ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಜನತಾದರ್ಶನ ಕಾರ್ಯಕ್ರಮ : ಸಚಿವ ಕೆ.ಜೆ. ಜಾರ್ಜ್

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಜನತಾದರ್ಶನ ಕಾರ್ಯಕ್ರಮವನ್ನು ನಡೆಸಿ ಜನರ ಸಮಸ್ಯೆಗಳನ್ನು ಖುದ್ದು ಆಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನರಸಿಂಹರಾಜಪುರ ತಾಲ್ಲೂಕಿನ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

          ಮುಖ್ಯಮಂತ್ರಿಗಳ ಆದೇಶದ ಪ್ರಕಾರ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಜನತಾದರ್ಶನ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ಜನತಾದರ್ಶನದ ವೇಳೆ ಕಂಡು ಬಂದ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು ಕ್ಲಿಷ್ಟಕರವಾದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

 ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಮತ್ತು ತಾವು ಸದಾ  ಜನರೊಂದಿಗೆ ಇದ್ದು  ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

 ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನ ಸೇವಕರು ಎಂದ ಅವರು ಅಧಿಕಾರಿಗಳು ಇದನ್ನು ಅರಿತು ಜನ ಸ್ನೇಹಿಯಾಗಿ ಕೆಲಸ ಮಾಡಬೇಕು ಅವರ ಸಮಸ್ಯೆಗಳು ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು ಎಂದು  ಸೂಚಿಸಿದರು.
ಜಿಲ್ಲೆ ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಹೆಚ್ಚಿನ ಸಮಸ್ಯೆಗಳಿದ್ದು ಅಧಿಕಾರಿಗಳು ವಾರಕ್ಕೊಂದು ದಿನವಾದರೂ ಸ್ಥಳಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸಬೇಕು, ಆಗ ಶೇಕಡ 90ರಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನಸೇವೆ ಮಾಡಿದರೆ ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ತಮ್ಮ ಕ್ಷೇತ್ರದ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿರುವ ಕಾಡಾನೆ, ಕಾಡು ಪ್ರಾಣಿಗಳ ನಿಯಂತ್ರಣ ಮಾಡಬೇಕು. ಕಾಡಾನೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಬ್ಯಾರಿ ಕೇಡ್ ನಿರ್ಮಾಣ ಮಾಡಬೇಕು ಅಥವಾ ತಾತ್ಕಾಲಿಕ ಫೆನ್ಸಿಂಗ್ ಅಳವಡಿಸಬೇಕು, ಆನೆ ಕಾರ್ಯಪಡೆಯನ್ನು ರಚಿಸಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

 ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿದ್ದ ಒಕ್ಕಲೆಬ್ಬೆಸಿರುವ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಬೇಕು. ಅಲ್ಲಿಂದ ತೆರುವುಗೊಳಿಸುವವರಿಗೆ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಮೀಸಲು ಅರಣ್ಯವನ್ನು ಅವೈಜ್ಞಾನಿಕವಾಗಿ ಸರ್ವೆ ಮಾಡಲಾಗಿದ್ದು ಮರು ಜಂಟಿ ಸರ್ವೆ ಮಾಡಬೇಕು ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು ಜನರ ಬದುಕನ್ನು ಕಿತ್ತುಕೊಳ್ಳಬಾರದು ಎನ್ ಆರ್ ಪುರ ತಾಲ್ಲೂಕಿನಲ್ಲಿ ಏತ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

 ತಮ್ಮ ಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

  ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ಮುಖ್ಯವಾಗಿ ಡಿ ನೋಟಿಫಿಕೇಷನ್, ಹಾಗೂ ಪಕ್ಕಾ ಪೋಡಿ ಮಾಡುವ ಬಗ್ಗೆ ಡೀಮ್ಡ್ ಫಾರೆಸ್ಟ್ ಬಗ್ಗೆ, ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದವು. ಡೀಮ್ಡ್ ಫಾರೆಸ್ಟ್ ಮತ್ತು ಫಾರೆಸ್ಟ್ ಯಾವುದು ಎಂದು ಗುರುತಿಸಲು ಈಗಾಗಲೇ ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಜಂಟಿ ಸರ್ವೆ ಆಗುವ ತನಕ ಯಾರಿಗೂ ತೊಂದರೆ ನೀಡಬಾರದೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

          ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಇಂಧನ ಹಾಗೂ ಚಿಕ್ಕಮಗಳೂರು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್ ಡಿ.ಎಂ. ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Related posts

ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ ಸ್ಯಾಂಡಲ್ ವುಡ್ : ನಟ ಶಿವಣ್ಣ ನೇತೃತ್ವದಲ್ಲಿ ಧರಣಿ:  ಹಿರಿಯ ಕಿರಿಯ ಕಲಾವಿದರು ಭಾಗಿ.

ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿ ಶಿಫಾರಸ್ಸಿಗೆ ಸರ್ಕಾರ ಒಪ್ಪಿಗೆ

ನ.08 ರಂದು ಕಸಾಪ ವತಿಯಿಂದ ದತ್ತಿ ಉಪನ್ಯಾಸ.