ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಇಂದಿಗೂ ಪ್ರಸ್ತುತ:- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ :  ಮಹರ್ಷಿ ವಾಲ್ಮೀಕಿಯವರು ದೂರದೃಷ್ಟಿ ಉಳ್ಳವರಾಗಿದ್ದು ಅವರು ರಚಿಸಿರುವ ಮಹಾಕಾವ್ಯ ರಾಮಾಯಣ ಇಂದಿಗೂ ಪ್ರಸ್ತುತವಾಗಿದೆ ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ರಾಮನನ್ನು ಸ್ಮರಿಸುತ್ತೇವೆ. ಕೇವಲ ರಾಮ ರಾಮ ಎಂದರೆ ಸಾಲದು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ರಾಮನ ಆದರ್ಶಗಳು, ಸೀತೆಯ ತಾಳ್ಮೆ, ಭರತನ ನಂಬಿಕೆ-ವಿಶ್ವಾಸ, ಹನುಮಂತನ ಭಕ್ತಿ ಹೀಗೆ ಒಂದೊಂದು ಉತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳಬೇಕು.
ಕುಲ ಕಸುಬು ಬೇಟೆಯಾದರೂ ವಾಲ್ಮೀಕಿಯವರು ಸರ್ವಶ್ರೇಷ್ಟವಾದ ಮಹಾಕಾವ್ಯ ರಾಮಾಯಣ ರಚಿಸಿದ್ದಾರೆ. ಇಂತಹ ಪುಣ್ಯ ವ್ಯಕ್ತಿಯನ್ನು ನಾವು ಹೊಂದಿರುವುದು ನಮ್ಮ ಭಾಗ್ಯ. ರಾಷ್ಟ್ರಕವಿ ಕುವೆಂಪು ರವರು ಸಹ ವಾಲ್ಮೀಕಿಯವರಿಂದ ಸ್ಪೂರ್ತಿ ಪಡೆದಿದ್ದಾರೆ. ಅನೇಕ ಕವಿಗಳು ಅವರಿಂದ ಸ್ಪೂರ್ತಿ ಪಡೆದು ಕಾವ್ಯ ರಚಿಸಿದ್ದಾರೆ.
ರಾಮಾಯಣ ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ. ಅಲ್ಲಿ ನಾವು ಕಾಣುವ ತಾಳ್ಮೆ, ಭ್ರಾತೃತ್ವ, ಗೌರವ, ನಂಬಿಕೆ, ವಿಶ್ವಾಸ, ಭಕ್ತಿ ಹೀಗೆ ಎಲ್ಲ ಅಂಶಗಳು ನಮಗೆ ಬೇಕು. ಆ ಎಲ್ಲ ಅಂಶಗಳನ್ನು ನಾವು ಅಳವಡಿಸಿಕೊಂಡು ಸೌಹಾರ್ಧತೆ ಮತ್ತು ಶಾಂತಿಯಿಂದ ಬಾಳೋಣ. ಹೆತ್ತ ತಂದೆ-ತಾಯಿಯನ್ನು ಗೌರವದಿಂದ ನಡೆಸಿಕೊಂಡು ಪೂಜಿಸೋಣ ಎಂದು ಹೇಳಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಸ್.ಎಂ.ಮುತ್ತಯ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ವೈಯಕ್ತಿಕ ಜೀವನದ ಕುರಿತು ಹುಡುಕಾಟದ ಪ್ರಯತ್ನ ಹೆಚ್ಚಾಗಬೇಕು. ಅವರ ಜೀವನದ ಮಾಹಿತಿಗಿಂತ ರಾಮಾಯಣದ ಕುರಿತು ಹೆಚ್ಚಾಗಿ ತಿಳಿದಿದ್ದೇವೆ. ವಿದ್ಯಾರ್ಥಿಗಳು ಅವರ ಇತಿಹಾಸದ ಕುರಿತು ಹುಟುಕಾಟ ಮಾಡಬೇಕಾದ ಅಗತ್ಯವಿದೆ.

ಆಗ ವಾಲ್ಮೀಕಿಯವರ ಜೀವನದ ನಂಬಲರ್ಹವಲ್ಲದ ಕೆಲವು ಕಥೆಗಳನ್ನು ಪ್ರಶ್ನಿಸಲು ಸಾಧ್ಯವಗುತ್ತದೆ. ಈಗಾಗಲೇ ಈ ಪ್ರಶ್ನೆ ಮಾಡಲಾಗುತ್ತಿದೆ. ಇತಿಹಾಸಪೂರ್ವ ಕಾಲದ ಚರಿತ್ರೆಯಯನ್ನು ಕಾವ್ಯಗಳ ಮೂಲಕ ಕಟ್ಟಿಕೊಟ್ಟ ಇವರನ್ನು ಮೊದಲ ಇತಿಹಾಸಕಾರ ಅನ್ನಿಸಿಕೊಳ್ಳುತ್ತಾರೆ. ಇವರ ಕಾವ್ಯಗಳು ಜೀವನದ ಎಲ್ಲ ಆಯಾಮಗಳನ್ನು ಒಳಗೊಂಡಿದ್ದು, ಯುವಜನತೆ ಈ ಬಗ್ಗೆ ಆಸಕ್ತಿ ವಹಿಸಬೇಕೆಂದರು.
ಮೊದಲಿಗೆ ಹಾಡುಗಾರಿಕೆಯಿಂದ ಶುರುವಾದ ವಾಲ್ಮೀಕಿಯವರ ಕಾಯಕ ಎಲ್ಲ ಜನರಿಗೆ ಅನ್ವಯಿಸುವ ಮೌಲ್ಯಗಳನ್ನೊಳಗೊಂಡ ರಾಮಾಯಣ ಮಹಾಕಾವ್ಯ ರಚನೆವರೆಗೆ ಸಾಗಿತು. ಕೇವಲ ರಾಮಾಯಣ ಮಾತ್ರವಲ್ಲ್ಲ ಇನ್ನೂ ಹಲವು ಕೃತಿ ರಚಿಸಿದ್ದಾರೆಂದು ತಿಳಿದು ಬಂದಿದೆ ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ತೋರಿಸಿಕೊಟ್ಟಿದ್ದಾರೆ. ವಾಲ್ಮೀಕಿಯವರು ಒಂದು ಸಮಾಜಕ್ಕೆ ಮಾತ್ರ ಸೀಮಿತವಾದವರಲ್ಲ. ಅವರೊಬ್ಬ ರಾಷ್ಟ್ರಪುರುಷ. ಸರ್ವಸ್ಪರ್ಶಿ.
ಎಲ್ಲವನ್ನು ಅವಲೋಕಿಸಿದಾಗ ಸತ್ಯದ ಹೂರಣ ಹೊರಗೆ ಬರುತ್ತದೆ. ಹಾಗೆ ವಾಲ್ಮೀಕಿಯವರು ಎಲ್ಲವನ್ನು ಅವಲೋಕಿಸಿ ರಾಮಾಯಣವನ್ನು ನಮಗೆ ನೀಡಿದ್ದು ರಾಮನ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾವೆಲ್ಲ ಆದರ್ಶ ಪುರುಷರಾದಾಗ ಮಾತ್ರ ದೇಶ ಉದ್ದಾರ ಆಗುತ್ತದೆ.
ನಮ್ಮದು ಶ್ರೇಷ್ಟ ಸಾಂಸ್ಕøತಿಕ ದೇಶ. ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಿರುವ ದೇಶ. ರಾಮ ಭಜನೆ ನಮ್ಮ ಭಕ್ತಿ. ಅಯೋಧ್ಯೆಯಲ್ಲಿ ಬರುವ ಜ.22 ರಂದು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವಿದ್ದು ಇದು ಒಂದು ದೇವಸ್ಥಾನವಲ್ಲ ಬದಲಾಗಿ ರಾಷ್ಟ್ರ ಮಂದಿರ ಎಂದರು.
ಶಾಸಕರಾದ ಶಾರದಾ ಪೂರ್ಯನಾಯ್ಕ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಆದಿಕವಿಯಾಗಿದ್ದು ಎಲ್ಲ ಸಮಾಜಕ್ಕೆ ಮಾದರಿಯಾದ ಮಹಾಕಾವ್ಯ ರಾಮಾಯಣವನ್ನು ರಚಿಸಿದ್ದಾರೆ. ಮರ್ಯಾದ ಪುರಷ ರಾಮನ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳೋಣ. ಎಲ್ಲ ಮನುಷ್ಯರೂ ಒಂದೇ. ಎಲ್ಲರನ್ನು ಪ್ರೀತಿಸಿ, ಗೌರವದಿಂದ ಕಾಣಬೇಕೆಂದು ಈ ಮಹಾಕಾವ್ಯ ತೋರಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಬದುಕೋಣ ಎಂದರು.
ಬೆಳಿಗ್ಗೆ ಸೈನ್ಸ್ ಮೈದಾನದಿಂದ ಹೊರಟ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಸಂಸದರಾದ ಬಿ.ವೈ.ರಾಘವೇಂದ್ರರವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಬಹುಮಾನ ಹಾಗೂ ಅಂತರ್ಜಾತೀಯ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾನ ಧನ ವಿತರಿಸಲಾಯಿತು.
ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್,  ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಎಎಸ್‍ಪಿ ಅನಿಲ್ ಕುಮಾರ್ ಭೂಮರೆಡ್ಡಿ, ವಾಲ್ಮೀಕಿ ಸಮಾಜದ ಮುಖಂಡರಾದ ಎಸ್.ವಿ.ರಾಜು, ಲಕ್ಷ್ಮಣಪ್ಪ, ಬಿ.ಎಸ್.ನಾಗರಾಜ್, ರಾಜು, ಮಂಜಪ್ಪ ಇತರೆ ಮುಖಂಡರು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್ ಜಿ ಶ್ರೀನಿವಾಸ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು,

Related posts

ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ- ಶಾಸಕ ಅರಗ ಜ್ಞಾನೇಂದ್ರ.

ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಸಕಾಲದಲ್ಲಿ ನೇತ್ರ ತಪಾಸಣೆಯು ಅಗತ್ಯ-ವೈದ್ಯೆ ಡಾ. ವರ್ಷಾ

ವಿವಿಧ ಪಂದ್ಯಾವಳಿಗಳಲ್ಲಿ ನಿದಿಗೆ-ಬಿ.ಬೀರನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಂದ ಅತ್ಯುತ್ತಮ ಪ್ರದರ್ಶನ: ಅಭಿನಂದನೆ.