ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕನ್ನಡ ರಾಜ್ಯೋತ್ಸವ: ಕನ್ನಡದ 5 ಗೀತೆಗಳ ಗಾಯನ ಕಡ್ಡಾಯ.

ಬೆಂಗಳೂರು: ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಡೀ ವರ್ಷದ ಕನ್ನಡ ಸಂಭ್ರಮ ಆಚರಣೆಗೆ ಸರ್ಕಾರ ಮುಂದಾಗಿದ್ದು, ಈ ಶುಭ ಸಂದರ್ಭದಲ್ಲಿ ಐದು ಕನ್ನಡಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಸಂಭ್ರಮ-50ರ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ನವೆಂಬರ್ 1ರಂದು ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಮತ್ತು ಗ್ರಾಮಪಂಚಾಯಿತಿ ಮಟ್ಟದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿರುವಂತೆ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಳಗೋಳ ನಾರಾಯಣ ರಾಯರು), ಎಲ್ಲಾದರೂ ಇರು ಎಂತಾದರು ಇರು (ಕುವೆಂಪು), ಒಂದೇ ಒಂದೇ ಕರ್ನಾಟಕ ಒಂದೇ ( ದ. ರಾ. ಬೇಂದ್ರೆ), ಹೊತ್ತಿತೋ ಹೊತ್ತಿತು ಕನ್ನಡ ದೀಪ ( ಸಿದ್ದಯ್ಯ ಪುರಾಣಿಕ) ಮತ್ತು ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ (ಚನ್ನವೀರ ಕಣವಿ) ಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಆದೇಶದಲ್ಲಿ ಹೇಳಿದೆ.

 

Related posts

ಸೆ.11 ರಂದು ಖಾಸಗಿ ಸಾರಿಗೆ ಮುಷ್ಕರ: ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ- ಸಚಿವ ರಾಮಲಿಂಗರೆಡ್ಡಿ ಸೂಚನೆ.

ಉದ್ಯೋಗಿಗಳ ಯೋಗಕ್ಷೇಮ: ವಿಶ್ವದಲ್ಲೇ ಭಾರತಕ್ಕೆ 2ನೇ ಸ್ಥಾನ.

ಜಿ ಎಮ್‍ನಲ್ಲಿ ಶಿಕ್ಷಕರಿಗೆ ‘ಸಾಮರ್ಥ್ಯ ಅಭಿವೃದ್ಧಿ’ ತರಬೇತಿ ಕಾರ್ಯಾಗಾರ