ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನುದಾನಿತ ಪಿಂಚಣಿ ವಂಚಿತ ನೌಕರರ ಸಮಸ್ಯೆ ಬಗರಹರಿಲು ಆಗ್ರಹ: ನ.5ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ

ಶಿವಮೊಗ್ಗ: ಅನುದಾನಿತ ಪಿಂಚಣಿ ವಂಚಿತ ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ನ.5ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೃತ್ಯುಂಜಯ ಟಿ. ಹಿರೇಮಠ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶವು ನ.5ರ ಬೆಳಿಗ್ಗೆ 10-30ಕ್ಕೆ ತೆವರಚಟ್ನಹಳ್ಳಿಯ ಪೇಸ್ ಕಾಲೇಜು ಆರವಣದಲ್ಲಿರುವ ಜಯಲಕ್ಷ್ಮಿ ಈಶ್ವರಪ್ಪ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾವೇಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದ ಮತ್ತು ಸಚಿವರು, ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಅನುದಾನಿತ ನೌಕರರ ಸಂಘದ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಉಪಸ್ಥಿತರಿರುತ್ತಾರೆ ಎಂದರು.
ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಮಸ್ಯೆಗಳನ್ನು ಬಿಚ್ಚಿಟ್ಟ ಅವರು, ಅನೇಕ ವರ್ಷಗಳಿಂದ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ಪೂರ್ವದಲ್ಲಿ ಮತ್ತು ನಂತರದಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ಪಿಂಚಣಿ ಇಲ್ಲದೆ ದುಡಿಯುತ್ತಿದ್ದಾರೆ. ಸುಮಾರು 3000 ಶಿಕ್ಷಕರು ಈಗಾಗಲೇ ಸರ್ಕಾರದಿಂದ ಬಿಡಿಗಾಸು ಪಡೆಯದೆ ನಿವೃತ್ತರಾಗಿ ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಅವರ ಕುಟುಂಬಗಳು ಬೀದಿಪಾಲಾಗಿವೆ ಎಂದು ಅಳಲು ತೋಡಿಕೊಂಡರು.
ಮಕ್ಕಳಿಗೆ ಪಾಠ ಹೇಳಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದ ಶಿಕ್ಷಕರು ಇಂದು ಕನಿಷ್ಟ ಗೌರವ ಪಡೆಯುದೆ ಪಿಂಚಣಿಯೂ ಇಲ್ಲದೆ ಸೊಪ್ಪು, ಪೇಪರ್ ಮಾರಾಟ ಮಾಡುವ ಶ್ರಮಜೀವಿಗಳಾಗಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಇರುವ ಸೌಲಭ್ಯಗಳೂ ಇವರಿಗೆ ಇಲ್ಲ. ಯಾವ ಆರೋಗ್ಯ ವಿಮೆಯೂ ಇಲ್ಲ. ಯಾವ ಸಕಾರಗಳೂ ಇವರ ಗೋಳನ್ನು ಕೇಳಲಿಲ್ಲ. ಕಳೆದ ವರ್ಷ ಫ್ರೀಡಂ ಪಾರ್ಕಿನಲ್ಲಿ 140 ದಿನಗಳ ಐತಿಹಾಸಿಕ ಹೋರಾಟ ಮಾಡಿದ್ದೆವು. ಅದರಲ್ಲಿ ಕೆಲ ಶಿಕ್ಷಕರು ತಮ್ಮ ಜೀವವನ್ನೇ ಕಳೆದುಕೊಂಡರು. ಆದರೂ ಕೂಡ ನಮ್ಮ ಗೋಳನ್ನು ಕೇಳುವವರೇ ಇಲ್ಲವಾಗಿದೆ ಎಂದರು.
ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶಿಕ್ಷಣ ಸಚಿವರಿಬ್ಬರೂ ಕೂಡ ನಮ್ಮ ಪಿಂಚಣಿ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಗೆ ಸಿಹಿ ಸುದ್ದಿ ನೀಡುವ ಭರವಸೆ ಇದೆ ಎಂದರು.
ರಾಜ್ಯ ಕಾರ್ಯದರ್ಶಿ ಎಂ.ಎಲ್. ಶಿವಕುಮಾರ್ ಮಾತನಾಡಿ, 2006ರ ಪೂರ್ವದಲ್ಲಿ ಮತ್ತು ನಂತರ ಸೇವೆ ಸಲ್ಲಿಸುತ್ತಿರುವ ನೌಕರರು ಪಿಂಚಣಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಪಿಂಚಣಿ ಬೇಡಿಕೆ ಮತ್ತು ನಿಶ್ಚಿತ ಪಿಂಚಣಿ ಅನುಷ್ಠಾನ ಮತ್ತು ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯ್ದೆ 2014ನ್ನು ರದ್ದುಗೊಳಿಸಬೇಕು. ಮತ್ತು ಎಲ್ಲರಿಗೂ ಅನ್ವಯವಾಗುವಂತೆ ಪಿಂಚಣಿ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಸುಮಾರು 4ಸಾವಿರ ಪಿಂಚಣಿರಹಿತ ಶಿಕ್ಷಕರು ಸೇರುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಸತೀಶ್ ಹಾಗೂ ಪದಾಧಿಕಾರಿಗಳಾದ ಎಂ. ರಮೇಶ್, ವಾಗೀಶ್, ಲಕ್ಷ್ಮಣ್, ಕುಮಾರಸ್ವಾಮಿ, ಮೇರಿ ಪ್ರಿಯದರ್ಶಿನಿ. ಸುರೇಶ್ ಕೆ.ಎನ್., ಜಯಪ್ರಕಾಶ್, ಅಮೂಲ್ಯ ಮಂಜುನಾಥ್ ಇದ್ದರು.

Related posts

ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿ ಸಿದ್ದತೆ ಕುರಿತು ಡಿಸಿ ಸೂಚನೆ

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಓಪನ್: ನಾಳೆಯಿಂದ ಭಕ್ತರಿಗೆ  ದರ್ಶನಕ್ಕೆ ಅವಕಾಶ.

ಏಳೇಂಟು ತಿಂಗಳು ಕಾಯಿರಿ:  ಕಾಂಗ್ರೆಸ್ ಸರ್ಕಾರ ಬೀಳುತ್ತೆ-ಕಾರ್ಯಕರ್ತರಿಗೆ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ.