ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕನ್ನಡವನ್ನು ತಳಮಟ್ಟದಲ್ಲಿ ಉಳಿಸಿ ಬೆಳೆಸುವಲ್ಲಿ ಕಾರ್ಮಿಕರ ಪಾತ್ರ ಬಹುದೊಡ್ಡದು -ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು : ಕನ್ನಡ ನಾಡಿನಲ್ಲಿ ಕನ್ನಡವನ್ನು ತಳಮಟ್ಟದಲ್ಲಿ ಉಳಿಸಿ ಬೆಳೆಸುವಲ್ಲಿ ಕಾರ್ಮಿಕರ ಪಾತ್ರ ಬಹುದೊಡ್ಡದು. ಕಾರ್ಮಿಕರ ಭಾವನೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ಸ್ಪಂದಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಿ ನಾಡಿನ ಎಲ್ಲ ವರ್ಗದ ಕನ್ನಡದ ಕಾರ್ಮಿಕರನ್ನು ಸೇರಿಕೊಂಡು ಕನ್ನಡ ಕಟ್ಟುವ ಕಾಯಕದಲ್ಲಿ ಪರಿಷತ್ತು ಮುನ್ನಡೆಯಲಿದೆ ಎನ್ನುವ ಭರವಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.

               ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕರ್ನಾಟಕ ಕೈಗಾರಿಕೆ ಮತ್ತು  ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದವರು ಹಮ್ಮಿಕೊಂಡ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕನ್ನಡ-ಕನ್ನಡಿಗ-ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಕನಸು ಕಾಣುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕರ್ನಾಟಕ ಕೈಗಾರಿಕೆ ಮತ್ತು  ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಕೈ ಜೋಡಿಸಿರುವುದು ಪರಿಷತ್ತಿಗೆ ಅನೆ ಬಲ ಬಂದಂತಾಗಿದೆ. ಕನ್ನಡದ ಕಾರ್ಮಿಕರ ಹಿತವನ್ನು ಕಾಯುವ ಹಿನ್ನೆಲೆಯಲ್ಲಿ ಪರಿಷತ್ತು ಕೆಲಸ ಮಾಡಲಿದೆ. ಸರಕಾರದಿಂದ ಕಾರ್ಮಿಕ ವರ್ಗದವರಿಗೆ ಸಿಗಬೇಕಾದ ಸೌಲತ್ತುಗಳಿಗಾಗಿ ಸಂಬಂಧ ಪಟ್ಟ ಇಲಾಖೆಯೊಂದಿಗೆ ಮಾತುಕತೆ ಮಾಡಲಾಗುವುದು. ಅದೇ ರೀತಿ ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೋಟಿ ಸದಸ್ಯತ್ವ ಅಭಿಯಾನ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಸೇರಿದಂತೆ ಇತರ ಎಲ್ಲಾ ಕಾರ್ಯಕಲಾಪಗಳ ಜೊತೆ ಕನ್ನಡದ ಕಾರ್ಮಿಕರು ಸಕ್ರೀಯವಾಗಿ ಇರುವ ಭರವಸೆಯನ್ನು ನೀಡಿದ್ದಾರೆ. ನಾಡಿನ ಪ್ರತಿಯೊಬ್ಬ ಕಾರ್ಮಿಕರಿಗೂ ಅಭಿಮಾನ ಪೂರ್ವಕವಾಗಿ ಗೌರವ ನೀಡುವುದರೊಂದಿಗೆ ಕನ್ನಡ ಕಟ್ಟುವ ಕಾಯಕದಲ್ಲಿ ಎಲ್ಲರನ್ನು ಬಳಸಿಕೊಳ್ಳಲಾಗುವುದು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದರು.

ಕರ್ನಾಟಕ ಕೈಗಾರಿಕೆ ಮತ್ತು  ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಎಮ್. ತಿಮ್ಮಯ್ಯನವರು ಮಾತನಾಡಿ ಕಳೆದ ೨ ವರ್ಷಗಳಿಂದ ನಮ್ಮ ಒಕ್ಕೂಟ ನಾನಾ ಕಾರಣಗಳಿಗೆ ಪರಿಷತ್ತಿನಿಂದ ಸ್ವಲ್ಪ ದೂರವೇ ಇತ್ತು. ಆದರೆ ಈಗ ಪರಿಷತ್ತು ಬೆಳೆದ ರೀತಿ, ಎಲ್ಲ ವರ್ಗದ ಜನರನ್ನು ಒಂದು ಗೂಡಿಸಿಕೊಂಡು ಮುನ್ನಡೆಯುತ್ತಿರುವ ಈಗಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಕನ್ನಡ ಕಟ್ಟುವ ದೂರ ದೃಷ್ಟಿತ್ವ ಕಂಡು ನಾವು ಪರಿಷತ್ತಿನೊಂದಿಗೆ ಸಕ್ರೀಯವಾಗಿರಬೇಕು ಎನ್ನುವ ಉದ್ದೇಶವನ್ನು ಒಕ್ಕೂಟ ಹೊಂದಿದೆ. ಹಿಂದೆ ನಾಡೋಜ ಡಾ.ಮಹೇಶ ಜೋಶಿ ಅವರು ಕಾರ್ಮಿಕ ಆಯುಕ್ತರಾಗಿದ್ದಾಗ ಕನ್ನಡ ಕಾರ್ಮಿಕರ ಬಗ್ಗೆ ಮಾಡಿದ ಕೆಲಸಗಳು, ಕನ್ನಡದಲ್ಲಿಯೇ ನೀಡಿದ ಕೆಲವು ಮಹತ್ವದ ತೀರ್ಪುಗಳು ಇಂದಿಗೂ ಸಮಸ್ತ ಕಾರ್ಮಿಕ ವರ್ಗ ನೆನೆಯುತ್ತಿರುವುದು. ಅಂತಹ ಬಹುಮುಖಿ ವ್ಯಕ್ತಿತ್ವ ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಕ್ಕಿರುವುದು ಕನ್ನಡಿಗರ ಭಾಗ್ಯ. ಪರಿಷತ್ತಿಗೆ ಎಲ್ಲ ಕನ್ನಡಿಗರನ್ನು  ಸದಸ್ಯರಾಗುವ ಮಹತ್ವದ ಕಾರ್ಯ ಆಗಬೇಕಿದೆ. ಅದಕ್ಕೆ ನಮ್ಮ ಒಕ್ಕೂಟ ಕೈಜೋಡಿಸಲಿದೆ ಎಂದು ಎಂ. ತಿಮ್ಮಯ್ಯನವರು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಕೈಗಾರಿಕೆ ಮತ್ತು  ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಗೌರವ ಕಾರ್ಯಾಧ್ಯಕ್ಷರಾದ  ಶ್ರೀ ಸಿದ್ದಲಿಂಗಯ್ಯ ನವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಈಗ ನಿಜವಾದ ಕನ್ನಡ ಕಾಯಕದಲ್ಲಿ ತೊಡಗಿಕೊಂಡಿದೆ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದೆ. ಕನ್ನಡ ರಾಜ್ಯದಲ್ಲಿ ಅನ್ನದ ಭಾಷೆಯಾಗಬೇಕು ಎನ್ನುವ ದೃಷ್ಟಿಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ವನ್ನು ಕಾನೂನು ಆಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಹರ್ನಿಷ ದುಡಿದಿದೆ. ಪ್ರತಿಯೊಬ್ಬ ಕನ್ನಡಿಗರ ನಾಡಿ ಮಿಡಿತವನ್ನು ಅರ್ಥಮಾಡಿಕೊಂಡು ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದೆ. ನಾಡಿನಲ್ಲಿ ಬರದ ಕರಿನೆರಳು ಇರುವ ಕಾಲದಲ್ಲಿ ಮಂಡ್ಯದಲ್ಲಿ ನಿಯೋಜಿತ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವ ಮೂಲಕ ಸಮಸ್ತ ಕನ್ನಡಿಗರ ಸ್ಥಿತಿಗತಿಗಳನ್ನು ಅರಿತ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶ್ಯಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ  ಶ್ರೀ ನೇ.ಭ ರಾಮಲಿಂಗ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿದರು. ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

Related posts

ಮದುವೆ ಬಳಿಕ ಮತಾಂತರವಾದರೆ ವೈವಾಹಿಕ ಹಕ್ಕಿಲ್ಲ: ಹೈಕೋರ್ಟ್

21ನೇ ಶತಮಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಾಚಿಕೆಯಾಗಬೇಕು-ಡಾ ಅಕ್ಕಯ್ಯ ಪದ್ಮಶಾಲಿ

ಕಾಮನ್ ಮ್ಯಾನ್ ಸಂಸ್ಥೆ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ.