
ಡೈನೋಸಾರ್ ಬಗ್ಗೆ ಯಾರೋ ಹೇಳಿದ್ದನ್ನು ಕೇಳಿ ನಾವು ಅರಿತುಕೊಳ್ಳಬೇಕು. ಆದರೆ ಸನಾತನ ಧರ್ಮದ ಬಗ್ಗೆ ಬರೆದಿಟ್ಟಿದ್ದನ್ನು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬರಲಾಗಿದೆ. ಆದರೆ ಆಕ್ರಮಣ, ಹವಾಮಾನದ ವೈಪರೀತ್ಯದ ಕಾರಣದಿಂದ ಬಹಳಷ್ಟು ತಾಳೆಗರಿಗಳು ನಾಶವಾಗಿವೆ ಎಂದು ತಿಳಿಸಿದರು.
   ಸಿಂಹ ಬಲಶಾಲಿಯಾಗಿದ್ದರೂ ಜಿಂಕೆ, ಮೊಲಗಳು ತಾವಾಗಿಯೇ ಬಂದು ಸಿಂಹದ ಬಾಯಿಗೆ ಬೀಳುವುದಿಲ್ಲ. ಗಿಡ, ಮರ ಬಳ್ಳಿಗಳಲ್ಲೂ ಔಷಧವಿದೆ. ಪ್ರತಿಯೊಬ್ಬರಲ್ಲೂ ಯೋಗ್ಯತೆಯಿದೆ ಎಂಬುದು ಸನಾತನ ಧರ್ಮದ ಸಾರ. ಸತ್ಯವನ್ನೇ ಹೇಳಬೇಕು. ಅಪ್ರಿಯವಾದ ಸತ್ಯ ಹೇಳಬಾರದು. ಯಾರಿಗೋ ಸಂತೋಷವಾಗುತ್ತದೆ ಎಂದು ಸುಳ್ಳು ಹೇಳಬಾರದು ಎನ್ನುತ್ತದೆ ಸನಾತನ ಧರ್ಮ ಎಂದು ತಿಳಿಸಿದರು.
ಅಷ್ಟಾವಧಾನಿ, ವಾಗ್ಮಿ ಸೂರ್ಯ ಹೆಬ್ಬಾರ್

Related posts

ಸರ್ಕಾರ ಸುಭದ್ರ: ರಾಜ್ಯದಲ್ಲಿ ಅಪರೇಷನ್ ಕಮಲ ಯಾವುದು ನಡೆಯುವುದಿಲ್ಲ- ಸಚಿವ ಹೆಚ್.ಸಿ ಮಹದೇವಪ್ಪ.

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮನೋ ವೈದ್ಯರು ಮತ್ತು ಸಿಬ್ಬಂದಿಗಳ ಪಾತ್ರ ಮಹತ್ತರ-ಡಾ. ಚಂದ್ರಶೇಖರ್

ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಎಲ್ ಮತ್ತು ಆರ್ ಸಿಗೆ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್ಸ್ ವಿತರಣೆ.