ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಬ್ಯಾಂಕಿಂಗ್ ಪರೀಕ್ಷೆಯಲ್ಲಿ  ಕನ್ನಡರಿಗೆ ಅನ್ಯಾಯ: ಕೇಂದ್ರದ ಇಬ್ಬಗೆಯ ನೀತಿಗೆ ನಾಡೋಜ ಡಾ. ಮಹೇಶ ಜೋಶಿ ಅಸಮಾಧಾನ

ಬೆಂಗಳೂರು : ಬ್ಯಾಂಕಿಂಗ್ ಪರೀಕ್ಷೆಯಲ್ಲಿ  ಕನ್ನಡ ಭಾಷೆಗೆ ಅವಕಾಶ ಕಲ್ಪಿಸದೇ ಇರುವುದು ಸಮಸ್ತ ಕನ್ನಡ ನಾಡಿಗೆ ಮಾಡುತ್ತಿರುವ ಅವಮಾನ. ಕನ್ನಡಿಗರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವ  ಕೇಂದ್ರ ಸರಕಾರದ ಅಡಿಯಲ್ಲಿ ಇರುವ ಐಬಿಪಿಎಸ್‌(ಇನ್ಸ್ಟಿಟ್ಯೂಟ್‌ ಫಾರ್‌ ಬ್ಯಾಂಕಿಂಗ್‌ ಝೋನಲ್‌ ಸೆಲೆಕ್ಷನ್‌) ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲಿ ನಡೆಸುವ ಮೂಲಕ ಕನ್ನಡಿಗರ ವಿರುದ್ಧದ ಮಲತಾಯಿ ಧೋರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ ಎಂದು ನಾಡೋಜ ಡಾ.ಮಹೇಶ ಜೋಶಿ ಕಿಡಿಕಾರಿದ್ದಾರೆ.

ಐಬಿಪಿಎಸ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ನಡೆಸುವ ಮೂಲಕ ಕನ್ನಡ ಸೇರಿದಂತೆ ದೇಶದ ಇತರ ಎಲ್ಲಾ ಪ್ರಾದೇಶಿಕ ಭಾಷಿಕರಿಗೆ ಅನ್ಯಾಯವಾಗುತ್ತಿದೆ. ಕೇವಲ ಹಿಂದಿ ಅಥವಾ ಇಂಗ್ಲಿಷ ಭಾಷೆಯಲ್ಲಿ ಬ್ಯಾಂಕಿಂಗ್‌ ಪರೀಕ್ಷೆಯನ್ನು ನಡೆಸುವುದರಿಂದ ಸಾಮಾನ್ಯಜನರು ಅವಕಾಶ ವಂಚಿತರಾಗುತ್ತಿದ್ದಾರೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸರಕಾರ ಸೇರದಂತೆ ಇತರ ನೇಮಕಾತಿ ಸಂಸ್ಥೆಗಳಿಗೆ ಪ್ರಾದೇಶಿಕ ಭಾಷೆಗಳ ಮಹತ್ವ ಮತ್ತು ಅವುಗಳನ್ನು ಕಡೆಗಣಿಸದೇ ಇರುವಂತೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ. ಆದರೂ ಭಾಷಾ ಗೊಂದಲಕ್ಕೆ ಕಾರಣವಾಗುವಂತೆ ರಾಷ್ಟ್ರೀಯ ಪರೀಕ್ಷೆಯಲ್ಲಿ ಹಿಂದಿಯೇತರ ಭಾಷೆಗಳ ಕಡೆಗಣನೆ ಮಾಡಲಾಗುತ್ತಿದೆ ಎಂದು ಕನ್ನಡ ಸಾಹತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ದೇಶದಲ್ಲಿರುವ ಹಿಂದಿ ಭಾಷಿಗರು ಹಿಂದಿಯಲ್ಲೇ ಪರೀಕ್ಷೆ ತೆಗೆದುಕೊಳ್ಳಬಹುದಾದರೆ, ಕನ್ನಡಿಗರು ಹಾಗೂ ದೇಶದ ಇನ್ನಿತರ ಮಾತೃಭಾಷಿಗರಿಗೂ ಅವರದೇ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ಇರಬೇಕು.  ತಮ್ಮ ಮಾತೃಭಾಷೆಯನ್ನು ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅನಿವಾರ್ಯ ವಾತಾವರಣ ತಂದಿರುವುದು ಖಂಡನೀಯ. ಹಿಂದಿ ಹೇರಿಕೆ ಹಾಗೂ ಹಿಂದಿಯೇತರರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕನಿಷ್ಠ ದೃಷ್ಟಿಯಿಂದ ಕಾಣುವ ಮನಸ್ಸುಗಳು ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದೆ. ಕರ್ನಾಟಕದಲ್ಲಿನ ಬ್ಯಾಂಕುಗಳಲ್ಲಿ ಕನ್ನಡಕ್ಕೆ ಅವಕಾಶ ಇಲ್ಲದೆ ಇತರ ಭಾಷೆಗೆ ಅವಕಾಶವಿದೆ ಎನ್ನುವುದು ಸಹಿಸಲಾರದ ಸಂಗತಿಯಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ  953 ಗುಮಾಸ್ತ ಹುದ್ದೆಗಳಿಗೆ ಮತ್ತು ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆಗೆ ಐಬಿಪಿಎಸ್‌ ಅರ್ಜಿ ಆಹ್ವಾನಿಸಿದ್ದನ್ನು ಪರಿಷತ್ತು ಸ್ವಾಗತಿಸುತ್ತದೆ. ಆದರೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದೇ ಇರುವುದನ್ನು ನೇರವಾಗಿ ಖಂಡಿಸುತ್ತದೆ. ಕನ್ನಡಕ್ಕೆ ಕಿಮ್ಮತ್ತು ಕೊಡದ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪರಿಷತ್ತು ಕನ್ನಡ ಭಾಷೆಯ ಮಹತ್ವ, ಭಾಷೆಯ ಇತಿಹಾಸವನ್ನು ತಿಳಿಸುವ ಕೆಲಸ ಮಾಡಿದೆ. ಜೊತೆಗೆ ಕೇಂದ್ರದ ಅಧೀನದಲ್ಲಿ ಬರುವ ಬ್ಯಾಂಕಿಂಗ್‌ ಸೇರಿದಂತೆ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶ ಕಲ್ಪಿಸಬೇಕೆಂದು ಬೇಡಿಕೆಯನ್ನು ಮುಂದಿಡಲಾಗಿತ್ತು.

    ಪರಿಷತ್ತು ಸಮಸ್ತ ಕನ್ನಡಿಗರ ಪರವಾಗಿ ಮಾಡಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎನ್ನುವ  ಬೇಡಿಕೆಯ ನಂತರವೂ ಕೇಂದ್ರ ಸರ್ಕಾರ ಐಬಿಪಿಎಸ್‌ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ ಎನ್ನುವುದು ಖೇದಕರ ಸಂಗತಿ ಎಂದಿದ್ದಾರೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಸಾಕಷ್ಟು ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶ್ನಿಸುತ್ತಲೇ ಬಂದಿದೆ. ಆದರೂ ದಪ್ಪ ಚರ್ಮದ ಅಧಿಕಾರಿಗಳಿಗೆ ಕನ್ನಡಿಗರ ನೋವು ಅರ್ಥವಾಗುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಈ ಹಿಂದೆ ಕೇಂದ್ರ ಸಚಿವರುಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಪ್ರಹ್ಲಾದ್ ಜೋಶಿ ಸೇರಿದಂತೆ ಇತರರಿಗೆ ಪತ್ರ ಬರೆಯುವ ಮೂಲಕ ಕನ್ನಡಿಗರಿಗೆ ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಲು ಕೋರಲಾಗಿತ್ತು. ಆಗ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಪರಿಷತ್ತಿಗೆ ನೀಡಿದ್ದರು.  ಆದರೆ ಐಬಿಪಿಎಸ್‌ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಅನ್ಯಾಯ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕಾನೂನು ಹೋರಾಟಕ್ಕೆ ಚಿಂತನೆ ಮಾಡುತ್ತಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

Related posts

ನಾಳಿನ ಸರ್ವಪಕ್ಷ ಸಭೆ:  ಮಾಜಿ ಸಿಎಂಗಳಿಗೆ ಆಹ್ವಾನ ನೀಡಿದ ಸಿಎಂ ಸಿದ್ಧರಾಮಯ್ಯ 

ಅ.14, 15ರಂದು ಶಿವಮೊಗ್ಗದಲ್ಲಿ ಕನ್ಯಾದಾನ

ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೆ ಬ್ಯಾಂಕ್‍ಗಳು ಸಹಕರಿಸಬೇಕು – ಸಂಸದ  ಬಿ.ವೈ.ರಾಘವೇಂದ್ರ.