ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಲೋಕಸಭಾ ಚುನಾವಣೆ: ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗೆ ನಾನು ಪ್ರಬಲ ಆಕಾಂಕ್ಷಿ-ಹೆಚ್.ಎಸ್. ಸುಂದರೇಶ್

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 37 ವರ್ಷಗಳಿಂದ ಪಕ್ಷ ಕಟ್ಟುವುದರ ಮೂಲಕ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷ ನೀಡಿದ ಹಲವು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಕಳೆದ ಚುನಾವಣೆಯಲ್ಲೂ ಸಹ ಆಕಾಂಕ್ಷಿಯಾಗಿದ್ದೆ. ಆದರೆ ಕೊನೆಯ ಕ್ಷಣದಲ್ಲಿ ಕೈ ತಪ್ಪಿತ್ತು. ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು.
ಪಕ್ಷ ಅಧಿಕಾರಕ್ಕೆ ಬಂದು 5 ತಿಂಗಳಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಆದರೂ ಸಹ ವಿರೋಧ ಪಕ್ಷವಾದ ಬಿಜೆಪಿ ಈ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿದೆ. ಅದರಲ್ಲೂ ರಾಜ್ಯದ ಕೇಂದ್ರ ಸಚಿವರು ದಿನನಿತ್ಯ ಸರ್ಕಾರದ ವಿರುದ್ಧ ಸುಳ್ಳು ಹೇಳಿಕೆ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಇದುವರೆಗೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡದ ಬಿಜೆಪಿ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ರಾಜ್ಯದ ನಾಯಕರನ್ನು ದೆಹಲಿಗೆ ಕರೆಸಿ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದರು.
ಮುಂಬರುವ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಈಗಾಗಲೇ ಶಿಕ್ಷಕರ ಕ್ಷೇತ್ರಕ್ಕೆ ಕೊಡಗಿನ ಕೆ.ಕೆ. ಮಂಜುನಾಥ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಪದವೀಧರರ ಕ್ಷೇತ್ರಕ್ಕೆ ಶೀಘ್ರದಲ್ಲೆ ಅಭ್ಯರ್ಥಿಯ ಘೋಷಣೆಯಾಗಲಿದೆ. ಈ ಕ್ಷೇತ್ರಕ್ಕೆ ಐವರು ಅರ್ಜಿ ಹಾಕಿದ್ದು, ಇವರಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಮುಖಂಡರಾದ ಆಯನೂರು ಮಂಜುನಾಥ್, ಎಸ್.ಪಿ. ದಿನೇಶ್, ರಂಗಸ್ವಾಮಿಯವರು ಅರ್ಜಿ ಹಾಕಿದ್ದು, ಯಾರಿಗೇ ಟಿಕೆಟ್ ನೀಡಿದರೂ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ನಾಳೆ ಶ್ರೀಕಾಂತ್ ಅಧಿಕೃತವಾಗಿ ಪಕ್ಷ ಸೇರ್ಪಡೆ: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಾಂಕೇತಿಕವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಾಳೆ ಬೆಳಿಗ್ಗೆ 10-30ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಅಪಾರ ಬೆಂಗಲಿಗರೊಂದಿಗೆ ಕಾಂಗ್ರೆಸ್ ಸದಸ್ಯತ್ವ ಪಡೆಯುವುದರೊಂದಿಗೆ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಜರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂ ಪಾಶಾ, ಶಿವಕುಮಾರ್, ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಮೆಹಕ್ ಷರೀಫ್, ಶಮೀರ್‍ಖಾನ್, ಇಕ್ಕೇರಿ ರಮೇಶ್, ಮಂಜುನಾಥಬಾಬು, ಸಿ.ಎಸ್.ಚಂದ್ರಭೂಪಾಲ್, ಅಲ್ತಾಫ್ ಪರ್ವಿಜ್ ಇನ್ನಿತರರಿದ್ದರು.

Related posts

ಶ್ರೇಷ್ಠ ಪರಂಪರೆ ಹೊಂದಿರುವ ದೇಶ ಭಾರತ-ಅಶೋಕ ಹಂಚಲಿ

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಓಪನ್: ನಾಳೆಯಿಂದ ಭಕ್ತರಿಗೆ  ದರ್ಶನಕ್ಕೆ ಅವಕಾಶ.

ಬಯಸದೇ ಬಂದ ಭಾಗ್ಯ: ಹತ್ತೇ ಸೆಕೆಂಡ್ ನಲ್ಲಿ ಲಕ್ಷಾಧಿಪತಿ: ಬರಿಗೈಯಲ್ಲಿ ಬಂದವನಿಗೆ ಸಿಕ್ತು 94 ಲಕ್ಷ ರೂ. ಹಣ. ಮುಂದೇನಾಯ್ತು…?