ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಚುನಾವಣಾ ಅಭ್ಯರ್ಥಿಗಳು ಕುಟುಂಬಸ್ಥರ ಆಸ್ತಿ ವಿವರ ಸಲ್ಲಿಸದಿರುವುದು ಭ್ರಷ್ಟಾಚಾರಕ್ಕೆ ಸಮ- ಹೈಕೋರ್ಟ್.

ಬೆಂಗಳೂರು : ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ, ತಮ್ಮ ಕುಟುಂಬ ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು  ಸಲ್ಲಿಸದಿರುವುದು ಭ್ರಷ್ಟಾಚಾರಕ್ಕೆ ಸಮ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಭ್ಯರ್ಥಿಗಳು ತಮ್ಮ ಕುಟುಂಬಸ್ಥರ ಆಸ್ತಿ ವಿವರ ಮರೆಮಾಚಿದರೆ ಅದೂ ಕೂಡ ಭ್ರಷ್ಟಾಚಾರ ಸಮವಾಗಲಿದ್ದು, ಅನರ್ಹತೆಗೂ ಕಾರಣವಾಗಲಿದೆ ಎಂದು ಹೈಕೋರ್ಟ್  ಹೇಳಿದೆ.

ಅಬೀದಾ ಬೇಗಂ ಅವರು ಚುನಾವಣೆ ನಂತರ ತಮ್ಮ ಹಾಗೂ ಅವರ ಪತಿಯ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಹಾಗಾಗಿ ಅವರನ್ನು ಅನರ್ಹಗೊಳಿಸಬೇಕು ಎಂದು ಮೊಹಮ್ಮದ್ ಇಸ್ಮಾಯಿಲ್ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಬೇಗಂ ಆಯ್ಕೆ ಅಸಿಂಧುಗೊಳಿಸಿ ತಮ್ಮನ್ನು ಆಯ್ಕೆಯಾಗಿದ್ದೇವೆಂದು ಘೋಷಿಸುವಂತೆ ಕೋರಿದ್ದರು. ಅದರಂತೆ ಶಹಾಪೂರ ಜೆಎಫ್ಎಂಸಿ ನ್ಯಾಯಾಲಯ 2022ರ ಅ. 31ರಂದು ಅಬಿದಾ ಬೇಗಂ ಆಯ್ಕೆ ರದ್ದುಗೊಳಿಸಿದ್ದರು.

ಪ್ರಶ್ನಿಸಿದ್ದ ಬೇಗಂ, ಇಸ್ಮಾಯಿಲ್ ತಮ್ಮ ಅರ್ಜಿಯಲ್ಲಿ ಎಲ್ಲ ಸ್ಪರ್ಧಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿರಲಿಲ್ಲ. ಇದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಸೆಕ್ಷನ್ 15 (2)(ಎ)ಗೆ ವಿರುದ್ಧವಾಗಿದೆ. ಆಸ್ತಿ ವಿವರ ಸಲ್ಲಿಸದೇ ಇರುವುದು ಭ್ರಷ್ಟಾಚಾರವಾಗುವುದಿಲ್ಲ ಮತ್ತು ಅದೇ ಕಾರಣಕ್ಕೆ ಅನರ್ಹಗೊಳಿಸಲಾಗದು ಎಂದು ವಾದಿಸಿದ್ದರು.

ಈ ಸಂಬಂಧ  ಗ್ರಾಮ ಪಂಚಾಯ್ತಿ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಕಲಬುರಗಿ ಪೀಠದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೆ ಅರ್ಜಿದಾರರು ಆಸ್ತಿ ವಿವರ ಸಲ್ಲಿಸದೇ ಇರುವುದು ಅವರಿಗೆ ಚುನಾವಣೆಯಲ್ಲಿ ಪೂರಕ ಪರಿಣಾಮ ಬೀರಿದೆಯೇ ಎಂಬುದನ್ನು ಹೇಳಲಾಗದು. ಆದರೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಅನ್ವಯ ಅಭ್ಯರ್ಥಿ ಆಸ್ತಿ ವಿವರ ಸಲ್ಲಿಸದೇ ಇರುವುದು ಸೆಕ್ಷನ್ 9(1)(ಬಿ) ಪ್ರಕಾರ ಅನರ್ಹತೆಗೆ ದಾರಿ ಮಾಡಿಕೊಡಲಿದೆ ಎಂಬುದಾಗಿ ಪೀಠ ತಿಳಿಸಿದೆ.

ಪ್ರಸ್ತುತದ ಪ್ರಕರಣದಲ್ಲಿ ಮೂಲ ಅರ್ಜಿದಾರರು ಗೆದ್ದ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸುವುದು ಮಾತ್ರವಲ್ಲದೆ, ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಕೋರಿದ್ದಾರೆ. ಹಾಗಾಗಿ ಎಲ್ಲ ಸ್ಪರ್ಧಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಬೇಕಿತ್ತು. ಅವರ ಉಪಸ್ಥಿತಿಯಲ್ಲಿಯೇ ಯಾರು ವಿಜಯಿ ಎಂದು ಘೋಷಿಸಬೇಕಾಗುತ್ತಿದೆ. ಇಬ್ಬರೇ ಅಭ್ಯರ್ಥಿಗಳಿದ್ದಾಗ ಒಬ್ಬ ಅಭ್ಯರ್ಥಿ ಅನರ್ಹ ಎಂದು ಘೋಷಿಸಿದರೆ, ಸಹಜವಾಗಿಯೇ ಮತ್ತೊಬ್ಬರು ಅರ್ಹರು ಅಥವಾ ವಿಜಯಿಯಾಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಇತರೆ ಸ್ಪರ್ಧಿಗಳಿದ್ದ ಕಾರಣ, ಯಾರು ವಿಜಯಿ ಎಂದು ನಿರ್ಣಯಿಸುವುದು ಕಷ್ಟಕರ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

 

Related posts

ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆ: ಫೇಲ್ ಆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಅವಕಾಶ- ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

ಕಜಾಪ ದಿಂದ ದಸರಾ ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಗೆ ಆಹ್ವಾನ

ರಾಜ್ಯದಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ.