ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಔಷಧಗಳ ಜಾಗತಿಕ ಸ್ಪರ್ಧೆಗೆ ಪೇಟೆಂಟ್ ಅತ್ಯಗತ್ಯ-ಕೆ.ಎಲ್.ಶಿವಕುಮಾರ್

ಶಿವಮೊಗ್ಗ : ಭಾರತದಲ್ಲಿ ಪ್ರತಿ ತಿಂಗಳು ಇನ್ನೂರ ಐವತ್ತಕ್ಕೂ ಹೆಚ್ಚು ಹೊಸ ಔಷಧೀಯ ಬ್ರಾಂಡ್ ಗಳು ಹೊರಬರುತ್ತಿದ್ದು ನಾವೀನ್ಯತೆ ಮತ್ತು ಪೇಟೆಂಟ್ ಇದ್ದಾಗ ಮಾತ್ರ ಜಾಗತೀಕವಾಗಿ ಸ್ಪರ್ಧೆ ನೀಡಲು ಸಾಧ್ಯ ಎಂದು ಜಗದಾಲೆ ಇಂಡಸ್ಟ್ರೀಸ್ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾದ ಕೆ.ಎಲ್.ಶಿವಕುಮಾರ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವತಿಯಿಂದ ಶನಿವಾರ ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪೇಟೆಂಟ್ ಫೈಲಿಂಗ್ ಮತ್ತು ನಾವೀನ್ಯ ಯೋಚನೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
1970 ರ ಪೇಟೆಂಟ್ ಕಾಯಿದೆಯಿಂದ ಭಾರತ ಔಷಧೀಯ ಕ್ಷೇತ್ರದಲ್ಲಿ  ಉತ್ಪನ್ನಗಳ ಸ್ವಾವಲಂಬನೆ ಪಡೆಯಿತು. ನಮ್ಮ ದೇಶದ ಔಷಧ ವಿಜ್ಞಾನಿಗಳ‌ ನಿರಂತರ ಶ್ರಮ ಈ ಸಾಧನೆಗೆ ಕಾರಣವಾಗಿದೆ. ಭಾರತದಲ್ಲಿ ಮೂರು ಸಾವಿರ ಔಷಧೀಯ ಕಂಪನಿಗಳು ಹತ್ತು ಸಾವಿರ ಕಾರ್ಖಾನೆಗಳಿವೆ. ಈ ಮೂಲಕ ಭಾರತದ ಫಾರ್ಮಸಿ ಕ್ಷೇತ್ರ ಅತ್ಯಧಿಕ ಉದ್ಯೋಗವಕಾಶ ಮತ್ತು ಸಂಶೋಧನಾ ಅವಕಾಶಗಳನ್ನು ಹೊಂದಿದೆ.
ಪದವಿ ಪಡೆದು ಕಾಲೇಜಿನಿಂದ ಹೊರಬಂದ ನಂತರ ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ. ಪ್ರತಿ ದಿನವು ಆರೋಗ್ಯ ಕ್ಷೇತ್ರ ಸವಾಲುಗಳನ್ನು ಎದರಿಸುತ್ತಿದೆ. ಅಂತಹ ಸವಾಲುಗಳಿಗೆ ನಾವೀನ್ಯತೆಯ ಪರಿಹಾರ ನೀಡಬೇಕಾಗಿದೆ. ಅಂತಹ ನಾವೀನ್ಯಯುತ ಚಿಂತನೆಗಳು ನಿಮ್ಮದಾಗಲಿ. ರೋಗಗಳ ನಿವಾರಣೆ ಮತ್ತು ಆರೈಕೆಯಲ್ಲಿ ಫಾರ್ಮಸಿಯ ನಾವೀನ್ಯಯುತ ಯೋಜನೆಗಳ ಅವಶ್ಯಕತೆಯ ಅರಿವು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭಾರತ್ ಬಯೊಟೆಕ್ ಕಂಪನಿ ಇಂದಿಗೂ ಕೋವಿಡ್ ವಿರುದ್ಧ ಹೋರಾಟ ಮಾಡುವ ವ್ಯಾಕ್ಸಿನ್ ಗಳಿಗೆ ಪೇಟೆಂಟ್ ಪಡೆದಿಲ್ಲ. ಮಾನವೀಯತೆಯ ದೃಷ್ಟಿಯಿಂದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಪೇಟೆಂಟ್ ಫೈಲಿಂಗ್ ಮಾಡದಂತೆ ತೀರ್ಮಾನಿಸಿದ್ದರು. ಈ‌ ಮೂಲಕ ಲಾಭ ನಷ್ಟಗಳ ಲೆಕ್ಕಚಾರವಿಲ್ಲದೆ ಯಾವುದೇ ಕಂಪನಿಗಳು ಮುಕ್ತವಾಗಿ ಉತ್ಪಾದಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಫಾರ್ಮಸಿ ಮತ್ತು ತಾಂತ್ರಿಕತೆ ಒಟ್ಟಾಗಿ ಸಂಶೋಧನೆಗಳನ್ನು ನಡೆಸಲು ಅನೇಕ ಅವಕಾಶಗಳಿವೆ. ಕಾಲೇಜುಗಳ ಸಂಶೋಧನಾ ಪ್ರಯೋಗಾಲಯಗಳು ಸಮಯದ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸಬೇಕಾಗಿದ್ದು, ಸೀಮಿತತೆಯಿಂದ ಹೊರಬಂದು ವಿದ್ಯಾರ್ಥಿಗಳು ಸಂಶೋಧನಾ ಪ್ರಯೋಗಗಳಲ್ಲಿ ಮುನ್ನಡೆಯಿರಿ.
ಸ್ಟಾನ್ಫಾರ್ಡ್ ವಿಶ್ವವಿದ್ಯಾಲಯದ ಮನು ಪ್ರಕಾಶ್ ಎಂಬ ಸಹ ಪ್ರಾಧ್ಯಾಪಕ ಪ್ರಪಂಚದಾದ್ಯಂತ ಮಕ್ಕಳಿಗೆ ವೈಜ್ಞಾನಿಕ ಆವಿಷ್ಕಾರದ ಶಕ್ತಿ ಮತ್ತು ಕುತೂಹಲ ತರಲು ಕಾಗದದಿಂದ ಮಾಡಿದ ಸೂಕ್ಷ್ಮದರ್ಶಕವಾದ ಫೋಲ್ಡ್‌ಸ್ಕೋಪ್‌ ನಂತಹ ಅಗ್ಗದ ವಿಜ್ಞಾನ ಸಾಧನಗಳನ್ನು ಕಂಡುಹಿಡಿದಿದ್ದಾರೆ. ಇಂತಹ ಸಾಧನಗಳ ಬಳಕೆ ಮತ್ತು ನಿರ್ಮಾಣ ಕಾರ್ಯ ಫಾರ್ಮಸಿ ವಿದ್ಯಾರ್ಥಿಗಳಿಂದ ಹೆಚ್ಚಾಗಲಿ ಎಂದು ಹೇಳಿದರು.
ಜಗದಾಲೆ ಇಂಡಸ್ಟ್ರೀಸ್ ನಿಯಂತ್ರಕ ವ್ಯವಹಾರಗಳ ಸಹಾಯಕ ವ್ಯವಸ್ಥಾಪಕರಾದ ಲತಾ.ಸಿ.ವಿ ಮಾತನಾಡಿದರು. ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಸಂಶೋಧನೆ ಕೇಂದ್ರದ ಸಂಯೋಜಕರಾದ ಕೆ.ಎಲ್.ಅರುಣ್ ಕುಮಾರ್, ಸಿ.ಎಂ.ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ವಿಜಯದಶಮಿಯ ಬನ್ನಿ ಮುಡಿಯುವ ಕಾರ್ಯಕ್ರಮ: ವೇದಿಕೆ ನಿರ್ಮಾಣಕ್ಕೆ ಗುದ್ದಲಿಪೂಜೆ..

ಅವಕಾಶಗಳು ಲಭಿಸಿದರೆ ಯುವಜನತೆ ಉತ್ತಮ ಸಾಧನೆ ಮಾಡುತ್ತಾರೆ: ಸಚಿವ ಮಧು ಬಂಗಾರಪ್ಪ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವ  ಸರ್ಕಾರದ ನಡೆಗೆ ಮಾಜಿ ಸಚಿವ ಸಿಟಿ ರವಿ ಖಂಡನೆ.