ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕಾರ್ಮಿಕರಿಗೆ ಕನಿಷ್ಠ ವೇತನ ಮರು ನಿಗದಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕಾರ್ಮಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು ಕನಿಷ್ಠ ವೇತನ ಕುರಿತಂತೆ ರಾಜ್ಯ ಸರ್ಕಾರದ ಈ ಹಿಂದಿನ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗೆಯೇ  ಹೊಸದಾಗಿ ಕನಿಷ್ಠ ವೇತನ ಮರು ನಿಗದಿ ಮಾಡುವಂತೆ ಸರ್ಕಾರಕ್ಕೆ  ಸೂಚನೆ ನೀಡಿದೆ.

ರಾಜ್ಯ ಸರ್ಕಾರ 2022 ರಲ್ಲಿ ಕನಿಷ್ಠ ವೇತನ ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದ್ದು,  ಸುಪ್ರೀಂಕೋರ್ಟ್ 1992ರಲ್ಲಿ ರೋಪ್ಟಾ ಕೋಸ್ ಪ್ರಕರಣದಲ್ಲಿ ತಿಳಿಸಿದ ಮಾರ್ಗಸೂಚಿಗಳ ಅನ್ವಯ ಮರು ಲೆಕ್ಕಾಚಾರ ಮಾಡಿ ಹೊಸದಾಗಿ ಕನಿಷ್ಠ ವೇತನ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರಿಂದಾಗಿ ಅಸಂಘಟಿತ ವಲಯದ ಸುಮಾರು 1.7 ಕೋಟಿ ಕಾರ್ಮಿಕರ ವೇತನ ಹೆಚ್ಚಳವಾಗುವ ಸಂಭವ ಇದೆ.

ರಾಜ್ಯ ಸರ್ಕಾರ 2022ರ ಜೂನ್ 25 ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಲು ಕೋರಿ ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮತ್ತು ಇಂಜಿನಿಯರಿಂಗ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಅರ್ಜಿ ಸಲ್ಲಿಸಿದ್ದವು. ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ ಈ ಸೂಚನೆ ನೀಡಿದೆ. ಮುಂದಿನ ಎರಡು ತಿಂಗಳಲ್ಲಿ ವೇತನ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ರಾಜ್ಯ ಸರ್ಕಾರ 2022ರಲ್ಲಿ ಸುಮಾರು 34 ವಲಯಗಳ ಅಸಂಘಟಿತ ಕಾರ್ಮಿಕರಿಗೆ ಶೇಕಡ 5 ರಿಂದ 10 ರಷ್ಟು ವೇತನ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಹೊರಡಿಸುವ ಮೊದಲು ಸುಪ್ರೀಂ ಕೋರ್ಟ್ ನ ನಿಯಮಗಳನ್ನು ಅನುಸರಿಸಿಲ್ಲ, ಕಾರ್ಮಿಕ ಇಲಾಖೆಗಳ ಸಲಹೆ ಪರಿಗಣಿಸಿಲ್ಲ. ಹಾಗಾಗಿ ಅಧಿಸೂಚನೆ ರದ್ದುಪಡಿಸಬೇಕು. ಸುಪ್ರೀಂಕೋರ್ಟ್ ರೋಪ್ಟಾ ಕೋಸ್ ಪ್ರಕರಣದಲ್ಲಿ ನೀಡಿದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಕನಿಷ್ಠ ವೇತನ ನಿಗದಿಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರದ ಅಧಿಸೂಚನೆ ರದ್ದುಪಡಿಸಿ ಕನಿಷ್ಠ ವೇತನ ಮರು ನಿಗದಿಗೆ ಆದೇಶ ನೀಡಿದೆ.

 

Related posts

ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದಿಂದ ಸದಸ್ಯರಿಗೆ ಶೇ.23ರಷ್ಟು ಲಾಭಾಂಶ ಘೋಷಣೆ.

ಮಹಾನ್ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಂಡರೆ ಅದೇ ಸಂವಿಧಾನ: ಸಚಿವ ಮಧು ಬಂಗಾರಪ್ಪ

ಗಾಂಧೀಜಿಯವರ ಅಹಿಂಸೆಯ ಮಾರ್ಗದಲ್ಲಿ ನಡೆಯೋಣ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್