ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಹೈಕೋರ್ಟ್ ಸಲಹೆ

ಬೆಂಗಳೂರು : ತಂತ್ರಜ್ಞಾನ ಬೆಳೆದಂತೆ ಚಿಕ್ಕ ಚಿಕ್ಕಮಕ್ಕಳ ಕೈಯಲ್ಲೂ ಈಗ ಮೊಬೈಲ್ ಹಾವಳಿ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣವನ್ನ ಬಳಸುವ ಮಟ್ಟಿಗೆ ಬೆಳೆದಿದೆ. ಶಾಲೆಗೆ ಹೋಗುವ ಮಕ್ಕಳೂ ಸಹ ಸಾಮಾಜಿಕ ಜಾಲತಾಣಗಳಿಗೆ ದಾಸರಾಗಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.

ಚುನಾವಣೆ ವೇಳೆ ಮತದಾನಕ್ಕೆ 21 ವರ್ಷ ನಿಗದಿ ಮಾಡಿರುವ ಮಾದರಿಯಲ್ಲೇ ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿ ಮಾಡುವುದು ಸೂಕ್ತ. ಈ ಬಗ್ಗೆ ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕವಾಗಿ ಸಲಹೆ ನೀಡಿದೆ.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ 2021ರ ಫೆ.ಮತ್ತು 2022ರ ಅವಧಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಆಕ್ಷೇಪಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ (ಹಿಂದಿನ ಟ್ವಿಟರ್) ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಸಾಮಾಜಿಕ ಜಾಲತಾಣ ನಿರ್ಬಂಧಿಸಿ ನೋಡಿ ಸಾಕಷ್ಟು ಒಳ್ಳೆಯದಾಗುತ್ತದೆ ಎಂದು ತಿಳಿಸಿದೆ.

ಆನ್ ಲೈನ್ ಗೇಮಿಂಗ್ಗೆ ವಯೋಮಿತಿ ನಿಗದಿಪಡಿಸಲಾಗಿದೆ. ಇದೇ ಮಾದರಿ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು ಎಂದು ಕೋರ್ಟಗ ತಿಳಿಸಿದ್ದು,  ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್. ಕುಮಾರ್, ಕೆಲವು ಆನ್ ಲೈನ್ ಗೇಮ್ ಆಡಲು ಕಾನೂನಿನ ಪ್ರಕಾರ ಈಗ ಆಧಾರ್ ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ? ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ? ಮತದಾನಕ್ಕೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮಾಡಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ವಯೋಮಿತಿ ನಿಗದಿಪಡಿಸುವುದು ಒಳಿತು ಎಂದು ನ್ಯಾಯಪೀಠ ಹೇಳಿದೆ.

ಅಂತಿಮವಾಗಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ಎಕ್ಸ್ಕಾರ್ಪ್ ಸಂಸ್ಥೆಯ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

 

Related posts

ಜಾತಿ ಗಣತಿ ಬಗ್ಗೆ ಬಹಳಷ್ಟು ಅಪಪ್ರಚಾರ: ಜನರ ಅಭಿಪ್ರಾಯ ಪರಿಗಣಿಸಿ ತೀರ್ಮಾನ-ಸಚಿವ ಕೆ.ಎನ್ ರಾಜಣ್ಣ

30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ- ಆರ್ ಬಿಐನಿಂದ ಹೊಸ ನಿಯಮ.

ಐಐಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಡಿ.ಎಸ್.ಚಂದ್ರಶೇಖರ್ ಅಧಿಕಾರ ಸ್ವೀಕಾರ