ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಎಲೆ ಮರೆಯ ಕಾಯಿಯಂತಹ ಸಾಧಕರನ್ನು ಗುರುತಿಸುವ ಕೆಲಸ ಪರಿಷತ್ತು ಮಾಡುತ್ತಿದೆ-ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಸಾಧಕರನ್ನು ನಾವು ಗುರುತಿಸಬೇಕು. ಸಾಧಕರು ಯಾವುದೇ ಕಾರಣಕ್ಕೂ ತಮ್ಮ ಸಾಧನೆಯ ಪರಿಚಯ ಹೇಳಿಕೊಳ್ಳುವ ಸ್ಥಿತಿ ಬಂದರೆ, ಅದು ಸಾಧಕರಿಗೆ ಮಾಡುತ್ತಿರುವ ಅಪಚಾರ. ಸಾಧಕರ ಸಾಧನೆಗೆ ಗೌರವ ನೀಡುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹೇಳಿ, ನಾಡಿನ ಎಲ್ಲಾ ಕ್ಷೇತ್ರದಲ್ಲಿ ಇರುವ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುವವರನ್ನು ಹುಡುಕುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.

 ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಕನ್ನಡದ ಮಠಗಳು ಸಾಕಷ್ಟು ಕೆಲಸ ಮಾಡುತ್ತ ಬಂದಿವೆ. ಕನ್ನಡದ ಗಡಿ ಗಟ್ಟಿ ಇದ್ದರೆ ನಾಡು ಗಟ್ಟಿಯಾಗಿ ಇರುವುದು ಎನ್ನುವ ಮಾತಿನಂತೆ ನಮ್ಮ ನಾಡಿಗೆ ಕನ್ನಡದ ಭದ್ರ ಬೇಲಿಯನ್ನು ಹಾಕುವ ಮೂಲಕ ಕನ್ನಡ ಉಳಿಸುವ ಕೆಲಸವನ್ನು ಮಠಮಾನ್ಯಗಳು ಮಾಡಿವೆ. ಇಂದು ಕನ್ನಡ ಸೇನಾನಿ ಮ. ರಾಮಮೂರ್ತಿಯವರ ನೆನಪಿನಲ್ಲಿ ʻಕನ್ನಡ ಕಾಯಕʼ ಪ್ರಶಸ್ತಿಯನ್ನು ನೀಡಲಾಗುತ್ತಿರುವ ಸಂದರ್ಭದಲ್ಲಿ ಅವರ ಧರ್ಮ ಪತ್ನಿಯ ಶ್ರೀಮತಿ ಕಮಲಮ್ಮ ಅವರನ್ನು ಭೇಟಿಮಾಡಿ, ಅವರ ಆರೋಗ್ಯ ವಿಚಾರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ, ಕಮಲಮ್ಮನವರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಅವರ ಬಗ್ಗೆ ಹೆಚ್ಚಿನ ಕಾಳಜಿವಹಿಸಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯಸಾನ್ನಿದ್ಯ ವಹಿಸಿ  ಕಾರ್ಯಕ್ರಮ ಉದ್ಘಾಟಿಸಿದ ಬೇಲಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶಿವರುದ್ರ ಮಹಾಸ್ವಾಮಿಗಳು  ಸರಕಾರ  ಯಾರ್ಯಾರಿಗೋ ಏನೇನೋ  ಸೌಲತ್ತುಗಳನ್ನು ನೀಡುತ್ತದೆ. ಆದರೆ ನಿಜವಾದ ಸಾಧಕರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ನಮ್ಮ ನಾಡಿನ ಅನರ್ಘ್ಯರತ್ನಗಳು ಎಂದರೆ ವಿವಿಧ ಕ್ಷೇತ್ರದಲ್ಲಿ ಅದ್ಭುತಗಳನ್ನು ಸೃಷ್ಟಿಮಾಡುವ ಮೂಲಕ ಕರುನಾಡಿನ ಹೆಸರನ್ನು ಜಗತ್ತಿಗೆ ತೋರಿಸಿಕೊಡುವವರು. ಅಂತವರನ್ನು ಕನ್ನಡ ಸಾಹಿತ್ಯ ಪರಿಷತ್ತು ಹುಡುಕಿ ಗುರುತಿಸುತ್ತಿದೆ. ಜೊತೆಗೆ ನಾಡೋಜ ಡಾ.ಮಹೇಶ ಜೋಶಿಯವರ ಆಡಳಿತ ಅವಧಿಯಲ್ಲಿ ಪರಿಷತ್ತಿನ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ ಕೆಲಸಗಳನ್ನು ಮಾಡುತ್ತ ಬಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದ ನಾಡಿನ ಖ್ಯಾತ ವಿಮರ್ಶಕರು, ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು ರಾಜ್ಯದಲ್ಲಿ ಕನ್ನಡ ಅಕ್ಷರ ಸಹ ಮೆರೆಯುತ್ತಿದೆ. ಆದರೆ ಉತ್ತರ ಭಾರತದವರು ನಮ್ಮಲ್ಲಿ ಬಂದು ತಮ್ಮದ್ದೇ ನೆಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಕರ್ನಾಟಕವೇ ಒಂದು ರಾಷ್ಟ್ರ, ಭಾರತ ಅದರ ಜೊತೆಗೆ ಸೇರಿಕೊಂಡಿದೆ, ಆದ್ದರಿಂದ ನಾವು ಭಾಷಾ ಪ್ರೇಮ ಮತ್ತು ನಾಡಿನ ಅಭಿಮಾನವನ್ನು ಯಾವತ್ತೂ ಕಡಿಮೆ ಮಾಡಿಕೊಳ್ಳಬಾರುದು. ನಮಗೆಲ್ಲಾ ಕನ್ನಡವೇ ಸತ್ಯ-ಕನ್ನಡವೇ ನಿತ್ಯ- ಅನ್ಯ ನಮಗೆಲ್ಲಾ ಮಿಥ್ಯ. ಕನ್ನಡ ಕನ್ನಡಿಗ ಕರ್ನಾಟಕ ನಮ್ಮ ಧ್ಯೇಯ ವಾಕ್ಯವಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಲೇಖಕಿ, ಅನುವಾದಕರಾದ ಡಾ. ವನಮಾಲಾ ವಿಶ್ವನಾಥ ಮಾತನಾಡಿ  ಪುರುಷರ ಜೊತೆಗೆ ಮಹಿಳೆಯರು ಸರಿಸಮಾನರಾಗಿ ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಮಹಿಳೆ ತನ್ನ ಎಲ್ಲ ಎಲ್ಲೆಗಳನ್ನು ಮೀರಿ ಸಾಧನೆಯ ಗುರಿಯನ್ನು ಇಟ್ಟುಕೊಳ್ಳಬೇಕು. ಒಂದು ಕಾಲದಲ್ಲಿ ಹೆಣ್ಣು ಹೊಸಿಲು ದಾಟಿದರೆ ಅರ್ಥವೇ ಬೇರೆ ಇತ್ತು. ಇಂದು ಹಾಗಿಲ್ಲ ಅತ್ತ ಅಸ್ಮಿತೆ ಕಾಯ್ದುಕೊಳ್ಳಲು ಹಾಗೂ ತನ್ನ ತನ್ನ ಅಭಿವ್ಯಕ್ತಿತ್ವವನ್ನು ಸ್ಥಾಪಿಸಲು ಅನೇಕ ಕ್ಷೇತ್ರಗಳನ್ನು ಸಮರ್ಥವಾಗಿ ಆಯ್ದುಕೊಳ್ಳಲಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ದತ್ತಿ ದಾನಿಗಳ ಪರವಾಗಿ ಮಾತನಾಡಿದ  ಶ್ರೀ ವ.ಚ.ಚನ್ನೇಗೌಡ ಅವರು  ಪರಿಷತ್ತಿನಲ್ಲಿ ಪ್ರದಾನ ಮಾಡುವ ಪ್ರಶಸ್ತಿಗಳಿಗೆ ಅಪಾರವಾದ ಗೌರವ ಹಾಗೂ ಅಷ್ಟೇ ಪ್ರಮಾಣದ ಮಹತ್ವವನ್ನು ಹೊಂದಿದೆ. ೧೦೮ ವರ್ಷಗಳ ಇತಿಹಾಸ ಇರುವ ಒಂದು ಕನ್ನಡಿಗರ ಅಸ್ಮಿತೆಯ ಸಂಸ್ಥೆ ಕೊಡುವ ಪ್ರಶಸ್ತಿ ಬೇರೆ ಯಾವುದೇ ಪ್ರಶಸ್ತಿಗೂ ಸರಿ ಸಮವಾಗಿರುವುದಿಲ್ಲ ಎಂದು ಹೇಳಿದರು.

೨೦೨೩ನೆಯ ಸಾಲಿನ ʻಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ಪ್ರಶಸ್ತಿʼಯನ್ನು ಕನ್ನಡ ಹೋರಾಟಗಾರರು ಹಾಗೂ ಕಲಾವಿದರೂ ಆಗಿರುವ ಬೆಂಗಳೂರಿನ ಶ್ರೀ ಜಿ. ಕೆ. ಸತ್ಯ ಅವರಿಗೆ, ೨೦೨೩ನೆಯ ಸಾಲಿನ ಕನ್ನಡ ಕಾಯಕ ಪ್ರಶಸ್ತಿಯನ್ನು ಕನ್ನಡ ಪರ ಹೋರಾಟಗಾರ ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ ಅವರಿಗೆ, ಪರಿಸರ ಹೋರಾಟಗಾರ, ಕೃಷಿ ಬರಹಗಾರ ಉತ್ತರ ಕನ್ನಡ ಜಿಲ್ಲೆಯ ಶ್ರೀ ಶಿವಾನಂದ ಕಳವೆ ಅವರಿಗೆ ಹಾಗೂ ರಂಗಭೂಮಿ ಕಲಾವಿದೆ ಹೆಲನ್‌ ಮೈಸೂರು ಅವರಿಗೆ ಪ್ರದಾನ ಮಾಡಲಾಯಿತು, ೨೦೨೨ ಹಾಗೂ ೨೦೨೩ನೆಯ ಸಾಲಿನ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಯನ್ನು ಲೇಖಕಿಯರಾದ ಮೈಸೂರಿನ ಡಾ. ಎ. ಪುಷ್ಪ ಅಯ್ಯಂಗಾರ್‌ ಅವರಿಗೆ ಮತ್ತು ವಿಜಯಪುರದ ಶ್ರೀಮತಿ ಜಯಲಕ್ಷ್ಮಿ ಪಾಟೀಲ್‌ ಅವರಿಗೆ ಪ್ರದಾನ ಮಾಡಲಾಯಿತು. ೨೦೨೨ ಹಾಗೂ ೨೦೨೩ನೆಯ ಸಾಲಿನ ʻಮನೋಹರಿ ಪಾರ್ಥಸಾರಥಿ ʻಮನುಶ್ರೀʼ ಪ್ರಶಸ್ತಿʼಯನ್ನು ಲೇಖಕಿಯರಾದ ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ ಅವರಿಗೆ ಮತ್ತು ಚಿಕ್ಕಮಗಳೂರಿನ ಶ್ರೀಮತಿ ಡಿ. ಎನ್. ಗೀತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

 ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಹಿರಿಯ ಕಲಾವಿದ ಹಾಗೂ ಕನ್ನಡ ಹೋರಾಟಗಾರ ಶ್ರೀ. ಜಿ.ಕೆ. ಸತ್ಯ ಮಾತನಾಡಿ ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿಯವರು ನನ್ನಂತಹ ಅನೇಕ ಬದುಕನ್ನು ಬದಲಾಯಿಸಿದ್ದವರು. ಕನ್ನಡಕ್ಕೆ ಅವರ ಕೊಡುಗೆ ಅಪಾರ. ಕನ್ನಡ ನಾಡುನುಡಿ ಎಂದೆಂದಿಗೂ ಅಜರಾಮರ. ಅಲ್ಲಿಯವರೆಗೂ ಮ. ರಾಮಮೂರ್ತಿಯವರಂತರ ಕೊಡುಗೆ ನಿತ್ಯನೂತನ ಎಂದರು. ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ ಅವರು ಮಾತನಾಡಿ ಗಡಿ ಗಟ್ಟಿ ಇದ್ದರೆ ಪಂಚೆ ಗಟ್ಟಿಇರುತ್ತದೆ ಎನ್ನುವಂತೆ ನಾಡಿನ ಗಡಿ ಭದ್ರವಾಗಿದ್ದರೆ ನಾಡು ಭದ್ರವಾಗಿರುವುದು. ಅದಕ್ಕೆ ನಾವು ಕನ್ನಡದ ದಿಕ್ಷೆ ಪಡೆದು ಕೆಲಸ ಮಾಡುತ್ತಿದ್ದೇವೆ. ಮಹಾರಾಷ್ಟ್ರದವರು ನಮ್ಮ ೩೮ ಹಳ್ಳಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ನಾವೆಲ್ಲಾ ಒಂದಾಗಿ ಗಡಿಯ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಮೊಳಗುವಂತೆ ಮಾಡಬೇಕು ಎಂದು ಕರೆಕೊಟ್ಟರು. ಲೇಖಕಿ ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮೋತ್ತಮ ಕೆಲಸಗಳನ್ನು ಮಾಡುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿದವರನ್ನು ಹುಡುಕಿ ಅವರನ್ನು ವೇದಿಕೆ ಕಲ್ಪಿಸುವ ಮೂಲಕ ಹೆಚ್ಚು ಸಾಹಿತಿಗಳು ಸೇರಿದಂತೆ ಇತರ ಕ್ಷೇತ್ರದಲ್ಲಿ ಇರುವ ಸಾಧಕರನ್ನು ಗುರುತಿಸಿ ಅವರಿಂದ ಹೆಚ್ಚಿನ ಕೆಲಸಗಳು ಆಗುವಂತೆ ನೋಡುಕೊಳ್ಳವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

 ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿದರು.ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್‌.ಎಸ್‌. ಶ್ರೀಧರ್‌ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಇನ್ನೋರ್ವ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಜ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಮ್‌, ಪಟೇಲ್‌ ಪಾಂಡು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Related posts

ಭಿಕ್ಷೆ ಬೇಡುವುದು ಬಿಟ್ಟು ಗೌರವಯುತವಾದ ಜೀವನ ನಡೆಸಿ-ಸಮುದಾಯ ಸಂಘಟನಾ ಅಧಿಕಾರಿ ಅನುಪಮಾ ಕರೆ

ಕರ್ನಾಟಕ ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ- ಡಿಸಿಎಂ ಶಿವಕುಮಾರ್ ವಿಶ್ವಾಸ.

ಸರ್ಕಾರದಿಂದ ಗ್ಯಾರಂಟಿ ಜಾರಿ: ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ-ಸಚಿವ ಮಧು ಬಂಗಾರಪ್ಪ