ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಮತ್ತೆ ಬಿಜೆಪಿ ಸೇರ್ತಾರಾ ಶಾಸಕ ಗಾಲಿ ಜನಾರ್ದನ ರೆಡ್ಡಿ….?

ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದ್ದು,ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿ ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಬಿಜೆಪಿ ಇದೀಗ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ.

ಹೌದು, KRPP ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸರ್ವ ಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಕಟ್ಟಿ ಚುನಾವಣೆಯಲ್ಲಿ ಗೆದ್ದ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತರುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಸ್ಥಾನ ಕೈತಪ್ಪದಂತೆ ಬಿಜೆಪಿ ಯೋಚಿಸಿದೆ. ಇದರಿಂದ ಕಾಂಗ್ರೆಸ್ ಗೂ ತಕ್ಕ ಉತ್ತರ ನೀಡಿದಂತಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ದಶಕದಿಂದಲೂ ರಾಜಕೀಯದಿಂದ ದೂರ ಉಳಿದಿದ್ದ ಗಾಲಿ ಜನಾರ್ದನ್ ರೆಡ್ಡಿ ಇದೇ 2023ರ ಚುನಾವಣೆ ವೇಳೆ ಸ್ವಂತ ಪಕ್ಷ ಕೆಆರ್ಪಿಪಿ ಕಟ್ಟುವ ಮೂಲಕ ಕಲ್ಯಾಣ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಠಕ್ಕರ್ ಕೊಟ್ಟಿದ್ದರು.

ರಾಜ್ಯದ ವಿವಿಧ ಕಡೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರ ರಾಜಕೀಯ ಪ್ರವೇಶ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ರೆಡ್ಡಿಯವರ ಈ ನಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕದಲ್ಲಿ ಸವಾಲುಗಳು ಸೃಷ್ಟಿಯಾದವು. ಮತಗಳು ಒಡೆದು ಹೋಗುವ ಜೊತೆಗೆ ಕ್ಷೇತ್ರಗಳು ಕೈತಪ್ಪುವ ಭೀತಿ ಎದುರಾಗಿತ್ತು.

ಇದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸ್ಪರ್ಧಿಸಿ ಕೆಆರ್ಪಿಪಿಯಿಂದ ರೆಡ್ಡಿಯವರು ಮಾತ್ರವೇ ಗೆದ್ದರು. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಗೆ ವಿರುದ್ಧ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಅಖಾಡಕ್ಕಿಳಿಸಿ ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಇದೆಲ್ಲ ಗಮನಿಸಿರುವ ಬಿಜೆಪಿ ಮುಂದೆ ಹೀಗಾಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಕೆಆರ್ಪಿಪಿ ಸಂಸ್ಥಾಪಕರನ್ನು ಕರೆತರಲು ಕೇಂದ್ರ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತಂದರೆ ಪಕ್ಷದ ಮುಂದಿನ ಸವಾಲುಗಳು ಏನು?, ಇದರಿಂದ ಸ್ಥಳೀಯ ಮಟ್ಟದಲ್ಲಿ ಆಗುವ ಲಾಭಗಳು ಕುರಿತು ಚರ್ಚೆ ನಡೆಸಲಾಗಿದೆ. ಸದ್ಯ ರಾಜಕೀಯ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ರೆಡ್ಡಿಯನ್ನು ಕರೆತರುವ ಮೂಲಕ ಲೋಕಸಭಾ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಮುಂದಾಗಿದೆ. ಇದರೊಂದಿಗೆ ನಂತರ ಬರಲಿರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪದವಿಧರರ ಕ್ಷೇತ್ರದ ಚುನಾವಣೆಗಳಲ್ಲಿ ಸೀಟು ಭದ್ರಪಡಿಸಿಕೊಳ್ಳಲು, ತಮ್ಮ ಮತ ಬ್ಯಾಂಕ್ ಕೈತಪ್ಪದಂತೆ ರಣತಂತ್ರ ಹೆಣೆಯುತ್ತಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮಗೊಳ್ಳಬೇಕಿದೆ.

 

Related posts

ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಶಿವಮೊಗ್ಗದ ಪುಟಾಣಿ ವಿರಾಟ್

ಜಾತಿ ಜನಗಣತಿ ವರದಿ  ಕೊಡುವ ಮುನ್ನವೇ ವಿರೋಧ ಏಕೆ..?  ಸಿಎಂ ಸಿದ್ದರಾಮಯ್ಯ ಪ್ರಶ್ನೆ.

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ 50ನೇ ಹುಟ್ಟುಹಬ್ಬ: ವಿಶೇಷ ಪೂಜೆ.