ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: ಮೂವರು ಕೇಂದ್ರ ಸಚಿವರು , 7 ಸಂಸದರು ಕಣಕ್ಕೆ.

ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದ್ದು ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಮೂವರು ಕೇಂದ್ರ ಸಚಿವರು , 7 ಸಂಸದರನ್ನ ಕಣಕ್ಕಿಳಿಸಲು ಮುಂದಾಗಿದೆ.

ವಿಧಾನಸಭಾ ಚುನಾವಣೆಗೆ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಅಧಿಕಾರಾರೂಢ ಬಿಜೆಪಿ, ಏಳು ಮಂದಿ ಸಂಸದರು ಮತ್ತು ಮೂವರು ಕೇಂದ್ರ ಸಚಿವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ 19 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಬಿಜೆಪಿ ಇದೀಗ 230 ಕ್ಷೇತ್ರಗಳ ಪೈಕಿ 78 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.  ಏಳು ಮಂದಿ ಸಂಸದರು ಮತ್ತು ವಿಜಯವರ್ಗೀಯ ಅವರನ್ನು ಕಣಕ್ಕೆ ಇಳಿಸುವ ಮೂಲಕ ಪಕ್ಷದ ಸಿಎಂ ಅಭ್ಯರ್ಥಿಯನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಪಕ್ಷ ಮಾಡುತ್ತಿದೆ ಎನ್ನುವ ಅಭಿಪ್ರಾಯವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ. ಸುಧೀರ್ಘ ಅವಧಿಗೆ ಸಿಎಂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಥವಾ ಇತರ ಯಾವುದೇ ಮುಖಂಡರನ್ನು ಸಿಎಂ ಅಭ್ಯರ್ಥಿ ಎಂದು ಪಕ್ಷ ಇದುವರೆಗೆ ಘೋಷಿಸಿಲ್ಲ.

ಮೂವರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ಥೋಮರ್ (ದಿಮಾನಿ), ಪ್ರಹ್ಲಾದ್ ಪಟೇಲ್ (ನರಸಿಂಗಪುರ) ಮತ್ತು ಫಗ್ಗಾನ್ ಸಿಂಗ್ ಕುಲಸ್ತೆ (ನಿವಾಸ್), ವಿಧಾನಸಭಾ ಚುನಾವಣೆ ಕಣಕ್ಕೆ ಧುಮುಕಲಿದ್ದಾರೆ.

ಗಣೇಶ್ ಸಿಂಗ್ (ಸಾತ್ನಾ), ರಾಕೇಶ್ ಸಿಂಗ್ (ಜಬಲ್ಪುರ), ರಿತಿ ಪಾಠಕ್ (ಸಿಧಿ) ಅವರು ಕಣದಲ್ಲಿರುವ ಸಂಸದರು. ಆರು ಬಾರಿಯ ಶಾಸಕ ಕೈಲಾಶ್ ವಿಜಯವರ್ಗೀಯ ಅವರು ಇಂಧೋರ್-1 ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದು, ಹಾಲಿ ಕಾಂಗ್ರೆಸ್ ಶಾಸಕ ಸಂಜಯ್ ಶುಕ್ಲಾ ವಿರುದ್ಧ ಸೆಣೆಸುವರು. ಹತ್ತು ವರ್ಷಗಳ ಬಳಿಕ ವಿಜಯವರ್ಗೀಯ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ.

 

Related posts

ಕನ್ನಡ ಸೇರಿ 15 ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಸರ್ಕಾರಿ ನೇಮಕಾತಿ ಪರೀಕ್ಷೆಗೆ ಅಸ್ತು..

ಸಂಪುಟ ಪುನರ್ ರಚನೆ  ಬಗ್ಗೆ ಹೈಕಮಾಂಡ್ ತೀರ್ಮಾನ – ಸಚಿವ ದಿನೇಶ್ ಗುಂಡೂರಾವ್.

ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರ ನೇತೃತ್ವದಲ್ಲಿ ನಾಳೆ ನಗರದ ಕುವೆಂಪು ರಂಗಮಂದಿರದಲ್ಲಿ ಜನತಾದರ್ಶನ….