ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಾಲ್ವಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು – ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು.  ಅವರ ಪ್ರಗತಿಪರ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿ ಅವರನ್ನು ‘ರಾಜರ್ಷಿ’ ಎಂದು ಕರೆದರು. ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ’ ಎಂದಿದ್ದರು  ಅವರ ಆಳ್ವಿಕೆಯ ಅವಧಿಯಲ್ಲಿಯೇ  ಆಗಿರುವ ಸಮಾಜ ಮುಖಿ ಕಾರ್ಯಗಳು ಇಂದಿಗೂ ಪ್ರಾಶಸ್ತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌  ದತ್ತಿ ಪ್ರಶಸ್ತಿ ಪ್ರದಾನ ಹಾಗೂ ವಿಶ್ರಾಂತ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಶಿವಲಿಂಗೇಗೌಡ ಅವರು ಅನುವಾದಿಸಿದ  ಮೂಲ ʻಖಲ್ಹೀಲ್ ಗಿಬ್ರಾನ್ʼ ಅವರ ಕೃತಿ ʻಮುರಿದ ರೆಕ್ಕೆಗಳುʼ ಪುಸ್ತಕ ಬಿಡುಗೆಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ಸಂಸ್ಥೆ. ಕನ್ನಡಿಗರ ವಿಶ್ವಾಸದ ಪ್ರತೀಕವಾಗಿ ನಮ್ಮಲ್ಲಿ ಇಂದು ೨೧೦೦ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಜನರು ನಂಬಿಕೆಯಿಂದ ಇಟ್ಟಿದ್ದಾರೆ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಯೋಗ್ಯ ರೀತಿಯಲ್ಲಿ ಪ್ರದಾನ ಆಡುತ್ತ ಬಂದಿದೆ. ಒಂದು ಸಂಸ್ಥೆ ನಿತ್ಯ ನಿರಂತರವಾಗಿರಬೇಕು ಎನ್ನುವುದು ನಾಲ್ವಡಿ ಅವರ ಸಾಮಾಜಿಕ ಕಾಳಜಿಯಾಗಿತ್ತು ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

          ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕರಾದ ಶ್ರೀ ಡಿ.ಆರ್‌.ಪಾಟೀಲ್‌ ಅವರು ಮಾತನಾಡಿ ನಮ್ಮ ದೇಶದಲ್ಲಿ ಸಾಕ್ಷರರು  ಆತ್ಮ ವಿಶ್ವಾಸ ಕಳೆದುಕೊಂಡು ದಾರಿತಪ್ಪುತ್ತಿದ್ದಾರೆ. ಅನಕ್ಷರಸ್ಥರು ವಿಶಾಲ ಹೃದಯದವರಿದ್ದಾರೆ. ನಮ್ಮ ತಪ್ಪನ್ನು ತಿಳಿಸುವ ಕೆಲಸ ಶಿಕ್ಷಣದಲ್ಲಿ ಆಗಬೇಕಿದೆ. ಶಿಕ್ಷಣದಲ್ಲಿ ನಮ್ಮತನವನ್ನು ಕಲಿಸುವ ಜೊತೆಗೆ ಸಮಾಜದ ಮೇಲಿನ ನಂಬಿಕೆ ವಿಶ್ವಾಸ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

          ೨೦೨೩ನೆಯ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಆಂಧ್ರಪ್ರದೇಶ, ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ತೇಜಸ್ವಿ ವೆಂಕಪ್ಪ ಕಟ್ಟೀಮನಿ ಅವರು ಇಂದು ಪಠ್ಯಕ್ರಮದಲ್ಲಿ ಹಳ್ಳಿಗಳು, ನಮ್ಮ ಮೂಲ ಸಂಸ್ಕೃತಿಗಳು, ಆಚಾರ ವಿಚಾರಗಳು ನಾಪತ್ತೆಯಾಗಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಪ್ರಾಥಮಿಕ ಶಿಕ್ಷಣ ಮಾತ್ರಭಾಷೆಯಲ್ಲಿ ಆದಾಗ ಮಾತ್ರ ನಮ್ಮ ಭಾಷೆ ಅನ್ನದ ಭಾಷೆಯಾಗುತ್ತದೆ.  ದೇಶದಲ್ಲಿಯ ಬಹುತೇಕ ಪ್ರಾದೇಶಿಕ ಭಾಷೆಗಳು ನಾಪತ್ತೆಯಾಗುತ್ತಿದೆ. ನಮ್ಮ ಅನ್ನವನ್ನು ನಾವು ಕಂಡು ಕೊಳ್ಳಬೇಕು ಎಂದರೆ ಕನ್ನಡ ಕೊಳ್ಳುವ ಹಾಗೂ ಮಾರುವ ಭಾಷೆಯಾಗಿ ರೂಪಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

    ಖಲೀಲ್ ಗಿಬ್ರಾನ್ ಮಧ್ಯ ಪ್ರಾಚ್ಯ ಭಾಗಕ್ಕೆ ಆಧುನಿಕತೆಯನ್ನು ತಂದವನು ಎಂದು ವಿವರಿಸಿದ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಅಧ್ಯಾತ್ಮದ ಉನ್ನತೀಕರಣವನ್ನು ಅವನು ಬರಹದ ಮೂಲಕ ಸಾಧಿಸಿದವನು, ಉತ್ತಮ ಚಿತ್ರಕಾರ ಕೂಡ ಆಗಿದ್ದ ಎಂದು ಹೇಳಿ ‘ಮುರಿದ ರೆಕ್ಕೆ’ಗಳು ಕಾದಂಬರಿಯ ಮೂಲ  1912ರಲ್ಲಿ ಅರೆಬಿಕ್ ಭಾಷೆಯಲ್ಲಿ ರೂಪುಗೊಂಡ ‘ಬ್ರೂಕನ್ ವಿಂಗ್ಸ್’ ಜಗತ್ತಿನ ಮೂವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು ಚಲನಚಿತ್ರ ರೂಪವನ್ನೂ ಕೂಡ ಪಡಿದಿದೆ. ಇಂತಹ ಮಹತ್ವದ ಕೃತಿಯನ್ನು ಕೆ.ಎಂ.ಶಿವಲಿಂಗೇ ಗೌಡರು ಮೂಲದ ಸತ್ವಕ್ಕೆ ಭಂಗಬಾರದಂತೆ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಕೃತಿ  ಮೇಲ್ನೋಟಕ್ಕೆ ದುರಂತ ಪ್ರೇಮ ಕಥನವನ್ನು ಹೊಂದಿದೆ ಎನ್ನಿಸಿದರೂ ಮಾನವೀಯ ಸಂಬಂಧಗಳ ಸೂಕ್ಷ್ಮತೆಯನ್ನು , ಏಕಾಂಗಿತನದ ಸ್ವರೂಪವನ್ನು, ಸಮಾಜದ ಹಿಡಿತವನ್ನು ಹಿಡಿದಿಟ್ಟಿದೆ. ಇದರ ಭಾಷೆ ಗದ್ಯ ಮತ್ತು ಪದ್ಯದ ನಡುವಿನ ಸೊಬಗಿನ ಹಾದಿಯದಾಗಿದ್ದು ಶಿವಲಿಂಗೇ ಗೌಡರು ಅದನ್ನು ಸಮರ್ಥವಾಗಿ ತಂದಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಕನ್ನಡಕ್ಕೆ ಇಂತಹ ಮಹತ್ವದ ಕೃತಿಯನ್ನು ನೀಡಿದ ಅವರನ್ನು ಮತ್ತು ಇಂತಹ ಪ್ರಮುಖ ಕೃತಿಯನ್ನು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಅವರು ಅಭಿನಂದಿಸಿದರು.

‘ಮುರಿದ ರೆಕ್ಕೆಗಳು’ ಕೃತಿಯ ಅನುವಾದಕರಾದ ಕೆ.ಎಂ.ಶಿವಲಿಂಗೇ ಗೌಡರು ಕೃತಿ ತಮ್ಮನ್ನು ಸೆಳೆದಿದ್ದಕ್ಕೆ ಕಾರಣಗಳನ್ನು ವಿವರಿಸುತ್ತಾ ಭಾವನಾತ್ಮಕವಾಗಿ ಬದುಕಿನ ಸ್ಥಾಯಿ ಕ್ಷಣಗಳನ್ನು ಹಿಡಿದಿಟ್ಟ ಕೃತಿ ತಮ್ಮ ಮನಸ್ಸಿಗೆ ತೀರಾ ಹತ್ತಿರ ಎನ್ನಿಸಿತು. ಜೀವನದ ಪ್ರತಿ ಕ್ಷಣದ  ಅರ್ಥವನ್ನು ಶೋಧಿಸುವ ಕೃತಿಯು ಬದುಕನ್ನು ತನ್ನದೇ ಆದ ರೀತಿಯಲ್ಲಿ ವಿಸ್ತರಿಸುತ್ತದೆ ಬರಹದಲ್ಲಿ ಇಂತಹ ಅನುಭವ ತನಗಾಗಿದ್ದು ಓದುವಿಕೆಯ ಮೂಲಕ ಅಂತಹ ಅನುಭವ ನಿಮ್ಮದೂ ಆಗಲಿ ಎಂದರು. ಖಾಸಗಿ ಆಸಕ್ತಿಯಿಂದ ಅನುವಾದ ಮಾಡಿದ್ದರೂ ಇದನ್ನು ಅರಿತು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿಯವರಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್‌.ಎಸ್‌.ಶ್ರೀಧರ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ಕುರಿತು ವಿವರಣೆ ನೀಡಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

Related posts

ದೇಶಕ್ಕಾಗಿ ಸೇವೆ ಮಾಡುವ ಕಾರ್ಯವು ಅತ್ಯಂತ ಶ್ರೇಷ್ಠ-ನಿವೃತ್ತ ಯೋಧ ಕರ್ನಲ್ ಗೋಪಾಲ್ ಕೌಶಿಕ್

ಬರಗಾಲದ ಸಂದರ್ಭದಲ್ಲಿ ಮದ್ಯದಂಗಡಿ ತೆರೆಯಲು ಒಲವು ತೋರುತ್ತಿರುವುದು ದುರದೃಷ್ಟಕರ ಸಂಗತಿ-ಶಾಸಕ ಬಿ.ವೈ.ವಿಜಯೇಂದ್ರ

ಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧ ವಿಲ್ಲ; ಈಡಿಗ ಸಂಘ ಸ್ಪಷ್ಟನೆ.