ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಇನ್ಮುಂದೆ ಎಸಿಗೆ ಜನನ-ಮರಣ ನೋಂದಣಿ ತಿದ್ದುಪಡಿ ಅಧಿಕಾರ..

ಬೆಂಗಳೂರು: ಜನನ-ಮರಣ ನೋಂದಣಿಗಳ ತಿದ್ದುಪಡಿ ಹಾಗೂ ವಿಳಂಬ ನೋಂದಣಿಯ ಅಧಿಕಾರವನ್ನು ಉಪ ವಿಭಾಗಾಧಿಕಾರಿಗೆ ನೀಡಿ ಸಚಿವ ಸಂಫುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜನನ-ಮರಣ ನೋಂದಣಿಗಳ ತಿದ್ದುಪಡಿ ಹಾಗೂ ವಿಳಂಬ ನೋಂದಣಿಯ ಪ್ರಕರಣಗಳಲ್ಲಿ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.  ಉಪ ವಿಭಾಗಾಧಿಕಾರಿಗಳಿಗೆ ಜನನ-ಮರಣ ನೋಂದಣಿಗಳ ತಿದ್ದುಪಡಿ ಅಧಿಕಾರವನ್ನು ನೀಡಲು ಅಗತ್ಯ ನಿಯಮಾವಳಿ ತಿದ್ದುಪಡಿಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈವರೆಗೆ ಜನನ, ಮರಣ ನೋಂದಣಿ ಕಾಯಿದೆ ಸೆಕ್ಷನ್ 13(3)ರ ಅಡಿ ವಿಳಂಬ, ತಿದ್ದುಪಡಿ ಸೇರಿದಂತೆ ಯಾವುದೇ ತಗಾದೆಗಳಿದ್ದರೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸ್ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರ ಇರಲಿಲ್ಲ. ಇದರಿಂದ ಸಾರ್ವಜನಿಕರು ಅನಗತ್ಯವಾಗಿ ನ್ಯಾಯಾಲಯಗಳಿಗೆ ಅಲೆಯುವಂತಾಗಿದೆ ಎಂಬ ಕಾರಣಕ್ಕೆ ಕರ್ನಾಟಕ ಜನನ, ಮರಣ ನೋಂದಣಿ ತಿದ್ದುಪಡಿ ನಿಯಮಗಳು 2023ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಡಿ ವಿಳಂಬದ ನೋಂದಣಿ ಹಾಗೂ ತಿದ್ದುಪಡಿಯನ್ನು ಉಪ ವಿಭಾಗಾಧಿಕಾರಿ ಹಂತದಲ್ಲೇ ಮಾಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಜನನ ಹಾಗೂ ಮರಣ ನೋಂದಣಿಯಲ್ಲಿ ವಿಳಂಬ ನೋಂದಣಿ ಹಾಗೂ ತಿದ್ದುಪಡಿ ಅಧಿಕಾರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಜನನ, ಮರಣ ನೋಂದಣಿ ನಿಯಮಗಳು -1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ಶುಲ್ಕವನ್ನೂ ಪರಿಷ್ಕರಿಸಲಾಗಿದೆ. ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಹಾಲಿ ಇರುವ ವಿಳಂಬ ಶುಲ್ಕವನ್ನು 2 ರು. ಬದಲು 100 ರು.ಗೆ, 30 ದಿನಗಳ ನಂತರ 5 ರು. ಬದಲು 200 ರು., 1 ವರ್ಷ ಬಳಿಕದ ನೋಂದಣಿಗೆ 10 ರು. ಬದಲಿಗೆ 500 ರು.ಗೆ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಪೋಷಣ್ ಅಭಿಯಾನದ ಅಡಿ ಮಕ್ಕಳ ಪೋಷಣೆಯ ಪ್ರಮಾಣವನ್ನು ಅರಿಯಲು 28.60 ಕೋಟಿ ರು. ವೆಚ್ಚದಲ್ಲಿ ವಿವಿಧ ಸಾಧನಗಳನ್ನು ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ. ಮಕ್ಕಳ ಪೋಷಣೆ ಅಳೆಯಲು ಇನ್ಫ್ಯಾಂಟೋ ಮೀಟರ್, ಸ್ಟೇಡಿಯೋಮೀಟರ್, ತೂಕದ ಯಂತ್ರ ಸೇರಿದಂತೆ ಪ್ರತಿ ಯಂತ್ರಕ್ಕೆ 8 ಸಾವಿರ ರು.ಗಳಂತೆ 35,750 ಯಂತ್ರಗಳಿಗೆ 28.60 ಕೋಟಿ ರು. ವೆಚ್ಚಿಸಲು ಅನುಮೋದನೆ ನೀಡಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 73 ಕೆಪಿಸಿಎಸ್ ಶಾಲೆ ಹಾಗೂ 50 ಆದರ್ಶ ವಿದ್ಯಾಲಯಗಲ್ಲಿ 20 ಕೋಟಿ ರು. ವೆಚ್ಚದಲ್ಲಿ ಆವಿಷ್ಕಾರ ಇನ್ನೋವೇಟಿವ್ ಲ್ಯಾಬ್ ಸ್ಥಾಪಿಸುವ ಬಗ್ಗೆಯೂ ನಿರ್ಧರಿಸಲಾಯಿತು.

ಜತೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೂತನವಾಗಿ 24 ಬಸ್ಗಳು ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಸೇವೆಗೆ 100 ಬಸ್ಗಳ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.

 

Related posts

ಬರ ಪರಿಹಾರಕ್ಕಾಗಿ ಸಿಎಂ ವಿಶೇಷ ಅಸಕ್ತಿ ವಹಿಸಿದ್ದಾರೆ -ಸಚಿವ ಕೆ.ಜೆ. ಜಾರ್ಜ್ ಅಭಿಮತ

ಕರವೇ ಯುವಸೇನೆಯಿಂದ ಡಿಸೆಂಬರ್ 3ರಂದು  ಅದ್ದೂರಿ ಕನ್ನಡ ರಾಜ್ಯೋತ್ಸವ

ಪ್ರೀತಿಸಿ ಮದುವೆಯಾದ ಜೋಡಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ; ರಕ್ಷಣೆ ಕೋರಿ ಸಿಎಂ ಮತ್ತು ಸಚಿವರಿಗೆ ಮನವಿ…