ಕನ್ನಡಿಗರ ಪ್ರಜಾನುಡಿ
ಆರೋಗ್ಯಪ್ರಧಾನ ಸುದ್ದಿಮಂಡ್ಯಮುಖ್ಯಾಂಶಗಳು

ಮಂಡ್ಯದ ಆಲೆಮನೆ ಮಾತ್ರವಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲೂ ಭ್ರೂಣಲಿಂಗ ಪತ್ತೆ?

ಮಂಡ್ಯ, ಡಿ 20: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಹಾಗೂ ತಪಾಸಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದು, ಒಂದೊಂದೇ ಕರ್ಮಕಾಂಡ ಬಯಲಿಗೆಳೆಯುತ್ತಿದ್ದಾರೆ. ಈ ಮಧ್ಯೆ, ಮಂಡ್ಯದಲ್ಲಿ ಆಲೆಮನೆಯಲ್ಲಿ ಮಾತ್ರವಲ್ಲದೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲೂ ಭ್ರೂಣಲಿಂಗ ಪತ್ತೆ ಹಚ್ಚುವ ಕೃತ್ಯ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ತಪಾಸಣೆ ವೇಳೆ ಅಂಥ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿವೆ.

ನಾಗಮಂಗಲದ 2 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕರಾಳ ದಂಧೆ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ಅಧಿಕಾರಿಗಳ ಪರಿಶೀಲನೆ ವೇಳೆ ಸಿಬ್ಬಂದಿಗಳ ಕಳ್ಳಾಟ ಆಡಿರುವುದು ಗೊತ್ತಾಗಿದೆ. ಸಿಸ್ಟಮ್‌ನಲ್ಲಿದ್ದ ಡೇಟಾ ಡಿಲೀಟ್ ಮಾಡಿ ಅಧಿಕಾರಿಗಳ ಕಣ್ತಪ್ಪಿಸಲು ಅಲ್ಲಿನ ಸಿಬ್ಬಂದಿ ಯತ್ನಿಸಿದ್ದಾರೆ.

ಅಧಿಕಾರಿಗಳು ಭೇಟಿ ನೀಡಿದ ವೇಳೆ ಸ್ಕ್ಯಾನಿಂಗ್ ಸೆಂಟರ್‌ಗಳ ಸಿಬ್ಬಂದಿ ಸಮರ್ಪಕ ದಾಖಲೆ ನೀಡಿಲ್ಲ.  ಹೀಗಾಗಿ ಅಧಿಕಾರಿಗಳು ಸಿಸ್ಟಮ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಗಿದೆ. ಇದಕ್ಕೆ ಕಾರಣ, ಸ್ಕ್ಯಾನಿಂಗ್ ಮಾಡಿದ್ದ ಇಮೇಜ್ ಹಾಗೂ ಡೇಟಾವನ್ನೇ ಸಿಬ್ಬಂದಿ ಡಿಲೀಟ್ ಮಾಡಿದ್ದರು. ಇದೀಗ, ಮಾಹಿತಿ ಡಿಲೀಟ್ ಮಾಡಿದ ಹಿನ್ನೆಲೆ 2 ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಸೀಜ್ ಮಾಡಲಾಗಿದೆ. ಕಾವೇರಿ ಹಾಗೂ ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಬೀಗ ಜಡಿಯಲಾಗಿದೆ.

ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 2 ವರ್ಷದ ಮಾಹಿತಿ ಹಾಗೂ ಕಾವೇರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ 3 ತಿಂಗಳ ಮಾಹಿತಿ ಡಿಲೀಟ್ ಮಾಡಲಾಗಿತ್ತು. ಈ ಸ್ಕ್ಯಾನಿಂಗ್ ಸೆಂಟರ್‌‌ಗಳು ನಾಗಮಂಗಲದ ಸರ್ಕಾರಿ ಆಸ್ಪತ್ರೆ ಸಮೀಪವೇ ಇವೆ. ಉಪವಿಭಾಗಾಧಿಕಾರಿ ನಂದೀಶ್ ಹಾಗೂ ಕುಟುಂಬ‌ ಕಲ್ಯಾಣ ಅಧಿಕಾರಿ ಡಾ. ಬೆಟ್ಟಸ್ವಾಮಿ ನೇತೃತ್ವದಲ್ಲಿ ಅವುಗಳನ್ನು ಸೀಜ್ ಮಾಡಲಾಗಿದೆ.

ಭ್ರೂಣ ಪತ್ತೆ, ಹತ್ಯೆ ಪ್ರಕರಣ ಸಂಬಂಧ ಮೈಸೂರಿನಲ್ಲಿ ವೈದ್ಯಕೀಯ ಪ್ರಮಾಣಪತ್ರ ಇಲ್ಲದ 14 ಕ್ಲಿನಿಕ್‌ಗಳಿಗೆ ಕೆಲವು ದಿನಗಳ ಹಿಂದಷ್ಟೇ ಬೀಗ ಜಡಿಯಲಾಗಿತ್ತು. ಇದೀಗ ಮಂಡ್ಯದಲ್ಲಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ.

Related posts

ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಸಕಾರಾತ್ಮಕ ಸ್ಪಂದನೆಗೆ ಸಿಎಂ ಸಿದ್ಧರಾಮಯ್ಯ ಭರವಸೆ.

ಆಕಾಶವಾಣಿಯಲ್ಲಿ ನವದೇವಿ ದರ್ಶನ- ನವರಾತ್ರಿ ವಿಶೇಷ ಕಾರ್ಯಕ್ರಮ ಸರಣಿ

ಪಟಾಕಿ ಮಾರಾಟಗಾರರ ಪರವಾನಿಗೆ, ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ-ಶಶಿಕುಮಾರ್ ಎಸ್.ಗೌಡ ನೇತೃತ್ವದಲ್ಲಿ ಪ್ರತಿಭಟನೆ.