ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೈಬರ್ ಅಪರಾಧಗಳಿಗೆ ವಿದ್ಯಾವಂತರೇ ಬಲಿಪಶು-ಇನ್‍ಸ್ಪೆಕ್ಟರ್ ದೀಪಕ್ ಕಳವಳ 

ಶಿವಮೊಗ್ಗ: ಪ್ರಸ್ತುತ ಸಂದರ್ಭದಲ್ಲಿ ಡಿಜಿಟಲ್ ಅಪರಾಧಗಳು ಹೆಚ್ಚಳಗೊಂಡಿದ್ದು, ಅಂತಹ ಪ್ರಕರಣಗಳಲ್ಲಿ ಮಹಿಳೆಯರು ಹಾಗೂ ಯುವತಿಯರು ಹೆಚ್ಚು ಗುರಿಯಾಗುತ್ತಿರುವ ಸಂಗತಿ ಆತಂಕಕಾರಿಯಾಗಿದೆ ಎಂದು ಸಿಎನ್‍ಎನ್ ಠಾಣೆಯ ಇನ್‍ಸ್ಪೆಕ್ಟರ್ ದೀಪಕ್ ಕಳವಳ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಹಾಗೂ ಕಮಲ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ “ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೈಬರ್ ಅಪರಾಧಗಳು ದಿನಕ್ಕೊಂದು ರೂಪ ಪಡೆಯುತ್ತಿವೆ. ಅಪರಾಧ ವ್ಯಕ್ತಿ ಗುರಿಯಾಗಿಸಿ ಮಾಡುವುದಕ್ಕಿಂತ ಸಮಾಜವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವುದರಿಂದ ಇಂತಹ ಪ್ರಕರಣಗಳನ್ನು ಬೇಧಿಸುವುದು ಇಂದಿನ ತುರ್ತ ಅಗತ್ಯವಾಗಿದೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳ ಹಿಂದೆ ಇಂತಹ ಅಪರಾಧ ಪ್ರಕರಣಗಳು ಅಪರೂಪವಾಗಿದ್ದವು. ಆಗ ಸೈಬರ್ ಕ್ರೈಮ್‍ಗೆ ಹೆಚ್ಚಿನ ಅರಿವು ಇರಲಿಲ್ಲ. ಆದರೆ, ಈಗ ಸಮಾಜದಲ್ಲಿ ಎಲ್ಲೂರು ಮೊಬೈಲ್‍ಗಳ ಮೇಲೆಯೇ ತಮ್ಮ ಕಾರ್ಯನಿರ್ವಹಣೆ ಅವಲಂಬನೆಯಾಗಿರುವುದರಿಂದ ಸೈಬರ್ ಕಳ್ಳರು ಅದನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಠಾಣೆಗೆ ಇಂತಹ ಅಪರಾಧ ಪ್ರಕರಣಗಳನ್ನು ದಾಖಲಿಸಲು ಹೆಚ್ಚು ಹೆಚ್ಚು ಜನರು ಬರುತ್ತಿದ್ದಾರೆ. ಅದರಲ್ಲೂ ವಿದ್ಯಾವಂತರೇ ಇಂದು ಸೈಬರ್ ಅಪರಾಧಗಳಿಗೆ ಬಲಿಪಶುಗಳಾಗುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಡಿಜಿಟಲ್ ವ್ಯವಸ್ಥೆ ಹಾಗೂ ಮೊಬೈಲ್ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರುವ ಯುವ ಸಮೂಹ ಸೈಬರ್ ಕಳ್ಳರಿಗೆ ಸುಲಭದ ತುತ್ತಾಗುತ್ತಿದ್ದಾರೆ. ಇದು ಮುಂದಿನ ದಿನಗಳ ಎಚ್ಚರಿಕೆ ಗಂಟೆಯಾಗಿದ್ದು, ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಮೊಬೈಲ್ ಮೂಲಕ ಸುಲಭವಾಗಿ ಜನರನ್ನು ಗುರಿ ಮಾಡಬಹುದು ಎಂಬ ಅಂಶ ಸೈಬರ್ ಕಳ್ಳರಿಗೆ ಗೊತ್ತಾಗಿದೆ. ಈಗಿನ ದಿನಗಳಲ್ಲಿ ಮನೆಗಳ್ಳತನಕ್ಕಿಂತ ಸುಲಭವಾಗಿ ಸೈಬರ್ ಕಳ್ಳರು ಹಣ ಮಾಡಲು ಮುಂದಾಗುತ್ತಿದ್ದಾರೆ. ಮಾತಿನ ಮೂಲಕ ಜನರನ್ನು ಮರಳು ಮಾಡಿ ಅವರಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅನಂತರದಲ್ಲಿ ಅವರನ್ನೇ ಬಲಿಪಶು ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದ್ದರಿಂದ ಯಾವುದೇ ಸೈಬರ್ ಅಪರಾಧ ಸಂಭವಿಸಿದೆ ಎಂದು ಗೊತ್ತಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ವ್ಯಾಟ್ಸ್‍ಪ್ ಮೂಲಕ ಬರುವ ಕರೆಗಳ ಬಗ್ಗೆ ಎಚ್ಚರಿಕೆ ಇರುವಂತೆ ವಿದ್ಯಾರ್ಥಿನಿಯರಿಗೆ ಮನವಿ ಮಾಡಿದ ಅವರು, ಯಾವುದೇ ವ್ಯಕ್ತಿಯೊಂದಿಗೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವ ಮುನ್ನ ಹಲವು ಬಾರಿ ಯೋಚನೆ ಮಾಡಿ, ಮುಂದೊಂದು ದಿನ ಅದು ದುರ್ಬಳಕೆಯಾಗಿ ಮಾನಸಿಕವಾಗಿ ತಮ್ಮನ್ನು ಕುಗ್ಗಿಸುವಂತೆ ಮಾಡಬಹುದು. ಮುಂಜಾಗ್ರತದಿಂದ ಇದ್ದರೆ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದು ಹೇಳಿದರು.

ಸೈಬರ್ ಅಪರಾಧಗಳ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಯುವತಿಯರು ಅದರ ಬಗ್ಗೆ ಹೆಚ್ಚು ತಿಳವಳಿಕೆ ಹೊಂದಬೇಕು. ತಮ್ಮ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಅನ್ಯರೊಂದಿಗೆ ಹಂಚಿಕೊಳ್ಳುವಾಗ ಅಥವಾ ಇನ್ನೊಬ್ಬರೊಂದಿಗೆ ಸ್ನೇಹ ಮಾಡುವಾಗಲೂ ತಮ್ಮ ಯಾವುದೇ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳದಿರುವಂತೆ ಸಲಹೆ ನೀಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷ ರೇಣುಕಾರಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ,ಸೈಬರ್ ಅಪರಾಧ ಬಗ್ಗೆ ಯಾವುದೇ ಅನುಮಾನವಿದ್ದರೂ ಧೈರ್ಯವಾಗಿ ಸೈಬರ್ ಠಾಣೆಗೆ ಭೇಟಿ ನೀಡಿ ಪರಿಹರಿಸಿಕೊಳ್ಳಿ ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ನಾಗಭೂಷಣ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಲಬ್ ಕಾರ್ಯದರ್ಶೀ ರೋ.ರೂಪಾ ಪುಣ್ಯಕೋಟಿ, ರೋ.ಲಕ್ಷ್ಮೀನಾರಾಯಣ್ ಎಸ್‍ಆರ್ ಹಾಗೂ ರೋ.ರಾಜಶೇಖರ್ ಹಾಗೂ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Related posts

ಫ್ರೈಡ್‍ ಯುರೋ: ಕ್ರೀಡಾವಿಜೇತರಿಗೆ ಅಭಿನಂದನೆ.

ಬಿಜೆಪಿ ಮೈತ್ರಿ ವಿಚಾರ ಇನ್ನೂ ಸಮಯ ಇದೆ- ಮಾಜಿ ಸಿಎಂ ಹೆಚ್.ಡಿಕೆ

ಭಾರತದ ಹಸಿರು ಕ್ರಾಂತಿಯ ಹರಿಕಾರ M.S ಸ್ವಾಮಿನಾಥನ್ ನಿಧನ