ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮೂಲಭೂತ ಸೌಕರ್ಯ ಹಾಗೂ ಅನುಮತಿ ವಿಸ್ತರಣೆ : ಹೆಚ್ಚುವರಿ ವಿಮಾನ ಕಾರ್ಯಾಚರಣೆಗಳ ಸಿದ್ಧತೆ-ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಹಾಗೂ ಅನುಮತಿ ವಿಸ್ತರಣೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಮಾನ ಕಾರ್ಯಾಚರಣೆಗಳ ಸಿದ್ಧತೆ ನಡೆಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫ್ಲೈಟ್ ಕಾರ್ಯಾಚರಣೆ ಮುಂದುವರಿಸಲು ಪರಿಹರಿಸಬೇಕಾದ ಸಮಸ್ಯೆಗಳ ಬಗ್ಗೆ ಮತ್ತು ಬಿಡಿಡಿಎಸ್ ಸಲಕರಣೆಗಳ ನಿಯೋಜಿಸುವ ಬಗ್ಗೆ ನಿನ್ನೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅವರಿಂದ ಸಕಾರಾತ್ಮಕ ಭರವಸೆ ಸಿಕ್ಕಿದೆ ಎಂದರು.
ಎಲ್ಲಾ ಹವಾಗುಣದಲ್ಲೂ ವಿಮಾನ ಇಳಿಯಲು ಮತ್ತು ರಾತ್ರಿ ವೇಳೆಯಲ್ಲಿ ಸಹ ಇಳಿಯಲು ಮತ್ತು ಹೊರಡಲು ಬೇಕಾಗಿರುವ ಯಂತ್ರೋಪಕರಣಗಳನ್ನು ಒದಗಿಸಲು, ಶಿವಮೊಗ್ಗದ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಮುಂದಿನ ದೃಷ್ಟಿಕೋನ ಇಟ್ಟುಕೊಂಡು ನಿಲ್ದಾಣದ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ ವಿಮಾನ ನಿಲ್ದಾಣ ಭದ್ರತೆ ಹಾಗೂ ಬಾಂಬ್ ಬೆದರಿಕೆ ಬಗ್ಗೆ ವಿಮಾನ ಯಾನ ಭದ್ರತಾ ಬ್ಯೂರೋ ತಾತ್ಕಾಲಿಕವಾಗಿ ಅನುಮೋದಿಸಿದೆ. ಮತ್ತು ಸಂಗ್ರಹಣೆಗಾಗಿ ಮೂರು ತಿಂಗಳ ಗಡುವು ನೀಡಲಾಗಿದೆ. ನ.28ರಂದು ಈ ಗಡುವು ಅಂತ್ಯಗೊಳ್ಳಲಿದೆ. ಅದನ್ನು ಮತ್ತೆ ನವೀಕರಣ ಮಾಡಬೇಕಾಗಿದೆ ಎಂದರು.
ಇದರ ನಡುವೆ ಸ್ಟಾರ್ ಏರ್ ಕಂಪೆನಿಯು ನ.21ರಿಂದ ತನ್ನ ಸೇವೆ ಆರಂಭಿಸುತ್ತದೆ. ಇದರ ಮಾನ್ಯತೆಯು ಕೂಡ ನ.28ರವರೆಗೆ ಇರುತ್ತದೆ. ಆದ್ದರಿಂದ ಬಿಸಿಎಎಸ್ ಮತ್ತು ಡಿಜಿಸಿಎ ಇಂದ ಕೇವಲ 7ದಿನಗಳ ವರೆಗೆ ಅನುಮೋದನೆಯನ್ನು ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದಲ್ಲಿ ಸೌಕರ್ಯಗಳನ್ನು ನೀಡಬೇಕಾಗಿದೆ. ರಾಜ್ಯ ಸರ್ಕಾರ ಇದಕ್ಕೆ ತನ್ನ ಅನುಮತಿ ನೀಡಿದೆ ಎಂದರು.
ಇದಲ್ಲದೆ ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೋಟೆಲ್‍ಗಳು, ಮಾಲ್‍ಗಳು ಸಂಕೀರ್ಣಗಳನ್ನು ಸ್ಥಾಪಿಸಲಾಗುವುದು. ಮುಖ್ಯವಾಗಿ ವಿಸ್ತಾರ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬೋಯಿಂಗ್ ಅಥವಾ ಏರ್‍ಬಸ್ ತರಬೇತಿ ನೀಡುವ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಲ್ಲಾ ರೀತಿಯಲ್ಲೂ ಅಭಿವೃಧ್ಧಿ ಪಡಿಸಲು ಅನುಕೂಲವಾಗುವಂತೆರಾಜ್ಯ ಸರ್ಕಾರದ ನೆರವು ಪಡೆದು ಸುಸೂತ್ರ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಮತ್ತು ಬೇರೆ ಬೇರೆ ಸ್ಥಳಗಳಿಗೆ ಬೇರೆಬೇರೆ ವಿಮಾನ ಸಂಸ್ಥೆಗಳ ಮೂಲಕ ಹಾರಾಟಕ್ಕೆ ಅನುವು ಮಾಡಿಕೊಡಲಾಗುವುದು. ಪರವಾನಿಗೆಯನ್ನು ಕೂಡ ವಿಸ್ತರಿಸಲಾಗುವುದು. ಶಾಶ್ವತ ಪರವಾನಿಗೆಯತ್ತ ಚಿಂತನೆ ನಡೆದಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ರುದ್ರೇಗೌಡ, ಪ್ರಮುಖರಾದ ದತ್ತಾತ್ರಿ, ಶಿವರಾಜ್, ಮಾಲತೇಶ್, ಜಗದೀಶ್, ಬಿ.ಕೆ. ಶ್ರೀನಾಥ್, ಅಣ್ಣಪ್ಪ, ಶರತ್ ಇದ್ದರು.

Related posts

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇ-ಎಫ್.ಐ.ಆರ್ ಮತ್ತು ಇ-ಚಲನ್ ವ್ಯವಸ್ಥೆ..

ನ.29 ರಿಂದ ಬೆಂಗಳೂರು ಟೆಕ್ ಸಮ್ಮಿಟ್- ಸಚಿವ ಪ್ರಿಯಾಂಕ್ ಖರ್ಗೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ವೈ.ವಿಜಯೇಂದ್ರ