ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸರ್ಕಾರಿ ಶಾಲೆಗಳಿಗೆ ಸಂಘ ಸಂಸ್ಥೆಗಳ ನೆರವು ಅಗತ್ಯ-ಸತೀಶ್ ಚಂದ್ರ

ಶಿವಮೊಗ್ಗ: ಗ್ರಾಮಾಂತರ ಪ್ರದೇಶ ಸೇರಿದಂತೆ ಶಾಲೆಗಳಿಗೆ ಸರ್ಕಾರದ ಅನುದಾನ ಇದ್ದರೂ ಕೆಲ ಮೂಲ ಸೌಕರ್ಯಗಳಿಂದ ವಂಚಿತ ಆಗಿರುತ್ತವೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ನಿದಿಗೆಯ ಜನತಾ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಪಯುಕ್ತ ಆಗುವ ಆಶಯದಿಂದ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಡಿಯುವ ನೀರು ಸರಿ ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯ ಕಾಣಿಸಿಕೊಂಡ ಪ್ರಕರಣಗಳು ಅನೇಕ ಕಡೆ ನಡೆದಿವೆ. ರೋಟರಿ ಸಂಸ್ಥೆಯು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲು ಘಟಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಪ್ರತಿಭಾವಂತ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿದ್ದು, ಸೂಕ್ತ ಪ್ರೋತ್ಸಾಹ ಹಾಗೂ ಮೂಲ ಸೌಕರ್ಯದ ಲಭ್ಯತೆ ಇದ್ದರೆ ಅನುಕೂಲವಾಗುತ್ತದೆ. ಮಕ್ಕಳು ಉತ್ತಮ ಸಾಧನೆ ಮಾಡಲು ಸಹಕಾರಿ ಆಗುತ್ತದೆ. ದಾನಿಗಳು ಒದಗಿಸುವ ಸೌಕರ್ಯಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆ ಮುಖ್ಯ ಶಿಕ್ಷಕಿ ತುಳಸಿ ಅಡಿಗ ಅವರು ದೇಣಿಗೆ ನೀಡಿದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಶಿಕ್ಷಕಿ ಸೋಮಿಬಾಯಿ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಸಂಚಾರ ನಿಯಮಗಳ ಬಗ್ಗೆ ಜಾಗೃತಿ; ಪೊಲೀಸರಿಂದ ಬೈಕ್ ಜಾಥಾ..

ವಾಸವಿ ಶಾಲೆಯಲ್ಲಿ ಪರಿಸರಸ್ನೇಹಿ ಬಣ್ಣರಹಿತ ಮಣ್ಣಿನ ಗಣಪತಿ ಮಾರಾಟ.

ಆ. 31. ಸಾಹಿತ್ಯ ಗ್ರಾಮದಲ್ಲಿ ಸಾಹಿತ್ಯ ಹುಣ್ಣಿಮೆ ಶ್ರಾವಣ ಸಂಭ್ರಮ