ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಆಂಧ್ರ ರಾಜಕಾರಣದಲ್ಲಿ ಸ್ಪೋಟಕ ತಿರುವು: ಟಿಡಿಪಿ ಜತೆ ಜನಸೇನೆ ಮೈತ್ರಿ ಘೋಷಿಸಿದ ಪವನ್ ಕಲ್ಯಾಣ್.

ಹೈದರಾಬಾದ್,: ಆಂಧ್ರ ರಾಜಕಾರಣ ಸ್ಪೋಟಕ ತಿರುವು ಪಡೆದುಕೊಳ್ಳುತ್ತಿದ್ದು, ಈ ನಡುವೆ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಜೊತೆ ಜನಸೇನೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ ಖ್ಯಾತ ನಟ ಹಾಗೂ ಜನಸೇನೆ ನಾಯಕ ಪವನ್‌ ಕಲ್ಯಾಣ್ ಘೋಷಣೆ ಮಾಡಿದ್ದಾರೆ.

ಜೈಲಿನಲ್ಲಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಖ್ಯಾತ ನಟ ಹಾಗೂ ಜನಸೇನೆ ನಾಯಕ ಪವನ್‌ ಕಲ್ಯಾಣ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಟಿಡಿಪಿ ಜೊತೆ ಜನಸೇನೆಯ ಮೈತ್ರಿಯನ್ನು ಘೋಷಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಜನಸೇನೆ ಸ್ಪರ್ಧಿಸಲಿದೆ ಎಂದು ಪವರ್‌ ಸ್ಟಾರ್‌ ಪವನ್ ಕಲ್ಯಾಣ್  ತಿಳಿಸಿದ್ದಾರೆ. ತೆಲುಗು ದೇಶಂ ಪಕ್ಷದ ಶಾಸಕ ಹಾಗೂ ನಟ ಬಾಲಕೃಷ್ಣ ಮತ್ತು ನಾರಾ ಲೋಕೇಶ್ ಅವರೊಂದಿಗೆ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಪವನ್‌ ಕಲ್ಯಾಣ್‌ ಈ ಘೋಷಣೆ ಮಾಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಪವನ್ ಕಲ್ಯಾಣ್, ‘ಆಂಧ್ರಪ್ರದೇಶವು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ದುರಾಡಳಿತವನ್ನು ಭರಿಸಲು ಸಾಧ್ಯವಿಲ್ಲ. ನಾನು ಇಲ್ಲಿಯವರೆಗೆ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ. ಇಂದು ನಾನು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಮಹತ್ವದ ತೀರ್ಮಾನಕ್ಕೆ ಬಂದಿದ್ದೇನೆ. ಜನಸೇನೆ ಮತ್ತು ಟಿಡಿಪಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.

‘ಕೆಲ ರಾಜಕೀಯ ನೀತಿಗೆ ಸಂಬಂಧಿಸಿದಂತೆ ನಾನು ಚಂದ್ರಬಾಬು ನಾಯ್ಡು ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ. ನಾವು ಈ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಆದರೆ, ನಾನು ಅವರ ಅನುಭವವನ್ನು ಗೌರವಿಸುತ್ತೇನೆ. ನಾಯಕನಾಗಿ ಬೆಳೆದಿರುವ ಅವರ ಸಾಮರ್ಥ್ಯಕ್ಕೆ ನಾನು ಶಿರಬಾಗಿದ್ದೇನೆ. ಅವರು ಸೈಬರಾಬಾದ್ ಅನ್ನು ಸಾಧ್ಯವಾಗಿಸಿದ ವ್ಯಕ್ತಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ಐಟಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಹಿರಿಮೆ ಅವರ ಮೇಲಿದೆ’ ಎಂದು ಪವನ್‌ ಕಲ್ಯಾಣ್‌ ತಿಳಿಸಿದ್ದಾರೆ.

ಜೈಲಿನಲ್ಲಿರುವ ನಾಯ್ಡು ಅವರನ್ನು ಭೇಟಿ ಮಾಡಲು ಪವನ್‌ ಕಲ್ಯಾಣ್‌ ಎರಡನೇ ಬಾರಿಗೆ ಪ್ರಯತ್ನಿಸಿದ್ದಾರೆ. ಭಾನುವಾರ ಅವರು ಮೊದಲ ಬಾರಿಗೆ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಲು ತೆರಳಿದ್ದರು. ಈ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು. ಹೈದರಾಬಾದ್‌ನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನ ಹತ್ತಲು ಅನುಮತಿ ನಿರಾಕರಿಸಲಾಯಿತು. ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗಲೂ ಅವರನ್ನು ತಡೆಯಲಾಯಿತು. ಕೌಶಲ್ಯಾಭಿವೃದ್ಧಿ ಹಗರಣದ ಆರೋಪದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಕಳೆದ ವಾರ ಬಂಧಿಸಲಾಗಿದೆ.

 

Related posts

ತುಂಗಾ ಜಲಾಶಯ ಬಳಿ ಯುವಕ ನೀರು ಪಾಲು.

9 ವರ್ಷಗಳಲ್ಲಿ ಭಾರತೀಯ ರೈಲ್ವೆಯಿಂದ 40 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಠಿ .

ಪತ್ರಿಕಾ ವಿತರಕರಿಗೆ ಸ್ಪಂದಿಸಿದ ಸರ್ಕಾರ: ಅಪಘಾತದಲ್ಲಿ ಮೃತ ವಿತರಕರಿಗೆ 2ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆ ಜಾರಿ