ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಹೆಚ್ಚಳ.

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಏಳೇಂಟು ತಿಂಗಳು ಬಾಕಿ ಇದ್ದು ಈಗಾಗಲೇ ಆಡಳಿತ ಮತ್ತು ವಿಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಕರ್ನಾಟಕ ರಾಜ್ಯದಲ್ಲಿ ಗೆದ್ಧು ಅಧಿಕಾರಕ್ಕೇರಿ ಆತ್ಮವಿಶ್ವಾಸ ಬಲಪಡಿಸಿಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲೂ ಕಮಾಲ್ ಮಾಡಲು ಸಜ್ಜಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಲೋಕಸಭೆ ಟಿಕೆಟ್ ಗಾಗಿ ಫೈಟ್ ತುಸು ಹೆಚ್ಚಾಗಿಯೇ ಇರುತ್ತದೆ.  ಈಗಿನಿಂದಲೇ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಯುತ್ತಿದೆ. ಬೆಂಗಳೂರು ಕೇಂದ್ರ ಭಾಗದಿಂದ ಮಾಜಿ ಸಚಿವ ಎಚ್ಎಂ ರೇವಣ್ಣ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ತೀವ್ರ ಪೈಪೋಟಿ ನಡೆಸುತ್ತಿದ್ದರೆ, ಇತ್ತ ಬಳ್ಳಾರಿ ಕ್ಷೇತ್ರಕ್ಕೆ  ಟಿಕೆಟ್ ಗಾಗಿ ಮಾಜಿ ಸಂಸದ ವಿಎಸ್ ಉಗ್ರಪ್ಪ ತೀವ್ರ ಲಾಬಿ ನಡೆಸುತ್ತಿದ್ದಾರೆ. ಕಳೆದ 2019ರ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಸೋತಿದ್ದ ಬೆಳಗಾವಿ ಕ್ಷೇತ್ರಕ್ಕೂ ಹೆಚ್ಚಿನ ಬೇಡಿಕೆ ಇದೆ. ಈ ಬಾರಿ ಪಕ್ಷ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೈಸೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೆಚ್.ವಿಶ್ವನಾಥ್,  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ್ ಹೆಗ್ಡೆ ನಡುವೆ ಪೈಪೋಟಿ ಇದೆ.

ಯಾವುದೋ ಗಳಿಗೆಯಲ್ಲಿ ಪಕ್ಷ ಬಿಟ್ಟಿದ್ದೆ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದಲೇ ಟಿಕೆಟ್ ಕೇಳುವೆ ಎಂದಿದ್ದಾರೆ ಎಚ್ ವಿಶ್ವನಾಥ್.  ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಜೊತೆಗೆ ಕೋಲಾರವನ್ನು ಎರಡನೇ ಸ್ಥಾನವಾಗಿ ಆಯ್ಕೆ ಮಾಡಬಹುದು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಕ್ಷೇತ್ರದಿಂದ ಸ್ಪರ್ಧಿಸಲು ಖರ್ಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ತುಮಕೂರಿನಲ್ಲಿ ಹಿಂದಿನ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಪಕ್ಷದಿಂದ ಹೊರನಡೆದಿದ್ದು, ಜಿ.ಎಸ್.ಬಸವರಾಜ್ ಅವರು ಅಲ್ಲಿಂದ ಸ್ಪರ್ಧಿಸದಿರಬಹುದು ಎಂದು ಪರಿಗಣಿಸಿ ಆಕಾಂಕ್ಷಿಗಳ ಬೇಡಿಕೆ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ 28 ಕ್ಷೇತ್ರಗಳ ಪೈಕಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರ.

ಸೋಮವಾರ ಬೆಂಗಳೂರಿನಲ್ಲಿ ಸರ್ವ ಸದಸ್ಯರ ಸಭೆ ಕಳೆದ ನಾಲ್ಕು ಬಾರಿ ಕೆಲವು ಕಾಂಗ್ರೆಸ್ ನಾಯಕರು ಸೋತಿರುವುದರಿಂದ ಗೆಲ್ಲುವ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋತ ಹಲವರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಬಿಜೆಪಿ ಪಕ್ಷವು 14-15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವ ಸೂಚನೆಯನ್ನು ನೀಡಿದ್ದು, ರಾಜ್ಯದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳನ್ನು ನೋಡಿಕೊಂಡು ಅಳೆದು ತೂಗಿ ರಾಜಕೀಯ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

 

Related posts

ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ರಾಜ್‌ ಕುಮಾರ್‌ ಅಪಾರ ಅಭಿಮಾನ ಇರಿಸಿದ್ದರು-ನಾಡೋಜ ಡಾ.ಮಹೇಶ ಜೋಶಿ

ಸಾಧನೆಗೆ ಅವಮಾನಗಳನ್ನು ಇಂಧನವಾಗಿ ಬಳಸಿ-ಪ್ರೊ.ಎಸ್.ಎಂ.ಗೋಪಿನಾಥ

ಅಸಂಖ್ಯಾತ ರಾಷ್ಟ್ರ ಭಕ್ತರ ಹೋರಾಟದಿಂದ ದೇಶ ಸ್ವಾತಂತ್ರ್ಯ- ಸಿ.ಮಂಜುನಾಥ್