ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಸೆ.26ರಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ.

ಶಿವಮೊಗ್ಗ: ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ಎಂ. ಶ್ರೀಕಾಂತ್ ಸೆ. 26 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ಈ ಕುರಿತು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ. ಶ್ರೀಕಾಂತ್, ಕಾಂಗ್ರೆಸ್ ಸೇರಬೇಕು ಎನ್ನುವುದು ವರ್ಷಗಳಿಂದ ಇದ್ದ ಬಯಕೆಯಾಗಿತ್ತು. ಈಗ ಅದು ಕೂಡಿ ಬಂದಿದೆ. ಇದು ನನ್ನೊಬ್ಬನ ತೀರ್ಮಾನ ಅಲ್ಲ, ನನಗೋಸ್ಕರವೂ ಅಲ್ಲ. ಬೆಂಬಲಿಗರ ಮತ್ತು ಜೆಡಿಎಸ್ ಕಾರ್ಯಕರ್ತರ ಇಷ್ಟದಂತೆ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬೇಷರತ್ತಾಗಿ ಸೇರುತ್ತಿದ್ದೇನೆ. ಪಕ್ಷ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಶಾಸಕರಾದ ಬಿ.ಕೆ. ಸಂಗಮೇಶ್, ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಆರ್.ಎಂ. ಮಂಜುನಾಥ ಗೌಡ ಮೊದಲಾದವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂದರು.
ನಾನು ಕಳೆದ 22 ವರ್ಷಗಳಿಂದ ಜೆಡಿಎಸ್ ನಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಹಲವು ಹುದ್ದೆಗಳನ್ನು ನೀಡಿತ್ತು. ವರಿಷ್ಠರಾದ ಹೆಚ್.ಡಿ. ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಅವರ ರಾಜಕೀಯ ಋಣವನ್ನು ನಾನೆಂದೂ ಮರೆಯಲಾರೆ. ಕಾಂಗ್ರೆಸ್ ಸೇರುವ ಮುನ್ನ ಅವರಿಗೆ ನನ್ನ ಪ್ರೀತಿಯ ಕೃತಜ್ಞತೆಗಳು ಎಂದರು.
ಕೆಲವು ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಸೇರಬೇಕಾಗಿ ಬಂದಿದೆ. ಈ ಹಿಂದೆ ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ತುಂಬಾ ಕಡಿಮೆ ಮತಗಳು ಬಂದಿದ್ದವು. ಎರಡನೇ ಬಾರಿ ಸ್ಪರ್ಧಿಸಿದಾಗಲೂ ಅಷ್ಟೇ. ಆಗಲೇ ಕಾಂಗ್ರೆಸ್ ಗೆ ಸೇರಬೇಕು ಎಂದುಕೊಂಡಿದ್ದೆ. ಆದರೆ, 2023 ರ ವಿಧಾನಸಭೆ ಚುನಾವಣೆ ನನ್ನ ಮುಂದಿತ್ತು. ಅಂತಹ ಸಂದರ್ಭದಲ್ಲಿ ಒಂದು ಪಕ್ಷವನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ಪಕ್ಷಕ್ಕಾಗಿ ದುಡಿದೆ. ಚುನಾವಣೆ ಮುಗಿದಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಇದರಿಂದ ನನ್ನನ್ನೇ ನಂಬಿಕೊಂಡು ಬಂದ ಅನೇಕರಿಗೆ ಸಹಾಯವಾಗುತ್ತದೆ ಎಂದುಕೊಂಡಿದ್ದೇನೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾನು ಮತ್ತು ನನ್ನ ತಂಡ ಕೆಲಸ ಮಾಡುತ್ತೇವೆ ಎಂದರು.
ಚುನಾವಣೆಗಳಲ್ಲಿ ಸೋತ ಮುಜುಗರ, ಮುಂದಿನ ರಾಜಕೀಯ ಭವಿಷ್ಯ ಈ ಎಲ್ಲಾ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಿರುವೆ. ನನಗಾಗಿ ಅಲ್ಲ, ಆದರೂ ಶಿವಮೊಗ್ಗ ಕ್ಷೇತ್ರದಲ್ಲಿಯೇ ನನ್ನ ರಾಜಕೀಯ ಜೀವನ ಮುಂದುವರೆಯುತ್ತದೆ ಎಂದರು.
ಶ್ರೀಕಾಂತ್ ಅವರೊಂದಿಗೆ ಜೆಡಿಎಸ್ ಪಕ್ಷದ ಹಲವರು ಕಾಂಗ್ರೆಸ್ ಸೇರಲಿದ್ದಾರೆ. ಮಹಾನಗರ ಪಾಲಿಕೆಯ ಹಾಲಿ, ಮಾಜಿ ಸದಸ್ಯರು, ಜಿಲ್ಲಾ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ.
ಪ್ರಮುಖವಾಗಿ ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ, ರಾಜಣ್ಣ ಗಾಡಿಕೊಪ್ಪ, ಎಸ್.ಎನ್. ಮಹೇಶ್, ಭಾಸ್ಕರ್, ಆನಂದ್, ಶಿವಪ್ಪ, ಮೋಹನ್, ರವಿ, ರೆಹಮಾನ್, ಜಾವಿದ್, ಶಾಮು, ಬಸವರಾಜ್, ಸೂಲಯ್ಯ, ದಿವಾಕರ್, ವಕೀಲ ಉಮೇಶ್, ಮಂಜುನಾಥ ನವಿಲೆ, ಸಂತೋಷ್, ಅನಿಲ್ ಕುಮಾರ್, ಶಾಮು, ಮೇಘರಾಜ್ ಹಲವು ಕಾಂಗ್ರೆಸ್ ಸೇರಲಿದ್ದು, ಇಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಕೇಸ್ ತಡೆಗೆ ‘ಆರೋಗ್ಯ ಕವಚ ಯಂತ್ರ’ ಸ್ಥಾಪನೆ..!

ಶಾಲಾ ವಿದ್ಯಾರ್ಥಿಗಳನ್ನ ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ನಡೆಸಿಕೊಳ್ಳುವುದು ತಪ್ಪು – ಸುಪ್ರೀಂ ಕೋರ್ಟ್.

ನಾಳೆ ಕರ್ನಾಟಕ ಬಂದ್ : ಸಾರಿಗೆ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಲು ಸೂಚನೆ.