ಕನ್ನಡಿಗರ ಪ್ರಜಾನುಡಿ
ಜಿಲ್ಲೆನ್ಯೂಸ್ಪ್ರಧಾನ ಸುದ್ದಿಮಂಡ್ಯಮುಖ್ಯಾಂಶಗಳುರಾಜಕೀಯ

ರೈತರೇ ಬೇಸಿಗೆ ಬೆಳೆ ಬೆಳೆಯಬೇಡಿ: ಸಚಿವ ಚಲುವರಾಯಸ್ವಾಮಿ ಮನವಿ

ಶ್ರೀರಂಗಪಟ್ಟಣ (ಡಿ.23): ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೇಸಿಗೆ ಬೆಳೆ ಬೆಳೆಯಲು ಮುಂದಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. ತಾಲೂಕಿನ ಕೆಆರ್‌ಎಸ್‌ನಲ್ಲಿ ಶುಕ್ರವಾರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಲಾಶಯದ ನೀರಿನ ಮಟ್ಟ, ಕುಡಿಯುವ ನೀರಿನ ಲಭ್ಯತೆ ಹಾಗೂ ರೈತರ ಬೆಳೆಗೆ ನೀರು ಕೊಡುವ ಬಗ್ಗೆ ಚರ್ಚೆ ನಡೆಸಿದರು.

ನಂತರ ಸ್ಥಳೀಯ ಶಾಸಕರು, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದ ಸಚಿವರು, ಜಲಾಶಯದಲ್ಲಿ ನೀರು ಕಡಿಮೆ ಇರುವುದರಿಂದ, ಮುಂದೆ ಬೇಸಿಗೆ ಎದುರಾಗುವುದರಿಂದ ಜನ, ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಅಣೆಕಟ್ಟೆಗಳು ಭರ್ತಿಯಾಗಿಲ್ಲ. ಆದರೂ ನದಿ ಪಾತ್ರದ ರೈತರ ಹಿತದೃಷ್ಟಿಯಿಂದ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ನವೆಂಬರ್ ಅಂತ್ಯದವರೆಗೂ ನೀರು ಹರಿಸಲಾಗಿದೆ ಎಂದು ವಿವರಿಸಿದರು.

ನದಿ ಪಾತ್ರದಲ್ಲಿನ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆ ರಕ್ಷಣೆಗೆ ನಿಯಮಿತವಾಗಿ ರೈತರ ಹಿತ ಕಾಪಾಡಲು ಸಂಕಷ್ಟ ಸಮಯದಲ್ಲೂ ನೀರು ಹರಿಸಲಾಗಿದೆ. ಸಿಎಂ, ಡಿಸಿಎಂ, ನೀರಾವರಿ ಸಚಿವರು, ಶಾಸಕರು, ಸಮಿತಿ ಜೊತೆ ಚರ್ಚಿಸಿ ಸಲಹೆ ಪಡೆದು ಇಲ್ಲಿವರೆಗೆ ನೀರು ಹರಿಸಲಾಗಿದೆ ಎಂದರು. ನಾಲೆಗಳಿಗೆ ನೀರು ಹರಿಸಲು ಪೂರ್ಣ ಅಧಿಕಾರ ನೀರಾವರಿ ಸಲಹಾ ಸಮಿತಿಗೆ ಇಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರಾಧಿಕಾರ ಸೇರಿದಂತೆ ನೀರಾವರಿ ಅಧಿಕಾರಿಗಳು ಸಾಕಷ್ಟು ಶ್ರಮದಿಂದ ಇಲ್ಲಿಯವರೆಗೆ ರೈತರ ಬೆಳೆಗೆ ನೀರು ಹರಿಸಲಾಗಿದೆ. ಇನ್ನೂ ಮುಂದೆ ನೀರು ಹರಿಸುವುದು ಕಷ್ಟ ಸಾಧ್ಯ ಎಂದರು.

ಪ್ರಸ್ತುತ ಅಣೆಕಟ್ಟೆಯಲ್ಲಿ 16 ಟಿಎಂಸಿ ನೀರಿದೆ. ಕುಡಿಯುವ ನೀರು, ಕೈಗಾರಿಕೆಗೆ ಬಳಕೆಗೆ ಮಾತ್ರ ಲಭ್ಯವಿದೆ. ಮುಂದಿನ ಜೂನ್ ವರೆಗೆ 14 ಟಿಎಂಸಿ ನೀರು ಕುಡಿಯಲು ಅಗತ್ಯವಾಗಿದೆ. 2 ರಿಂದ 3 ಟಿಎಂಸಿ ನೀರು ಬಳಕೆಗೆ ಸಾಧ್ಯವಾಗದು. ಉಳಿದ 13.50 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದರು. ಅಣೆಕಟ್ಟೆ ವ್ಯಾಪ್ತಿಯ ರೈತರು ಬೇಸಿಗೆಯಲ್ಲಿ ಯಾವುದೇ ರೀತಿಯ ಅಲ್ಪಾವಧಿ ಅಥವಾ ದೀರ್ಘಾವಧಿ ಬೆಳೆಗಳನ್ನು ಬೆಳೆಯಲು ಮುಂದಾಗಬಾರದು. ಬೆಳೆ ಬೆಳೆದು ನೀವು ತೊಂದರೆ ಸಿಲುಕಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.

ಮುಂಗಾರಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡಿದ್ದೇವೆ. ಬೆಳೆಗೆ ನಷ್ಟವಾಗಿಲ್ಲ. ಅಚ್ಚುಕಟ್ಟು ಬಿಟ್ಟು ಉಳಿದ ಜಿಲ್ಲೆಯ 7 ತಾಲೂಕುಗಳ ಪ್ರದೇಶಗಳಲ್ಲಿ ರೈತರಿಗೆ ಬರ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ನೀರಾವರಿ ಸಲಹಾ ಸಮಿತಿ ಸಭೆಗೆ ಮಂಡ್ಯ, ಮೈಸೂರು ಸಂಸದರು ಹಾಗೂ ಮೈಸೂರು ಜಿಲ್ಲಾಡಳಿತ ದೂರ ಉಳಿದಿದ್ದಾರೆ ಎಂಬ ಪ್ರಶ್ನೆಗೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಪ್ರತಿ ಸಭೆಗೆ ಭಾಗಿಯಾಗುತ್ತಿದ್ದ ಮೈಸೂರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಾರಿ ಗೈರಾಗಿದ್ದಾರೆ ಎಂದರು.

ವರುಣ, ವಿಸಿ ಸೇರಿದಂತೆ ಎಲ್ಲಿಗೂ ಬಿಡಲು ಸಾಧ್ಯವಿಲ್ಲ. ಸಂಕ್ರಾಂತಿ ವೇಳೆ ನೀರು ಬಿಡುವಂತೆ ರೈತರು ಮನವಿ ಮಾಡಿದ್ದಾರೆ. ಜನವರಿ 10ರವರೆಗೆ ಕಾದು ನೋಡೋಣ. ಮುಂದೆ ಒಳ್ಳೆ ಮಳೆಯಾದರೆ ನೀರು ಬಿಡಲು ನಮ್ಮ ಅಭ್ಯಂತರವಿಲ್ಲ ಎಂದರು. ಸಭೆಯಲ್ಲಿ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರ ಆರ್.ಎನ್.ವೆಂಕಟೇಶ್, ಅಧೀಕ್ಷಕ ಅಭಿಯಂತರ ರಘುರಾಂ, ಕಾರ್ಯಪಾಲಕ ಅಭಿಯಂತರ ಜಯಂತ್ ಹಾಜರಿದ್ದರು.

Related posts

ಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧ ವಿಲ್ಲ; ಈಡಿಗ ಸಂಘ ಸ್ಪಷ್ಟನೆ.

ವರಮಹಾಲಕ್ಷ್ಮಿ ಹಬ್ಬಕ್ಕೆಂದು ಕೆರೆಯಲ್ಲಿ ಹೂ ಕೀಳಲು ಹೋಗಿದ್ದ ತಂದೆ ಮಗ ದುರಂತ ಸಾವು..

ವಕೀಲರೊಬ್ಬರ ಮೇಲೆ ಗಂಭೀರ ಸ್ವರೂಪದ  ಹಲ್ಲೆ ಆರೋಪ: ಮೂವರು ಪೊಲೀಸ್ ಸಿಬ್ಬಂದಿಗಳು ಅಮಾನತು.