ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅವಕಾಶ-ಸಚಿವ ಶರಣಪ್ರಕಾಶ್ ಪಾಟೀಲ್

ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು.
ಅವರು ಇಂದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಿದ್ವಾಯ್ ಸ್ಮಾರಕ ಗ್ರಂಥಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಿದ್ವಾಯ್ ಮಾದರಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಕಿದ್ವಾಯ್ ಮಾದರಿಯಲ್ಲಿ ಸ್ಥಾಪಿಸಲಾಗುವುದು. ಮುಂದಿನ ಹದಿನಾರು ತಿಂಗಳಲ್ಲಿ ಇದಕ್ಕೊಂದು ಕಾಯಕಲ್ಪ ನೀಡಲು ಈಗಾಗಲೇ ಸೂಚಿಸಿದ್ದೇನೆ. ಸುಮಾರು 100 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು. ಈಗಾಗಲೇ 50 ಕೋಟಿ ರೂ. ಬಿಡುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅವಕಾಶ ಕಲ್ಪಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳು ಇರುವ ಕಡೆ ಒತ್ತು ನೀಡಲಾಗುವುದು ಎಂದರು.
ಕಟ್ಟಡ ಉದ್ಘಾಟನೆ ಆಗುವ 6 ತಿಂಗಳ ಮುಂಚೆಯೇ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಉಪಕರಣಗಳ ಪಟ್ಟಿ ಮಾಡಿಕೊಡಬೇಕು. ಕಟ್ಟಡ ಕಟ್ಟಲು ಎರಡು ವರ್ಷ ಅವಧಿ ಇದ್ದರೂ ಹದಿನಾರು ತಿಂಗಳಲ್ಲಿ ಮುಗಿಸಬೇಕೆಂದು ಸೂಚನೆ ನೀಡಿದ್ದೇನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ತೊಂದರೆಗಳಿವೆ ಎಂಬುದನ್ನು ಗಮನಿಸಿದ್ದೇನೆ. ಪರಿಹಾರ ಮಾಡುವತ್ತ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದ ಅವರು, ಇದೇ ಸಂದರ್ಭದಲ್ಲಿ ದಿ. ಬಂಗಾರಪ್ಪನವರನ್ನು ನೆನಪಿಸಿಕೊಂಡರು. ಮಧ್ಯ ಕರ್ನಾಟಕದಲ್ಲಿ ಜನರು ಹೆಚ್ಚಿನ ಚಿಕಿತ್ಸೆ ಪಡೆಯಲು ಮಂಗಳೂರು ಅಥವಾ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ.ಅದಕ್ಕಾಗಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಇಲ್ಲಿಯೇ ಎಲ್ಲಾ ಸೌಲಭ್ಯ ಕಲ್ಪಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ,, ಬಿ.ಕೆ. ಸಂಗಮೇಶ್, ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೆಹಕ್ ಶರೀಫ್, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ದೇವೇಂದ್ರಪ್ಪ, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಜಿಲ್ಲಾ ಸರ್ಜನ್ ಡಾ. ತಿಮ್ಮಪ್ಪ ಮತ್ತಿತರರಿದ್ದರು.

Related posts

ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲಲಾಗದು : ಜಿ.ಎಸ್.ನಾರಾಯಣರಾವ್

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ, ಮಂಜುನಾಥ ಗೌಡ 10ನೆ ಬಾರಿಗೆ ಅವಿರೋಧ ಆಯ್ಕೆ.

ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅವರ ಪ್ರತಿಕ್ರಿಯೆ ಏನು ಗೊತ್ತೆ..?