ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಹಳೇ ವಾಹನಗಳಿಗೆ ಎಚ್ ಎಸ್ ಆರ್ ಪಿ ಫಲಕ ಕಡ್ಡಾಯ: ಎಲ್ಲೆಂದರಲ್ಲಿ ನಂಬರ್ ಪ್ಲೇಟ್ ಹಾಕಿಸುವ ಮುನ್ನೆ ಎಚ್ಚರ.

ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್ಎಸ್ಆರ್ಪಿ) ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯಗೊಳಿಸಿದ್ದು ಈ  ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿರುವ ಅಧಿಕೃತ ಡೀಲರ್ ಶಿಪ್ಗಳ ಬಳಿಯಲ್ಲದೆ ಎಲ್ಲೆಂದರಲ್ಲಿ ನಂಬರ್ ಪ್ಲೇಟ್ ಹಾಕಿಸುವಂತಿಲ್ಲ

ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಜೋಡಣೆ ಪ್ರಕ್ರಿಯೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್ಗಳಿಗೆ ಕೊಡಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ಕೊಡಲಾಗಿದ್ದು, ರಾಜ್ಯಾದ್ಯಂತ ಅಂದಾಜು 4000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ. ವಾಹನ ಮಾಲೀಕರು ಅಧಿಕೃತ ಡೀಲರ್ ಪಾಯಿಂಟ್ಗಳಲ್ಲೇ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.

ಸರ್ಕಾರದ ಕಡ್ಡಾಯ ನಿಯಮವನ್ನೇ ದುರ್ಬಳಕೆ ಮಾಡಿಕೊಂಡು ವಾಹನ ಮಾಲೀಕರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸಣ್ಣಪುಟ್ಟ ಅಂಗಡಿಗಳು, ಮೆಕಾನಿಕ್ ಶಾಪ್ ಗಳು, ಏಜೆನ್ಸಿಗಳು ಹಾಗೂ ಕೆಲವೊಂದು ಸಂಸ್ಥೆಗಳು, ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳು ಎಂದೇಳಿ ಸಾಮಾನ್ಯ ನಂಬರ್ ಪ್ಲೇಟ್ಗಳನ್ನು ಅಳವಡಿಸಿ ಹಣ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಇಂತಹ ನಕಲಿ ನಂಬರ್ ಪ್ಲೇಟ್ಗಳಲ್ಲಿ ಹಾಲೋಗ್ರಾಂ ಸ್ಟಿಕ್ಕರ್ಗಳನ್ನು ಅಳವಡಿಸಿ, ನಿಗದಿಪಡಿಸಿರುವ ಅಸಲಿ ದರಕ್ಕಿಂತ ಹೆಚ್ಚು ಹಣವನ್ನು ಸುಲಿಗೆ ಮಾಡಲಾಗುತ್ತಿದೆ.

ಅಸಲಿ ಎಚ್ಎಸ್ಆರ್ಪಿ ಫಲಕದ ಮೇಲೆ ಲೇಸರ್ ತಂತ್ರಜ್ಞಾನದಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ನಂಬರ್ ಪ್ಲೇಟ್ಗೂ ಒಂದು ಸೀರಿಯಲ್ ನಂಬರ್ ಕೊಡಲಾಗುತ್ತದೆ. ಆ ನಂಬರ್ ಅನ್ನು ಸಾರಿಗೆ ಇಲಾಖೆಯ ವಾಹನ್-4 ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿರುತ್ತದೆ. ಆದರೆ, ಅನಧಿಕೃತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಖರೀದಿಸುವ ನಂಬರ್ ಪ್ಲೇಟ್ಗಳಲ್ಲಿ ಸೀರಿಯಲ್ ಸಂಖ್ಯೆಯೂ ಇರುವುದಿಲ್ಲ. ವಾಹನ್-4 ತಂತ್ರಾಂಶಕ್ಕೂ ಜೋಡಣೆ ಆಗಿರುವುದಿಲ್ಲ. ಆದ್ದರಿಂದ ಇಂತಹ ಫಲಕಗಳನ್ನು ಅಳವಡಿಸಿದರೂ ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ದಂಡ ಕಟ್ಟುವ ಜತೆಗೆ ಪುನಃ ಹಣ ಪಾವತಿಸಿ ಹೊಸದಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಬೇಕಾಗುತ್ತದೆ.

ಹಳೇ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು 2023ರ ನ.17ರವರೆಗೆ ಸಾರಿಗೆ ಇಲಾಖೆ ಅವಕಾಶ ನೀಡಲಾಗಿದೆ. ಸಾರಿಗೆ ಇಲಾಖೆ ಅನುಮತಿ ನೀಡಿರುವ ಡೀಲರ್ ಪಾಯಿಂಟ್ಗಳು ಯಾವು, ಎಲ್ಲಿವೆ ಹಾಗೂ ನಂಬರ್ ಪ್ಲೇಟ್ ಆರ್ಡರ್ ಮಾಡಲು ಏಕೀಕೃತ ಪೋರ್ಟಲ್ ಡಿಡಿಡಿ.ಠಜಿಚಞ.ಜ್ಞಿ ನೀಡಲಾಗಿದೆ.

ಕೇಂದ್ರ ಸರ್ಕಾರದ ನಿಯಮದ ಅನುಸಾರ ನಂಬರ್ ಪ್ಲೇಟ್ ತಯಾರಿಸಿ, ಅಳವಡಿಸಲು ಅಧಿಕೃತ ಡೀಲರ್ಗಳಿಗೆ ಸರ್ಕಾರ ಅನುಮತಿ ನೀಡಿದೆ. ರಸ್ತೆ ಬದಿ, ಸಣ್ಣಪುಟ್ಟ ಅಂಗಡಿಗಳಲ್ಲಿ ಸಾಮಾನ್ಯ ನಂಬರ್ ಪ್ಲೇಟ್ ಅಳವಡಿಸಿದರೆ ಕೇಂದ್ರ ಸರ್ಕಾರದ ಉದ್ದೇಶವೇ ಈಡೇರುವುದಿಲ್ಲ.

ರಾಜ್ಯದಲ್ಲಿವೆ 1.70 ಕೋಟಿ ಹಳೇ ವಾಹನ: ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ಸದ್ಯ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಿದರೆ ಅಂದಾಜು 600 ರಿಂದ 1000 ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ.

 

Related posts

ಕನ್ನಡ ಸಾಹಿತ್ಯ ಪರಿಷತ್ತಿನ  ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ʻರತ್ನʼ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಅನುದಾನ ಹಿಂಪಡೆದಿದ್ದು ಮೇಲ್ನೋಟಕ್ಕೆ ದ್ವೇಷದ ರಾಜಕಾರಣ-ಮಾಜಿ ಸಿಎಂ ಬಿಎಸ್ ವೈ ಟೀಕೆ.

ಹೊಸ ರಾಜ್ಯಾಧ್ಯಕ್ಷರ ನೇಮಕವಾಗುವ  ತನಕ ನೀವೇ ನಾಯಕತ್ವ ವಹಿಸಿಕೊಳ್ಳಿ- ಬಿಎಸ್ ವೈಗೆ ಬಿಜೆಪಿ ಶಾಸಕರಿಂದ ಒತ್ತಾಯ