ಕನ್ನಡಿಗರ ಪ್ರಜಾನುಡಿ
ಕ್ರೀಡೆಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನ.17ರಿಂದ 25ರವರೆಗೆ ಅಂತರರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ

ಶಿವಮೊಗ್ಗ: 15 ವರ್ಷ ವಯೋಮಿತಿಯ ಅಂತರರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ನ.17ರಿಂದ 25ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‍ಸಿಎ ಕ್ರೀಡಾಂಗಣ ಹಾಗೂ ಜೆಎನ್‍ಎನ್‍ಸಿಇಯ ಟರ್ಫ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ವಲಯ ಸಂಚಾಲಕ ಹೆಚ್.ಎಸ್. ಸದಾನಂದ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಅಂತರರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ದೇಶದ 6 ಕಡೆಯಲ್ಲಿ ಆಯೋಜಿಸಿದೆ ಎಂದರು.
ಒಟ್ಟಾರೆ ರಾಷ್ಟ್ರದ ವಿವಿಧ ರಾಜ್ಯಗಳ 36 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈ 36 ತಂಡಗಳನ್ನು ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ಎಫ್‍ಗುಂಪಿನ 6 ತಂಡಗಳು ಶಿವಮೊಗ್ಗದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ ಎಂದರು.
ಎಫ್ ಗುಂಪಿನಲ್ಲಿ ಬರೋಡಾ, ಹಿಮಾಚಲ ಪ್ರದೇಶ, ಮಣಿಪುರ, ಪಾಂಡುಚೆರಿ, ಪಂಜಾಬ್ ಹಾಗೂ ಉತ್ತರ ಪ್ರದೇಶ ತಂಡಗಳಿವೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ಇ- ಗುಂಪಿನಲ್ಲಿ ಆಡುತ್ತಿದ್ದು, ದೆಹಲಿ, ಅಸ್ಸಾಂ, ಜಾರ್ಖಂಡ್, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯ ತಂಡಗಳು ಇ-ಗುಂಪಿನಲ್ಲಿವೆ ಎಂದರು.
ಪ್ರತಿದಿನ ಮೂರು ಪಂದ್ಯಗಳಂತೆ ಒಟ್ಟು 15 ಪಂದ್ಯಗಳು ನಡೆಯಲಿವೆ. ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಒಂದು ದಿನ ವಿಶ್ರಾಂತಿ ಇರುತ್ತದೆ. ಈ ಪಂದ್ಯವು ಬಿಳಿ ಬಣ್ಣದ ಬಾಲ್‍ನಲ್ಲಿ ಆಡಲಿದ್ದು, ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್‍ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ. ಪ್ರತಿದಿನ ಪಂದ್ಯ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ ಎಂದರು.
ಈ ಪಂದ್ಯಾವಳಿಗಳು ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯವೀಕ್ಷಕರ ನೇತೃತ್ವದಲ್ಲಿ ನಡೆಯಲಿದ್ದು, ವೀಕ್ಷಣೆಗೆ ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಆಗಮಿಸಲಿದ್ದಾರೆ ಎಂದ ಅವರು, ಕಳೆದ ಬಾರಿಯೂ ಈ ಪಂದ್ಯಾವಳಿಯು ಶಿವಮೊಗ್ಗದಲ್ಲಿ ಈ ಬಾರಿಯ ಪಂದ್ಯಾವಳಿಗೆ ಶಿವಮೊಗ್ಗ ವಲಯವು ಸರ್ವಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ನ.17ರಂದು ಆರಂಭವಾಗುವ ಮೊದಲ ಪಂದ್ಯಾವಳಿಯನ್ನು ನವುಲೆಯ ಕೆಎಸ್‍ಸಿಎ ಕ್ರೀಡಾಂಗಣದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಮಾಜಿ ಆಟಗಾರ ಎ.ರಘುರಾಮ್ ಭಟ್ ಹಾಗೂ ಇದೇ ಸಂದರ್ಭದಲ್ಲಿ ಜೆಎನ್‍ಎನ್‍ಸಿಇನ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು ಎನ್‍ಇಎಸ್ ಸಂಸ್ಥೆ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಉದ್ಘಾಟಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ವಲಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಾಜೇಂದ್ರ ಕಾಮತ್, ಐಡಿಯಲ್ ಗೋಪಿ, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

 

Related posts

ಗೆಲ್ಲಲೇಬೇಕು, ಸೋತಾಗ ನಾಳೆ ಗೆಲುವು ಸಿಗುತ್ತೆ-ಕ್ರೀಡಾಕೂಟದಲ್ಲಿ ಶಾಸಕ ಚನ್ನಬಸಪ್ಪ ಇಂಗಿತ

ಅಸಂಖ್ಯಾತ ರಾಷ್ಟ್ರ ಭಕ್ತರ ಹೋರಾಟದಿಂದ ದೇಶ ಸ್ವಾತಂತ್ರ್ಯ- ಸಿ.ಮಂಜುನಾಥ್

ಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧ ವಿಲ್ಲ; ಈಡಿಗ ಸಂಘ ಸ್ಪಷ್ಟನೆ.