ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

3 ವರ್ಷದೊಳಗಿನ ಮಕ್ಕಳನ್ನ ಶಾಲೆಗೆ ಹೋಗುವಂತೆ ಒತ್ತಾಯಿಸುವುದು ಕಾನೂನು ಬಾಹಿರ.

ಅಹಮದಾಬಾದ್:  ಮೂರು ವರ್ಷದೊಳಗಿನ ಮಕ್ಕಳನ್ನ ಶಾಲೆಗೆ ಹೋಗುವಂತೆ ಒತ್ತಾಯಿಸುವುದು ಕಾನೂನು ಬಾಹಿರ ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2023-24) ಶಾಲೆಗಳು ಒಂದನೇ ತರಗತಿಗೆ ಆರು ವರ್ಷದ ಕೆಳಗಿನ ಮಕ್ಕಳನ್ನು ಸೇರ್ಪಡೆಗೊಳಿಸದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ವಿಚಾರಣೆ ನಡೆಸಿದ  ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಹಾಗೂ ನ್ಯಾಯಮೂರ್ತಿ ಎನ್ .ವಿ.ಅಂಜಿಯಾ ಅವರನ್ನೊಳಗೊಂಡ ಪೀಠ,  ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ ಟಿಇ ಕಾಯ್ದೆ) ಹಾಗೂ ಭಾರತೀಯ ಸಂವಿಧಾನದ ಅನುಚ್ಛೇದ 21ಎ ಅಡಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ಮಗುವಿಗೆ ಆರು ವರ್ಷಗಳು ತುಂಬಿದ ಬಳಿಕವಷ್ಟೇ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ. ಆರ್ ಟಿಇ ಕಾಯ್ದೆಯ ವಿವಿಧ ನಿಬಂಧನೆಗಳು ಕೂಡ ಆರು ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಮಗುವು ಯಾವುದೇ ಕಾರಣಕ್ಕೂ ಶಾಲಾ ಶಿಕ್ಷಣದಿಂದ ವಂಚಿತವಾಗಬಾರದು ಹಾಗೂ ಇಂಥ ಮಗು ತನ್ನ ಪ್ರಾಥಮಿಕ ಶಿಕ್ಷಣವನ್ನು ಯಾವುದೇ ಸಮಸ್ಯೆಗಳಿಲ್ಲದೆ ಪೂರ್ಣಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ನಿರ್ದೇಶಿಸಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅಲ್ಲದೆ, ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಶಾಲೆಗೆ ಕಳುಹಿಸೋದು ಹೆತ್ತವರ ಕಾನೂನುಬಾಹಿರ ಕ್ರಮ ಕೂಡ ಆಗಿದೆ ಎಂದು ತಿಳಿಸಿದೆ.

ತಮ್ಮ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಒಂದನೇ ತರಗತಿಗೆ ತಮ್ಮ ಮಕ್ಕಳನ್ನು ಆರು ವರ್ಷಕ್ಕಿಂತ ಮೊದಲೇ ಸೇರ್ಪಡೆಗೊಳಿಸಲು ಅವಕಾಶ ನೀಡುವಂತೆ ಕೋರಿ ಹಲವು ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಸಂಬಂಧಪಟ್ಟ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಮಗುವಿಗೆ ಆರು ವರ್ಷ ತುಂಬದಿದ್ದರೆ ಅಂಥ ಮಗುವಿಗೆ ಪ್ರೀ-ಸ್ಕೂಲ್ ಗೆ ಪ್ರವೇಶ ನೀಡೋದನ್ನು ಆರ್ ಟಿಇ ಕಾಯ್ದೆ ನಿರ್ಬಂಧಿಸಿದೆ ಎಂಬ ಅಂಶವನ್ನು ಕೋರ್ಟ್ ಎತ್ತಿ ಹಿಡಿದಿದೆ.

‘ಪ್ರೀ-ಸ್ಕೂಲ್ ನಲ್ಲಿ ಮೂರು ವರ್ಷಗಳ ಆರಂಭಿಕ ಬಾಲ್ಯದ ಕಾಳಜಿ ಆಗೂ ಶಿಕ್ಷಣ ಒಂದು ಮಗುವನ್ನು ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲು ಸಿದ್ಧಪಡಿಸುತ್ತದೆ. ನಮ್ಮ ಮುಂದಿರುವ ಮಕ್ಕಳನ್ನು ಅವರ ಪೋಷಕರು ಆರ್ ಟಿಇ ಯಲ್ಲಿ ಪ್ರಿ-ಸ್ಕೂಲ್ ಪ್ರವೇಶಕ್ಕೆ ನಿಗದಿಪಡಿಸಿರುವ ಕನಿಷ್ಠ ವಯಸ್ಸಾದ ಮೂರು ವರ್ಷಗಳು ಪೂರ್ಣಗೊಳ್ಳುವ ಮುನ್ನವೇ ದಾಖಲಿಸಿದ್ದಾರೆ’ ಎಂಬುದನ್ನು ಗಮನಿಸಿರುವುದಾಗಿ ಪೀಠ ತಿಳಿಸಿದೆ. ಹೀಗಾಗಿ ಅರ್ಜಿದಾರರು ಕೋರ್ಟ್ ಮುಂದೆ ಯಾವುದೇ ಕನಿಕರ ಅಥವಾ ನೆರವು ಕೋರುವಂತಿಲ್ಲ. ಏಕೆಂದರೆ ಅವರು ಆರ್ ಟಿಇ ಕಾಯ್ದೆ 2009 ಹಾಗೂ ಆರ್ ಟಿಇ ನಿಯಮಗಳು 2012 ಅನ್ನು ಉಲ್ಲಂಘಿಸಿದ್ದಾರೆ.

‘ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಶಾಲೆಗೆ ಹೋಗುವಂತೆ ಬಲವಂತಪಡಿಸೋದು ಹೆತ್ತವರ ಕಾನೂನುಬಾಹಿರ ನಡವಳಿಕೆಯಾಗಿದೆ. ಮೂರು ವರ್ಷ ತುಂಬಿದ ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗಿದ್ದು, ಪ್ರೀ-ಸ್ಕೂಲ್ ಗೆ 2020-21ನೇ ಸಾಲಿನಲ್ಲಿ ಸೇರಿಸಿದ್ದರೆ ಅದು ಸರಿಯಾಗಿರುತ್ತಿತ್ತು. ಹೀಗಾಗಿ ಹೆತ್ತವರು ಮಂಡಿಸಿರುವ ವಾದ ನಮ್ಮನ್ನು ಪ್ರಭಾವಿಸಿಲ್ಲ ಎಂದು ಕೋರ್ಟ್ ಹೇಳಿದೆ. ಈ ವರ್ಷದ ಜೂನ್ 1ರಿಂದ ಜಾರಿಗೆ ಬರುವಂತೆ 2020 ಜನವರಿ 31 ಹಾಗೂ 2020 ಆಗಸ್ಟ್ 4ರಂದು ಹೊರಡಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆಗಳನ್ನು ಪ್ರಶ್ನಿಸಿ ಪೋಷಕರು ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ವಿಚಾರಣೆ ನಡೆಸಿದೆ.

 

Related posts

1ನೇ ವಾರ್ಡ್‍ನಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆ: ಕೂಡಲೇ ಕ್ರಮಕ್ಕೆ ಆಗ್ರಹ.

ಕುವೆಂಪು ವಿವಿಯ ಪದವಿ ಕೊನೆ ಸೆಮಿಸ್ಟಾರ್ ಪರೀಕ್ಷೆ ಮುಂದೂಡಿಕೆಗೆ ಆಗ್ರಹ.

ಎನ್ಇಎಸ್‌ ಸಂಸ್ಥೆಗೆ ಟಾಟಾ ಗ್ರೀನ್‌ ಚಾಂಪಿಯನ್‌ ಪ್ರಶಸ್ತಿ