ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಸಂಕಲ್ಪ ಹೊಂದಿರುವೆ-ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಸಂಕಲ್ಪ ಹೊಂದಿರುವೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್‍ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಶಿಕ್ಷಣ ಖಾತೆ ಸಿಕ್ಕಿರುವುದು ನನಗೊಂದು ಸವಾಲೇ ಸರಿ.ಇದನ್ನು ನಿಭಾಯಿಸುತ್ತೇನೆ ಎಂಬ ನಂಬಿಕೆಯಿಂದ ನಮ್ಮ ನಾಯಕರು ನನಗೆ ಈ ಖಾತೆ ನೀಡಿದ್ದಾರೆ. ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಕೇವಲ 100 ದಿನಗಳಲ್ಲಿಯೇ ಕೆಲವು ಬದಲಾವಣೆಗಳಾಗಿವೆ.ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳ ಮೂಲಕ ಶಿಕ್ಷಣ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡುಹೋಗುವೆ ಎಂದರು.
ಪಠ್ಯ-ಪುಸ್ತಕ ಪರಿಷ್ಕರಣೆ ಸೇರಿದಂತೆ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವುದು, ಎಲ್‍ಕೆಜಿ ಯುಜಕೆಜಿ ತೆರೆಯುವುದು, ಇಂಗ್ಲಿಷ್ ಕಲಿಕೆಗೂ ಆದ್ಯತೆ ನೀಡುವುದು, ಶಿಕ್ಷಕರ ನೇಮಕಾತಿ, ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ, ಖಾಸಗಿ ಶಾಲೆಗಳಲ್ಲೂ ಶಿಕ್ಷಣದ ಕಂಪನ್ನು ಹೆಚ್ಚಿಸುವುದು ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರ ಮಾಡಲಾಗುವುದು. ಈಗಾಗಲೇ ಮಕ್ಕಳಿಗೆ ಎರಡು ಮೊಟ್ಟೆ, ಬಾಳೆ ಹಣ್ಣು, ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಮಿಠಾಯಿ ನೀಡಲಾಗುತ್ತಿದೆ ಎಂದರು.
ಬಿಜೆಪಿ ಸರ್ಕಾರ ನಮ್ಮ ಮಕ್ಕಳಿಗೆ ಬೇಡವಾದ ಪಠ್ಯಗಳನ್ನು ಸೇರಿಸಿ ಕೆಟ್ಟ ಬುದ್ಧಿ ತುಂಬಿತ್ತು. ಆ ಹೊಲಸನ್ನು ತೆಗೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಹಾಗಾಗಿಯೇ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯಗಳನ್ನು ಕೈಬಿಟ್ಟಿದ್ದೇವೆ ಎಂದ ಅವರು, ಖಾಯಂ ಶಿಕ್ಷಕರ ಬೇಡಿಕೆ ಹೆಚ್ಚಾಗಿದೆ. ನ್ಯಾಯಾಲಯದ ಆದೇಶ ಬಂದ ತಕ್ಷಣ ಸುಮಾರು 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಒಬ್ಬ ರಾಜಕಾರಣಿಗೆ ಹೋರಾಟದ ಬದುಕು ಅನಿವಾರ್ಯ. ಅದೇ ಅವನ ಶಕ್ತಿ. ಈ ಶಕ್ತಿಯನ್ನು ನಮ್ಮ ತಂದೆಯವರು ನನಗೆ ನೀಡಿದ್ದರು. ಹೋರಾಟಗಾರ ಎಂದೇ ನಾನು ಗುರುತಿಸಿಕೊಂಡಿದ್ದೇನೆ. ನನ್ನ ಹೋರಾಟದ ಹಿಂದೆ ಬಹಳ ಜನರಿದ್ದಾರೆ.ನಾನು ಕಾಂಗ್ರೆಸ್ ಸೇರಿದ ತಕ್ಷಣ ಅನೇಕ ದೊಡ್ಡ ದೊಡ್ಡಹುದ್ದೆಗಳನ್ನು ನೀಡಲಾಯಿತು.ಇದು ನನ್ನ ಹೋರಾಟದ ಹೆಜ್ಜೆಗಳಿಗೆ ನೀಡಿದ ಗೌರವವಾಗಿದೆ. ಇದಕ್ಕಾಗಿ ಸೊರಬ ಜನತೆಗೆ ನಾನು ಅಭಿನಂದಿಸುವೆ ಎಂದರು.
ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಿವಮೊಗ್ಗದ ಏರ್‍ಪೋರ್ಟ್ ಅನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿಪಡಿಸಲಾಗುವುದು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಮತ್ತಷ್ಟು ಸಹಕಾರ ನೀಡಬೇಕು. ಉಡಾನ್ ಯೋಜನೆ ಜಾರಿಯಾಗಬೇಕು. ಈಗ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸುಮಾರು 14ಸಾವಿರ ದರವಿದೆ. ಮೋದಿಯವರು ಹೇಳಿದಂತೆ ಹವಾಲಿ ಚಪ್ಪಲಿ ಧರಿಸುವವನು ಈ ದರದಲ್ಲಿ ವಿಮಾನ ಏರಲು ಸಾಧ್ಯವಿಲ್ಲ. ಆದರೆ ಹವಾಯಿ ಚಪ್ಪಲಿ ಧರಿಸುವವನಿಗೆ ನಮ್ಮ ಸರ್ಕಾರ ಶಕ್ತಿ ತುಂಬುತ್ತಿದೆ. ಅದೇನೇ ಇದ್ದರೂ ಶಿವಮೊಗ್ಗಕ್ಕೆ ವಿಮಾನ ಬರುತ್ತಿರುವುದು ಅತ್ಯಂತ ಸ್ವಾಗತಾರ್ಹ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದರು.
ಕಳೆದ ಕೆಲವು ವರ್ಷಗಳಲ್ಲಿ ಶಿವಮೊಗ್ಗಕ್ಕೆ ಯಾವ ಅನುದಾನವೂ ಸಿಕ್ಕಿಲ್ಲ ಎಂಬುದು ನಿಜ. ಈ ಬಾರಿ ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗಕ್ಕೆ ಅನುದಾನ ತರಲು ಪ್ರಯತ್ನಿಸುತ್ತೇನೆ. ಆ ಮೂಲಕ ಎಲ್ಲಾ ರೀತಿಯ ಅಭಿವೃದ್ಧಿಗೆ ಪ್ರಯತ್ನ ಪಡುತ್ತೇನೆ . ಮುಖ್ಯವಾಗಿ ಇಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಕೈಗಾರಿಕೆಗಳು ಬೆಳೆಯಬೇಕು. ಬಿಜೆಪಿ ಸರ್ಕಾರ ಇದ್ದಾಗ ಕೇವಲ ಮಾತನಾಡಿತೇ ಹೊರತು ಏನನ್ನೂ ಕಾರ್ಯರೂಪಕ್ಕೆ ತರಲಿಲ್ಲ ಎಂದು ಟೀಕಿಸಿದರು.
ನಳಿನ್‍ಕುಮಾರ್ ಕಟೀಲ್ ಟೀಕೆಗೆ ಕಟುವಾಗಿ ಉತ್ತರ ನೀಡಿದ ಅವರು, ಕಟೀಲು ಅವರಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಜನರು ಅವರಿಗೆ ಸರಿಯಾದ ಶಿಕ್ಷೆ ನೀಡಿದ್ದಾರೆ. ಸೊರಬದ ಜನತೆ ನನ್ನನ್ನು 44 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಮೋದಿ ಅವರು ಈ ಕಟೀಲರನ್ನು ಎಲ್ಲಿ ನಿಲ್ಲಿಸಿದ್ದರು ಎಂದು ಅರ್ಥ ಮಾಡಿಕೊಳ್ಳಲಿ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ ಇದ್ದರು.

Related posts

ವನ್ಯಜೀವಿಗಳ ಸಂರಕ್ಷಣೆ, ನಾಗರಿಕ ಸಮಾಜದ ಹೊಣೆ: ಡಾ. ಸಂಜಯ್ ಗುಬ್ಬಿ

 ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳಿಗೆ  ಸಿಎಂ ಸಿದ್ದರಾಮಯ್ಯ ಸನ್ಮಾನ, ಅಭಿನಂದನೆ. 

ಅಜ್ಞಾನ, ಮೌಢ್ಯ, ಷೋಷಣೆ, ಜಾತೀಯತೆ, ಲಿಂಗತಾರತಮ್ಯ ದೂರ ಮಾಡಿ ಸಮಸಮಾಜ ನಿರ್ಮಿಸಿದವರು ಬಸವಣ್ಣ-