ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಾಲ್ಕು ತಲೆಮಾರಿನಿಂದಲೂ ಗಣೇಶ ಮೂರ್ತಿ ತಯಾರಿ: ವಿದೇಶಕ್ಕೂ ತಲುಪಿದ ಗಣಪನ ಮೂರ್ತಿ: ಈ ಅಪರೂಪ ಕುಟುಂಬದ ಶ್ರದ್ಧೆ ಮತ್ತು ಭಕ್ತಿಗೆ ಒಂದು ನಮನ.

ಮಂಗಳೂರು: ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಣೇಶೋತ್ಸವ ಬಂತೆಂದರೇ ಸಾಕು ಎಲ್ಲಿಲ್ಲದ ಸಡಗರ ಸಂಭ್ರಮ.  ನಗರ ಪಟ್ಟಣಗಳಲ್ಲಿ ಊರಿನ ಗಲ್ಲಿ ಗಲ್ಲಿಗಳಲ್ಲೂ ಗಣೇಶ ಮೂರ್ತಿಯನ್ನ ಪ್ರತಿಸ್ಟಾಪಿಸಿ ವಿಸರ್ಜನೆ ಮಾಡುವುದನ್ನ ಪ್ರತಿ ವರ್ಷವೂ ಕಾಣುತ್ತೇವೆ. ಗಣೇಶ ಹಬ್ಬದಂದು ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ ಗಣೇಶನ ವಿಗ್ರಹ ತಯಾರಿಸುವುದು ಸುಲಭವಲ್ಲ ಅದೊಂದು  ಒಂದು ವಿಶಿಷ್ಟವಾದ ಕಲೆ.  ಯಾವುದೋ ತರಬೇತಿ ತರಗತಿಯಿಂದ ಕಲಿಯಲು ಸಾಧ್ಯವಿಲ್ಲ ಶೃದ್ಧೆ ಹಾಗೂ ಭಕ್ತಿಯಿಂದ ಗಣೇಶನ ಮೂರ್ತಿ ತಯಾರಿಸಬೇಕು. ಅಂತೆಯೋ  ಮಂಗಳೂರಿನ ಕುಟುಂಬವೊಂದು ಬರೋಬ್ಬರಿ ನಾಲ್ಕು ತಲೆಮಾರುಗಳಿಂದ ಗಣಪನ ಮೂರ್ತಿ ತಯಾರಿಯಲ್ಲಿ ತೊಡಗಿಕೊಂಡಿದ್ದು ಅವರ ಭಕ್ತಿ ಮತ್ತು ಶ್ರದ್ಧೆ ಮೆಚ್ಚಲೇಬೇಕು.

ಹೌದು,  ಮಂಗಳೂರಿನ ಮಣ್ಣಗುಡ್ಡ ನಿವಾಸಿ ರಾಮಚಂದ್ರ ರಾವ್ ಅವರ ಮುಂದಾಳತ್ವದಲ್ಲಿ ವರ್ಷಂಪ್ರತಿ ಗಣಪನ ಮೂರ್ತಿ ರಚನಾ ಕಾರ್ಯ ಈ ಮನೆಮಂದಿಯಿಂದ ನಡೆಯುತ್ತದೆ. ಸುಮಾರು 94 ವರ್ಷಗಳ ಹಿಂದೆ ರಾಮಚಂದ್ರ ರಾಯರ ತಂದೆ ಮೋಹನ್ ರಾವ್ ಗಣೇಶನ ವಿಗ್ರಹ ತಯಾರಿಯನ್ನು ಆರಂಭಿಸಿದ್ದರು. ಬಳಿಕ ಅವರ ನಾಲ್ವರು ಮಕ್ಕಳು, ಬಳಿಕ ಮೊಮ್ಮಕ್ಕಳು, ಇದೀಗ ಮರಿಮಕ್ಕಳು ಸೇರಿ ನಾಲ್ಕು ತಲೆಮಾರುಗಳಿಂದ ಈ ಕಾರ್ಯದಲ್ಲಿ ನಿರತವಾಗಿದೆ. ಇವರಲ್ಲಿ 9 ಇಂಚಿನ ಗಣಪನಿಂದ 10 ಅಡಿ ಎತ್ತರದ ಗಣಪ ತಯಾರಾಗುತ್ತಾನೆ.

ಗಣೇಶೋತ್ಸವ ಬರುತ್ತಿದ್ದಂತೆ ಈ ಮನೆಮಂದಿಯೆಲ್ಲಾ ಗಣಪನ ಮೂರ್ತಿ ಮಾಡುವ ಕಾಯಕದಲ್ಲಿ ನಿರತರಾಗುತ್ತಾರೆ. ವಿಶೇಷವೆಂದರೆ ಇವರ ಗಣಪನಿಗೆ ಅಮೇರಿಕಾದಲ್ಲೂ ಬೇಡಿಕೆಯಿದೆ. ಈಗಾಗಲೇ ಇವರ ಮನೆಯಲ್ಲಿ ತಯಾರಾದ ಈ ಗಣಪ ವಿಮಾನ ಅಮೆರಿಕಾದ ಕ್ಯಾಲಿಫೋರ್ನಿಯಾವರೆಗೂ ತಲುಪಿದೆ.

ಮೋಹನ್ ರಾವ್ ಅವರು ಗತಿಸಿದ ಬಳಿಕ ನಾಲ್ಕು ತಲೆಮಾರುಗಳಿಂದ ಮೋಹನ್ ರಾವ್ ರವರು ತೋರಿದ ದಾರಿಯಲ್ಲಿ ನಡೆಯುತ್ತಿದ್ದಾರೆ ಈ ಕುಟುಂಬ. ಸಂಪೂರ್ಣ ಕುಟುಂಬ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿ ರಚನೆ ಮಾಡುತ್ತಿದೆ. ಕುಟುಂಬದಲ್ಲಿ ಕೆಲವರು ದೊಡ್ಡ ಹುದ್ದೆಯಲ್ಲಿದ್ದರೂ, ಒಂದು ತಿಂಗಳು ರಜೆ ಹಾಕಿ ಗಣಪತಿ ಮೂರ್ತಿ ತಯಾರು ಮಾಡುತ್ತಾರೆ. ಈ ಬಾರಿ ಬರೋಬ್ಬರಿ 260 ರಷ್ಟು ಗಣೇಶಮೂರ್ತಿಯನ್ನ ತಯಾರಿಸಿದೆ.

ಬರೀ ಆವೆಮಣ್ಣು, ಬೈಹುಲ್ಲು, ಪರಿಸರ ಪೂರಕ ಬಣ್ಣ ಬಳಸಿ ಮೂರ್ತಿ ರಚನೆಯಾಗಿದೆ. ಸುಮಾರು 2,500 ಹಂಚಿಗಾಗುವಷ್ಟು ಆವೆಮಣ್ಣಿನಲ್ಲಿ ಗಣಪ ತಯಾರಾಗಿದ್ದಾನೆ. ಮಂಗಳೂರು ನಗರದ ಆಸುಪಾಸಿನಲ್ಲಿ ಕೂರಿಸುವ ಪ್ರಖ್ಯಾತ ಸಾರ್ವಜನಿಕ ಗಣಪನ ಮೂರ್ತಿಯನ್ನು ಈ ಕುಟುಂಬವೇ ತಯಾರಿಸುತ್ತದೆ. ಅಲ್ಲದೆ ಮನೆಮನೆಯಲ್ಲಿ ಕೂರಿಸುವ ಸುಮಾರು 200ಕ್ಕಿಂತಲೂ ಅಧಿಕ ಸಾಂಪ್ರದಾಯಿಕ ಗಣಪನನ್ನು ತಯಾರಿಸುತ್ತಾರೆ.

ಆಧುನಿಕ ಕಾಲಘಟ್ಟದಲ್ಲೂ ತಲೆಮಾರುಗಳಿಂದ ಕುಟುಂಬವೊಂದು ಇಂತಹ ಕಾರ್ಯದಲ್ಲಿ ತೊಡಗಿರುವುದು ವಿಶೇಷವೇ ಸರಿ. ಗಣಪತಿ ಮೂರ್ತಿಯನ್ನು ಈ ಕುಟಂಬ ಗಣೇಶ ಚತುರ್ಥಿ ಗೆ ಎರಡು ತಿಂಗಳು ಇರುವಾಗಲೇ ತಯಾರಿಸಲು ಆರಂಭಿಸುತ್ತದೆ. ಗಣಪತಿಯ ಜನ್ಮ ನಕ್ಷತ್ರ ವಾದ ಚಿತ್ರಾ ನಕ್ಷತ್ರದಂದು ಮೂಹೂರ್ತ ಮಾಡುತ್ತಾರೆ. ಬಳಿಕ ಆವೆ ಮಣ್ಣನ್ನು ಮೂಡಬಿದಿರೆ ಮತ್ತು ಉತ್ತರ ಕನ್ನಡದಿಂದ ತಂದು ಪ್ರಕಿಯೆ ಆರಂಭಿಸುತ್ತಾರೆ.

ಕೈಯಿಂದಲೇ ಗಣಪತಿಯ ಮೂರ್ತಿ ರಚಿಸಲಾಗುತ್ತದೆ. ಸಾಂಪ್ರದಾಯಿಕ ಬದ್ಧವಾಗಿ ಮಾಡುವ ಗಣಪತಿ ಉತ್ಸವಕ್ಕೆ ಮಾತ್ರ ಗಣಪತಿಯನ್ನು ನೀಡುತ್ತಾರೆ. ಮಂಗಳೂರಿನ ಅತೀ ಪ್ರಸಿದ್ಧ ಸಂಘನಿಕೇತನ ಗಣಪತಿ, ಹಿಂದೂ ಯುವಸೇನೆ ಗಣಪತಿ, ಪದವಿನಂಗಡಿ ಗಣಪತಿ ಸೇರಿದಂತೆ ಹಲವು ಪ್ರಸಿದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಕುಟುಂಬದ ಗಣಪತಿಯೇ ಪೂಜಿತವಾಗೋದು ವಿಶೇಷ

ಗಣಪತಿಗೆ ಈ ಕುಟುಂಬ ದುಡ್ಡು ಕಟ್ಟೋದಿಲ್ಲ. ಎಷ್ಟೇ ದೊಡ್ಡ ಮೂರ್ತಿಯಾದರೂ ದರ ನಿಗದಿ ಮಾಡುವುದಿಲ್ಲ. ಗಣಪತಿ ಮೂರ್ತಿ ಬೇಕಾದವರು ಆರಂಭದಲ್ಲೇ ನೀಡುವ ವೀಳ್ಯದೆಲೆ ಬೂಳ್ಯದಲ್ಲಿ ನೀಡುವ ಹಣವನ್ನು ಮಾತ್ರ ಕುಟುಂಬ ಸ್ವೀಕಾರ ಮಾಡುತ್ತಾರೆ. ಅಲ್ಲದೆ ಕಳೆದ ಐದು ವರ್ಷದಿಂದ ಅಮೇರಿಕಾದ ಕ್ಯಾಲಿಪೋರ್ನಿಯಾದ ಒಂದು ಕುಟುಂಬ ಮಂಗಳೂರಿನ ಗಣಪತಿಯನ್ನೇ ತರಿಸಿಕೊಳ್ಳುತ್ತಾರೆ.

 

Related posts

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಸಂಭವನೀಯ ವೇಳಾಪಟ್ಟಿ: ವಿಷಯವಾರು ಅಂತರ ಹೆಚ್ಚಿಸುವಂತೆ ಆಗ್ರಹ.

ಬೆಳಗಾವಿಯ ದೊಡ್ಡ ಸೌಧದಲ್ಲಿ ಅಧಿವೇಶನ ನಡೆಯಲಿಲ್ಲ ಎಂದರೆ ಏನು ಪ್ರಯೋಜನ- ಮಾಜಿ ಸಿಎಂ ಬಿಎಸ್ ವೈ.

ಇಂದು ಸಹ ತಮಿಳುನಾಡಿಗೆ ಹರಿದ ಕಾವೇರಿ ನೀರು: ರೈತರಲ್ಲಿ ಆತಂಕ.